Site icon Vistara News

Vijayanagara News: ವಿಜಯನಗರ ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ; ಸಂಕಷ್ಟ ತೋಡಿಕೊಂಡ ರೈತರು

Central drought study team visits Vijayanagara district inspection

ಹೊಸಪೇಟೆ: ವಿಜಯನಗರ ಜಿಲ್ಲೆಯ (Vijayanagara District) ಎಲ್ಲ ತಾಲೂಕುಗಳು ಬರಪೀಡಿತ ಪ್ರದೇಶ ಎಂದು ಘೋಷಿಸಲಾದ ಹಿನ್ನೆಲೆಯಲ್ಲಿ ಕೇಂದ್ರ ಬರ ಅಧ್ಯಯನದ ಎರಡನೇ ತಂಡ (Central Drought Study Team) ಶನಿವಾರ ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ, ಪರಿಶೀಲನೆ ನಡೆಸಿತು.

ಕೇಂದ್ರ ಕುಡಿಯುವ ನೀರು ಹಾಗು ಸ್ವಚ್ಛತಾ ಸಚಿವಾಲಯದ ಹೆಚ್ಚುವರಿ ಸಲಹೆಗಾರ ಡಿ. ರಾಜೇಶ್ವರ ರಾವ್, ಪಶುಸಂಗೋಪನೆ ಇಲಾಖೆ ‌ನಿರ್ದೇಶಕ ವಿಜಯ್ ಥಾಕರೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತ ಮೋತಿರಾವ್ ಹಾಗೂ ರಾಜ್ಯದ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕ ಕರೀಗೌಡ ಅವರ ನೇತೃತ್ವದ ತಂಡ ಶನಿವಾರ ಹೊಸಪೇಟೆಯ ನಂದಿಬಂಡಿ ಗ್ರಾಮಕ್ಕೆ ಮೊದಲು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂದಿಬಂಡಿ ಗ್ರಾಮದ ಹರಿಜನ ಮರಿಯವ್ವ ಅವರು 3.78 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿ ನಷ್ಟ ಅನುಭವಿಸಿದ್ದರು. ತಂಡದ ಅಧಿಕಾರಿಗಳು ಬೆಳೆ ನಷ್ಟ ಹೊಂದಿದ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು. ಸುತ್ತಮುತ್ತಲಿನ ಭಾಗದಲ್ಲಿ ಇತರ ರೈತರು ಬಿತ್ತಿದ ಬೆಳೆಯೂ ನಷ್ಟವಾಗಿದ್ದು, ಈ ಬೆಳೆಗಳನ್ನು ಕೇಂದ್ರ ತಂಡಕ್ಕೆ ತೋರಿಸಲಾಯಿತು.

ಇದನ್ನೂ ಓದಿ: Karnataka Weather : ನಾಳೆ ಇಲ್ಲೆಲ್ಲ ಸೂರ್ಯ ಮರೆಯಾಗಿ ಧರೆಗೆ ಅಪ್ಪಳಿಸುವ ಮಳೆ

ಈ ಭಾಗದಲ್ಲಿ ಸುರಿದ ಮಳೆ ಪ್ರಮಾಣ, ಉಂಟಾದ ಬೆಳೆಗಳ ನಷ್ಟದ ಸ್ಥಿತಿಗತಿಗಳ ಬಗ್ಗೆ ಜಿಲ್ಲಾಧಿಕಾರಿ ದಿವಾಕರ ಎಂ.ಎಸ್. ಅವರು ಸಹ ಪೂರಕ ಮಾಹಿತಿ ನೀಡಿದರು.

ಹೆಚ್ಚು ಹಾನಿ

ಈ ವೇಳೆ ಮಾತನಾಡಿದ ಕೇಂದ್ರ ತಂಡದ ಅಧಿಕಾರಿಗಳು, ನಾಲ್ಕು ಜಿಲ್ಲೆಗಳಿಗೆ ಭೇಟಿ ನೀಡಲಾಗುತ್ತದೆ. ಪೂರ್ವದಲ್ಲಿ ಭೇಟಿ ನೀಡಿದ 2 ಜಿಲ್ಲೆಗಿಂತಲೂ ಹೆಚ್ಚಿನ ಹಾನಿ ಈ ಭಾಗದಲ್ಲಿ ಉಂಟಾಗಿದೆ. ಅಧಿಕಾರಿಗಳಿಂದ, ರೈತರಿಂದ ಪಡೆದ ಮಾಹಿತಿ ಜತೆಗೆ ರಾಜ್ಯ ಸರ್ಕಾರದ ಬೇಡಿಕೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದರು.

