ಹೊಸಪೇಟೆ: 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿಜಯನಗರ ಜಿಲ್ಲೆಯಲ್ಲಿ (Vijayanagara News) ಬರ ಪರಿಸ್ಥಿತಿಯಿಂದ ಉಂಟಾದ ಬೆಳೆಹಾನಿಗೆ ಎಸ್.ಡಿ.ಆರ್.ಎಫ್ ಹಾಗೂ ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಅರ್ಹತೆಯ ಅನುಗುಣವಾಗಿ ಈಗಾಗಲೇ ಅರ್ಹ ರೈತರಿಗೆ ಗರಿಷ್ಟ 2000 ರೂ. ವರೆಗೆ ಪಾವತಿಸಿರುವ ಬೆಳೆಹಾನಿ ಪರಿಹಾರ ಮೊತ್ತವನ್ನು ಪರಿಗಣನೆಗೆ ತೆಗೆದುಕೊಂಡು ಅರ್ಹತೆಯಂತೆ ಇನ್ನುಳಿದ ಬಾಕಿ ಬೆಳೆಹಾನಿ ಪರಿಹಾರ ಮೊತ್ತವನ್ನು ಪಾವತಿಸಲು ಅನುದಾನ ಬಿಡುಗಡೆ ಮಾಡಿ, ಸರ್ಕಾರದಿಂದ ಆದೇಶಿಸಲಾಗಿದೆ.
ಅದರಂತೆ ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿಯ ಆಧಾರದ ಮೇಲೆ ಪ್ರೂಟ್ಸ್ ಐಡಿ ಹೊಂದಿರುವ ರೈತರಿಗೆ ಪರಿಹಾರ ತಂತ್ರಾಂಶದ ಮೂಲಕ ಹಂತಹಂತವಾಗಿ ಪರಿಹಾರ ವಿತರಣೆ ಮಾಡಲಾಗುತ್ತಿದ್ದು, ವಿಜಯನಗರ ಜಿಲ್ಲೆಯಲ್ಲಿ ಈವರೆಗೂ ಹತ್ತು ಹಂತಗಳಲ್ಲಿ ಒಟ್ಟು 1,09,543 ರೈತರಿಗೆ 130,08,07,810 ರೂ. ಇನ್ಪುಟ್ ಸಬ್ಸಿಡಿಯನ್ನು ಜಮಾ ಮಾಡಲು ಅನುಮೋದನೆ ನೀಡಲಾಗಿದ್ದು, ಸರ್ಕಾರದಿಂದ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಧನವನ್ನು ಜಮಾ ಮಾಡಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ICMR Dietary Guidelines: ನಿಮ್ಮ ಆರೋಗ್ಯ ಚೆನ್ನಾಗಿರಬೇಕೆ? ತಜ್ಞ ಸಮಿತಿಯ ಈ ಆಹಾರ ಸಲಹೆ ಪಾಲಿಸಿ
ಬಾಕಿ ಉಳಿದ ಅರ್ಹ ರೈತರಿಗೆ ಹಂತ-ಹಂತವಾಗಿ ಪರಿಹಾರ ಪಾವತಿಸುವ ಕಾರ್ಯವು ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ಜಮಾ ಮಾಡಲಾಗುವುದು. ಈಗಾಗಲೇ ಅನುಮೋದನೆ ನೀಡಿರುವ ರೈತರ ಮಾಹಿತಿಯ ಪಟ್ಟಿಯನ್ನು ನಾಡ ಕಚೇರಿಗಳು, ಗ್ರಾಮ ಪಂಚಾಯಿತಿಗಳು ಹಾಗೂ ರೈತ ಸಂಪರ್ಕ ಕೇಂದ್ರಗಳು ಹಾಗೂ ತಹಸೀಲ್ದಾರರ ಕಚೇರಿಯ ಸೂಚನಾ ಫಲಕಗಳಲ್ಲಿ ಪ್ರಚುರಪಡಿಸಲಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಹೊಸಪೇಟೆ ತಾಲೂಕು ಕಚೇರಿ, ಹಗರಿಬೊಮ್ಮನಹಳ್ಳಿ ತಾಲೂಕು ಕಚೇರಿ, ಕೂಡ್ಲಿಗಿ ತಾಲೂಕು ಕಚೇರಿ, ಕೊಟ್ಟೂರು ತಾಲೂಕು ಕಚೇರಿ, ಹಡಗಲಿ ತಾಲೂಕು ಕಚೇರಿ ಮತ್ತು ಹರಪನಹಳ್ಳಿ ತಾಲೂಕು ಕಚೇರಿಗಳಲ್ಲಿನ ಸಹಾಯವಾಣಿಗಳಿಗೆ ಕಚೇರಿ ಸಮಯದಲ್ಲಿ ರೈತರು ಫ್ರೂಟ್ಸ್ ಐಡಿ ಸಂಖ್ಯೆಯೊಂದಿಗೆ ಸಂಬಂಧಪಟ್ಟ ತಾಲೂಕು ಕಚೇರಿಯ ಸಹಾಯವಾಣಿಗೆ ಭೇಟಿ ನೀಡಿ ಬೆಳೆ ಪರಿಹಾರ ಮಾಹಿತಿ ಪಡೆಯಬಹುದಾಗಿದೆ ಎಂದು ಡಿಸಿ ತಿಳಿಸಿದ್ದಾರೆ.
ಇದನ್ನೂ ಓದಿ: Dwarka Tour: ದ್ವಾರಕೆಗೆ ಹೋದಾಗ ಏನೇನು ನೋಡಬಹುದು?
ತಾಲೂಕುವಾರು ಮಾಹಿತಿ
ಹೊಸಪೇಟೆ ತಾಲೂಕಿನ 3,880 ರೈತರಿಗೆ 3,45,51,946 ರೂ., ಹಗರಿಬೊಮ್ಮನಹಳ್ಳಿ ತಾಲೂಕಿನ 15,813 ರೈತರಿಗೆ 19,24,12,902 ರೂ., ಕೂಡ್ಲಿಗಿ ತಾಲೂಕಿನ 19,010 ರೈತರಿಗೆ 23,12,23,100 ರೂ., ಕೊಟ್ಟೂರು ತಾಲೂಕಿನ 12,833 ರೈತರಿಗೆ 14,04,56,255 ರೂ., ಹಡಗಲಿ ತಾಲೂಕಿನ 20,925 ರೈತರಿಗೆ 26,93,01,607 ರೂ. ಮತ್ತು ಹರಪನಹಳ್ಳಿ ತಾಲೂಕಿನ 37,082 ರೈತರಿಗೆ 42,28,62,000 ರೂ. ನಂತೆ ವಿಜಯನಗರ ಜಿಲ್ಲೆಯಲ್ಲಿ ತಾಲೂಕುವಾರು ಬೆಳೆ ಪರಿಹಾರ ಮೊತ್ತ ಸಂದಾಯವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.