ಹೊಸಪೇಟೆ: ಕನ್ನಡ ನಾಡು ನುಡಿಗಾಗಿ ಜನ್ಮ ತಾಳಿದ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ (Hampi Kannada University) ಜೆಸ್ಕಾಂ (Gescom) ಕರೆಂಟ್ ಶಾಕ್ ನೀಡಿದೆ! ವಿವಿಯು ಬರೋಬ್ಬರಿ 97.80 ಲಕ್ಷ ರೂ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಜೆಸ್ಕಾಂ ಖಡಕ್ ನೋಟಿಸ್ (Notice) ನೀಡಿದೆ.
ಈಗಾಗಲೇ ಆರ್ಥಿಕ ಸಂಕಷ್ಟದಿಂದ ನಲುಗುತ್ತಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯವು ಜೆಸ್ಕಾಂಗೆ ಕಟ್ಟಬೇಕಾದ ಬಿಲ್ ಅನ್ನು ಬಾಕಿ ಉಳಿಸಿಕೊಂಡಿರುವುದರಿಂದ ಇಡೀ ವಿಶ್ವ ವಿದ್ಯಾಲಯಕ್ಕೆ ವಿದ್ಯುತ್ ಸಂಪರ್ಕ ಕಡಿತ ಮಾಡುವುದಾಗಿ ನೋಟಿಸ್ ನೀಡಿದ್ದು, ಇದು ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.
ಇದನ್ನೂ ಓದಿ: CM Siddaramaiah : ಅಸಮಾನತೆ ತೊಲಗಿದಾಗ ಮಾತ್ರ ಸ್ವಾತಂತ್ರ್ಯಕ್ಕೆ ಬೆಲೆ ಎಂದ ಸಿಎಂ ಸಿದ್ದರಾಮಯ್ಯ
ಕನ್ನಡ ವಿವಿಯ ಕರೆಂಟ್ ಬಿಲ್ 97,80,178 ರೂ. ಬಾಕಿ ಇದೆ. ಬಹುದಿನಗಳಿಂದ ಬಿಲ್ ಬಾಕಿ ಇರುವುದರಿಂದ ಮೇಲಧಿಕಾರಿಗಳು ಕಂದಾಯ ಮಾಸಿಕ ಸಭೆಯಲ್ಲಿ ಆಕ್ಷೇಪಣೆ ವ್ಯಕ್ತಪಡಿಸಿ ವಿದ್ಯುತ್ ಸರಬರಾಜು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಬಾಕಿ ಹಣವನ್ನು ತಕ್ಷಣ ಪಾವತಿಸದಿದ್ದಲ್ಲಿ ವಿದ್ಯುತ್ ಸರಬರಾಜು ನಿಲ್ಲಿಸಲಾಗುವುದು ಎಂದು ಜೆಸ್ಕಾಂನ ಕಮಲಾಪುರ ಕಾ ಮತ್ತು ಪಾ ಶಾಖೆಯ ಸಹಾಯಕ ಎಂಜಿನಿಯರ್ ವಿವಿಯ ಕುಲಸಚಿವರಿಗೆ ಡಿ.21 ರಂದು ನೋಟಿಸ್ ನೀಡಿದ್ದಾರೆ.