ಹೊಸಪೇಟೆ: ಅನೇಕ ಉತ್ಕೃಷ್ಟ ಗ್ರಂಥಗಳನ್ನು ಜನರಿಗೆ ತಲುಪಿಸುವಂತಹ ಕೀರ್ತಿ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ (Hampi Kannada University) ಸಲ್ಲುತ್ತದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಕೆ.ರವಿ ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ನುಡಿಹಬ್ಬ-32ರ ಪ್ರಯುಕ್ತ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದಿಂದ ಮಂಗಳವಾರ ಮಂಟಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 51 ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ರಾಷ್ಟ್ರದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಹೊಸ ಹೊಸ ಪ್ರಯೋಗಗಳನ್ನು ಮಾಡಿದ ಕೀರ್ತಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಭಾಜನವಾಗಿದೆ. ಕನ್ನಡ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳು, ಸಂಶೋಧನೆಗಳು ನೋಡಿದರೆ ಇದು ಕೇವಲ ಪದವಿ, ಸ್ನಾತಕೋತ್ತರ ಪದವಿಯನ್ನು ನೀಡುವ ಅಥವಾ ಪಾಠ ಬೋಧಿಸುವ ವಿವಿಯಲ್ಲ. ದೇಶದಲ್ಲೇ 1600 ಪುಸ್ತಕಗಳನ್ನು ಪ್ರಕಟಣೆ ಮಾಡಿರುವ ಪ್ರಸಾರಾಂಗ ಎಲ್ಲಾದರೂ ಇದೆ ಎಂದರೆ ಅದು ಕನ್ನಡ ವಿವಿಯಲ್ಲಿದೆ. ಇದರ ಜತೆಗೆ ಭಾಷೆ, ಹಸ್ತಪ್ರತಿ, ಲಿಪಿಗಳು, ಬುಡಕಟ್ಟು ಅಧ್ಯಯನ, ಸಾಮಾಜಿಕ ಕ್ಷೇತ್ರ, ಸಂಸ್ಕೃತಿ ಹಾಗೂ ಸಂಸ್ಕೃತಿಗೆ ಸಂಬಂಧಿಸಿದ ಅನೇಕ ವಿಷಯಗಳ ಬಗ್ಗೆ ಸಂಶೋಧನೆಗಳನ್ನು ನೀಡುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: NEET PG 2024: ನೀಟ್ ಪಿಜಿ ಪರೀಕ್ಷೆ ಮುಂದೂಡಿಕೆ; ಹೊಸ ದಿನಾಂಕ ಘೋಷಣೆ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ ಪರಮಶಿವಮೂರ್ತಿ ಮಾತನಾಡಿ, ಪುಸ್ತಕದ ಬಿಡುಗಡೆ ಮಾಡುವುದು ಒಂದು ಪುಣ್ಯದ ಕೆಲಸವಾಗಿದೆ. ನಮ್ಮ ವಿವಿಯ ಅಧ್ಯಾಪಕರನ್ನು ಒಳಗೊಂಡಂತೆ ನಾಡಿನ ವಿವಿಧ ವಿದ್ವಾಂಸರು ರಚಿಸಿದ 51 ಅಮೂಲ್ಯ ಪುಸ್ತಕಗಳನ್ನು ಈ ದಿನ ಬಿಡುಗಡೆ ಮಾಡಲಾಗಿದೆ ಎಂದರು.
ಧಾರವಾಡದ ಹಿರಿಯ ಇತಿಹಾಸತಜ್ಞ ಹಾಗೂ ಸಂಸ್ಕೃತಿ ಚಿಂತಕ ಪ್ರೊ. ಲಕ್ಷ್ಮಣ್ ತೆಲಗಾವಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಮಾತನಾಡಿದರು.
ಗಂಗಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಜಾಜಿ ದೇವೇಂದ್ರಪ್ಪ ಹಾಗೂ ಕಂಪ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಜೆ.ಕೃಷ್ಣ ಅವರು ಬಿಡುಗಡೆಯಾದ ಪುಸ್ತಕಗಳ ಬಗ್ಗೆ ಮಾತನಾಡಿದರು.
ಇದನ್ನೂ ಓದಿ: NEP 2020: ರಾಜ್ಯದಲ್ಲಿ ಎನ್‌ಇಪಿ ಜಾರಿಗೊಳಿಸಿ: ಶಿಕ್ಷಣ ಸಂಸ್ಥೆಗಳ ನೌಕರರ ಸಂಘ ಒತ್ತಾಯ
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಗೂ ನಾಡಗೀತೆಯನ್ನು ಪ್ರಸ್ತುತ ಪಡಿಸಿದವರು. ಪ್ರಸಾರಾಂಗ ವಿಭಾಗದ ನಿರ್ದೇಶಕಿ ಡಾ. ಶೈಲಜ ಇಂ. ಹಿರೇಮಠ ಸ್ವಾಗತಿಸಿದರು. ಪ್ರಸಾರಾಂಗ ವಿಭಾಗದ ಸಹಾಯಕ ಕುಲಸಚಿವ ಎಂ.ಎಂ.ಶಿವಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.
ಇದನ್ನೂ ಓದಿ: Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಬೆಂಗಳೂರಲ್ಲಿ ತುಂತುರು ಮಳೆಯಾಟ
ಸಮಾರಂಭದಲ್ಲಿ ಹಲವು ಗಣ್ಯರು, ವಿವಿಯ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಅಧಿಕಾರಿಗಳು ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.