ವಿಜಯನಗರ: ಬೇಸಿಗೆ (Summer) ಸಮಯದಲ್ಲಿ ಮೂಕ ಪ್ರಾಣಿಗಳಿಗೆ ನೀರುಣಿಸುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್ ದಿವಾಕರ್ (Vijayanagara News) ಹೇಳಿದರು.
ತಾಲೂಕಿನ ದೇವಲಾಪುರ ಗ್ರಾಮದ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಒಂದೂವರೆ ಎಕರೆ ಪ್ರದೇಶದಲ್ಲಿ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯುಕೇಷನಲ್ ಟ್ರಸ್ಟ್ ವತಿಯಿಂದ ಪ್ರಾಣಿ ಮತ್ತು ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದನ್ನು ವೀಕ್ಷಿಸಿ, ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮುಂಗಾರು, ಹಿಂಗಾರು ಮಳೆ ಕೈಕೊಟ್ಟ ಹಿನ್ನಲೆಯಲ್ಲಿ ಈ ವರ್ಷ ತುಂಗಭದ್ರಾ ಜಲಾಶಯ ಒಳಗೊಂಡಂತೆ ಕೆರೆ-ಕಟ್ಟೆಗಳು ಭರ್ತಿಯಾಗದೇ ಎಲ್ಲಾ ಖಾಲಿಯಾಗಿವೆ, ಮನುಷ್ಯರಿಗೂ ಸಹ ಕುಡಿಯುವ ನೀರಿಗೆ ಬರ ಉಂಟಾಗಿದ್ದು, ಟ್ಯಾಂಕರ್‌ಗಳ ಮೂಲಕ ನೀರನ್ನು ಒದಗಿಸಲಾಗುತ್ತಿದೆ ಎಂದರು.
ಇದನ್ನೂ ಓದಿ: Karnataka Weather : ಕಲಬುರಗಿ ಸೇರಿ 3 ಜಿಲ್ಲೆಗಳಿಗೆ ತಟ್ಟಿದ ಬೇಸಿಗೆ ಬಿಸಿ
ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಳವಾಗುತ್ತಿದೆ. ಇಂತಹ ಸಂದರ್ಭದಲ್ಲಿ ದೇವಲಾಪುರ ಗ್ರಾಮಸ್ಥರು ಮತ್ತು ಗ್ರಾ.ಪಂ ಸದಸ್ಯರು ಸೇರಿ ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ಅದರಲ್ಲಿ ಕಳೆದ 15 ದಿನಗಳಿಂದ ನಿರಂತರವಾಗಿ ಟ್ಯಾಂಕರ್ ಮೂಲಕ ನಿತ್ಯ ನೀರುಣಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಪ್ರತಿಯೊಬ್ಬರು ಇಂತಹ ಸಾಮಾಜಿಕ ಕೆಲಸಗಳನ್ನು ಮಾಡುವ ಮೂಲಕ ಮಾನವೀಯತೆ ಮೆರೆಯಬೇಕು ಎಂದು ಹೇಳಿದರು.
ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯುಕೇಷನಲ್ ಟ್ರಸ್ಟ್‌ನ ಕಾರ್ಯದರ್ಶಿ ಅಶೋಕ ಮಾತನಾಡಿ, ಕಳೆದ 15 ದಿನಗಳಿಂದ ಬೆಳಿಗ್ಗೆ ಮತ್ತು ಸಂಜೆ ದಿನಕ್ಕೆ ಎರಡು ಬಾರಿ ಪಕ್ಷಿಗಳಿಗೆ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ತ್ಯಾಜ್ಯವಾಗಿ ಬಿಸಾಡಿದ ಪ್ಲಾಸ್ಟಿಕ್ ಡಬ್ಬಗಳನ್ನು ಮರು ಬಳಕೆ ಮಾಡಿ ಮರಗಳಿಗೆ ಕಟ್ಟಿ ನೀರು ಹಾಕಲಾಗುತ್ತದೆ ಜತೆಗೆ ಕರಡಿ, ಚಿರತೆ ಸೇರಿದಂತೆ ಇತರೆ ಪ್ರಾಣಿಗಳಿಗೆ ಅನುಕೂಲವಾಗುವುದಕ್ಕೆ ನೀರಿನ ಗಚ್ಚು ಮೂಲಕ ನೀರನ್ನು ಹಾಕಲಾಗುತ್ತದೆ. ದೇವಲಾಪುರ ಗ್ರಾಮಸ್ಥರು ಮತ್ತು ಗ್ರಾ.ಪಂ ಸದಸ್ಯರು ನಮ್ಮ ಸಂಸ್ಥೆಗೆ ಕೈ ಜೋಡಿಸಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: Virat Kohli : ರಿಂಕು ಸಿಂಗ್ಗೆ ಬ್ಯಾಟ್ ಕೊಟ್ಟು ಅಭಿನಂದಿಸಿದ ಕೊಹ್ಲಿ
ಈ ಸಂದರ್ಭದಲ್ಲಿ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯುಕೇಷನಲ್ ಟ್ರಸ್ಟ್‌ನ ಅಧ್ಯಕ್ಷ ಭೀಮರಾಜ, ಹೊಸಪೇಟೆ ತಹಸೀಲ್ದಾರ್ ಶೃತಿ, ಮರಿಯಮ್ಮನಹಳ್ಳಿ ಉಪ ತಹಸೀಲ್ದಾರ್ ನಾಗರಾಜ್, ಕಂದಾಯ ನಿರೀಕ್ಷಕ ಅಂದಾನಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.