ವಿಜಯನಗರ ಜಿಲ್ಲೆಯ ವಿವಿಧೆಡೆ ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳು ಬೆಳೆ ನಷ್ಟದ ಪರಿಶೀಲನೆ ನಡೆಸಿದರು.

ವಿಜಯನಗರ ಜಿಲ್ಲೆಯಲ್ಲಿ ಈ ಬಾರಿ 3.03 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 2.69 ಲಕ್ಷ ಹೆಕ್ಟೇರ್ ಕೃಷಿ ಮತ್ತು 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಒಟ್ಟಾರೆ ಕೃಷಿ ಭೂಮಿಯಲ್ಲಿ ಶೇ.65 ರಷ್ಟು ಭಾಗ ಬಿತ್ತನೆಯಾಗಿದ್ದ ಮೆಕ್ಕೆಜೋಳದ ಶೇ.95 ರಷ್ಟು ಹಾನಿಯಾಗಿದೆ. ಈ ಭಾಗ ಖುಷ್ಕಿ ಬೇಸಾಯ ಇರುವ ಕಾರಣದಿಂದ ಶೇಂಗಾ ಸೇರಿದಂತೆ ಇತರ ಬೆಳೆಗಳು ಹಾನಿಯಾಗಿದೆ. ತಂಡದ ಅಧಿಕಾರಿಗಳ ಜೊತೆ ಇದ್ದು, ಇಲ್ಲಿನ ಪರಿಸ್ಥಿತಿಯ ಒಟ್ಟಾರೆ ವರದಿಯನ್ನು ಮನವರಿಕೆ ಮಾಡಿಕೊಡಲಾಗುತ್ತದೆ ಎಂದರು.

ಇದನ್ನೂ ಓದಿ: ind vs aus : ವಿಶ್ವ ಕಪ್​ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸುವುದೇ ಭಾರತ?

ಸಂಕಷ್ಟ ತೋಡಿಕೊಂಡ ರೈತರು

ಬರದಿಂದ ನಷ್ಟ ಉಂಟಾದ ಪ್ರದೇಶಕ್ಕೆ ಭೇಟಿ ನೀಡಿದ ಕೇಂದ್ರ ತಂಡದ ಅಧಿಕಾರಿಗಳಿಗೆ ರೈತರು ತಾವು ಅನುಭವಿಸಿದ ಬೆಳೆ ನಷ್ಟದ ಕುರಿತು ಸಂಕಷ್ಟವನ್ನು ತೋಡಿಕೊಂಡರು. ನಾವು ಮಳೆಯನ್ನೇ ಆಶ್ರಯಿಸಿದ್ದೇವೆ, ಜಲಾಶಯವಿದ್ದರೂ ನೀರಿನ ಕೊರತೆ ಹೆಚ್ಚಿದೆ. ಕುಡಿಯುವ ನೀರಿನ ಕೊರತೆ ಸಹ ಹೆಚ್ಚಿದೆ ಎಂದು ಅಧಿಕಾರಿಗಳ ಬಳಿ ತಮ್ಮ ಸಮಸ್ಯೆ ಹಂಚಿಕೊಂಡರು.

ನಂದಿಬಂಡಿ ನಂತರ ಹಗರಿಬೊಮ್ಮನಹಳ್ಳಿ ತಾಲೂಕಿನ ನಾರಾಯಣದೇವರ ಕೆರೆ, ಹಂಪಾಪಟ್ಟಣ, ಆನೆಕಲ್ ತಾಂಡಾ, ಮಾದೂರು, ತಿಮ್ಮಾಪುರ ಹಾಗೂ ಈಚಲುಬೊಮ್ಮನಹಳ್ಳಿ ಗ್ರಾಮಕ್ಕೆ ತೆರಳಿ ಅಲ್ಲಿ ಉಂಟಾದ ಬೆಳೆ ನಷ್ಟದ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು.

ಇದನ್ನೂ ಓದಿ: Ind vs Aus : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ವೇಳೆ ಸೃಷ್ಟಿಯಾಗಬಲ್ಲ ದಾಖಲೆಗಳ ವಿವರ ಇಲ್ಲಿದೆ

ಕೇಂದ್ರ ತಂಡದ ಅಧಿಕಾರಿಗಳ ಜತೆ ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವ ಪ್ರಭು ಬಿ‌., ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ಸೇರಿದಂತೆ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version