ಹೊಸಪೇಟೆ: ದೇಶದ ಅಭಿವೃದ್ಧಿಗೆ ಭ್ರಷ್ಟಾಚಾರ (Corruption) ಮಾರಕವಾಗಿದ್ದು, ಇದರ ನಿರ್ಮೂಲನೆಗೆ ಅಧಿಕಾರಿಗಳು ಬದ್ಧರಾಗಬೇಕು ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.
ವಿಜಯನಗರ ಜಿಲ್ಲಾಡಳಿತ ಹಾಗೂ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಸಹಯೋಗದಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಭ್ರಷ್ಟಾಚಾರ ನಿರ್ಮೂಲನೆಗಾಗಿ ಎಲ್ಲಾ ಇಲಾಖೆಗಳಲ್ಲಿ ವಿಜಿಲೆನ್ಸ್ ರಚಿಸಲು ಚಿಂತನೆ ಮಾಡಲಾಗುತ್ತಿದೆ. ಈ ದಿಸೆಯಲ್ಲಿ ಭ್ರಷ್ಟಾಚಾರ ತಡೆಗೆ ನಮ್ಮ ರಾಜ್ಯದ ಬಲಿಷ್ಠ ಲೋಕಾಯುಕ್ತವು ದೇಶದ ಇತರೆ ರಾಜ್ಯಗಳಿಗೆ ಮಾದರಿಯಾಗಿದೆ. ಅದೇ ರೀತಿ ಪೊಲೀಸ್ ಇಲಾಖೆಯೂ ಸಹ ಮಾದರಿಯಾಗಿದೆ.
ಇದನ್ನೂ ಓದಿ: Koppala News: ಕೊಪ್ಪಳ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದ ನೂತನ ಕಟ್ಟಡಕ್ಕೆ ಭೂಮಿಪೂಜೆ
ಭ್ರಷ್ಟಾಚಾರದಿಂದ ದೇಶದ ಆರ್ಥಿಕತೆ, ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಈ ಹಿನ್ನಲೆಯಲ್ಲಿ ಭ್ರಷ್ಟಾಚಾರದ ನಿರ್ಮೂಲನೆ ಅತ್ಯವಶ್ಯಕವಾಗಿದ್ದು, ಪ್ರತಿಯೊಬ್ಬ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿ, ದೇಶ, ರಾಜ್ಯ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿಬಾಬು ಬಿ.ಎಲ್. ಮಾತನಾಡಿ, ಭ್ರಷ್ಟಾಚಾರ ವಿರುದ್ಧ ಜಾಗೃತಿ ಕಾರ್ಯಕ್ರಮಗಳು ಆಗಿಂದಾಗ್ಗೆ ನಡೆಯಬೇಕು. ಇದರಿಂದ ಹೆಚ್ಚಿನ ಅರಿವು ಮೂಡಿಸಿದಂತಾಗುತ್ತದೆ ಎಂದು ತಿಳಿಸಿದರು.
ಕರ್ನಾಟಕ ಲೋಕಾಯುಕ್ತ ಬಳ್ಳಾರಿ ಪೊಲೀಸ್ ಅಧೀಕ್ಷಕ ಎಂ.ಎನ್. ಶಶಿಧರ ಮಾತನಾಡಿ, ಪ್ರತಿಯೊಬ್ಬರು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಮಾತ್ರ ದೇಶ ಅಭಿವೃದ್ಧಿ ಸಾಧ್ಯ. ಸಾರ್ವಜನಿಕರಿಗೆ ತ್ವರಿತವಾಗಿ ಸೇವೆಗಳು ಸಿಗಬೇಕು, ಈ ದಿಶೆಯಲ್ಲಿ ಅಧಿಕಾರಿ ವರ್ಗದವರು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು. ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ‘ಭ್ರಷ್ಟಾಚಾರ ವಿರೋಧಿಸಿ; ರಾಷ್ಟ್ರಕ್ಕೆ ಬದ್ಧರಾಗಿ’ ಎಂಬ ಘೋಷ ವಾಕ್ಯದೊಂದಿಗೆ ಜಾಗೃತಿ ಅರಿವು ಸಪ್ತಾಹ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುವ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಇದನ್ನೂ ಓದಿ: IND vs SA: ಅಜೇಯ ಭಾರತಕ್ಕೆ ಬಲಿಷ್ಠ ದಕ್ಷಿಣ ಆಫ್ರಿಕಾ ಸವಾಲು
ಈ ಸಂದರ್ಭದಲ್ಲಿ ವಿಜಯನಗರ (ಹೊಸಪೇಟೆ) ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ರಾಜೇಶ್.ಎಸ್.ಎಲ್. ಹಾಗೂ ಸುರೇಶಬಾಬು ಆರ್.ಬಿ. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.