ವಿಜಯನಗರ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಜಲಾಶಯಕ್ಕೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಗುರುವಾರ ಭೇಟಿ ನೀಡಿ, ಕ್ರಸ್ಟ್ ಗೇಟ್ ದುರಸ್ತಿ ಕಾರ್ಯಗಳ ಬಗ್ಗೆ (Vijayanagara News) ಪರಿಶೀಲಿಸಿದರು.
ಇತ್ತೀಚೆಗೆ ನಡೆದ ಕಾಮಗಾರಿಗಳಿಂದಾಗಿ ಹಾಳಾಗಿರುವಂತಹ ಗೇಟ್ ದುರಸ್ತಿಯಾದಲ್ಲಿ ಅನುಕೂಲವಾಗಲಿದೆ ಎಂದು ಇದೆ ವೇಳೆ ರೈತ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು. ಗೇಟ್ ದುರಸ್ತಿ ಕಾರ್ಯಕ್ಕೆ ಸಂಬಂಧಿಸಿದಂತೆ ಕೂಡಲೇ ಅಗತ್ಯ ಕ್ರಮವಹಿಸಬೇಕು ಎಂದು ನೀರಾವರಿ ಇಲಾಖಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇದನ್ನೂ ಓದಿ: Reliance Industries: ರಿಲಯನ್ಸ್ ಇಂಡಸ್ಟ್ರೀಸ್ ಮೊದಲ ತ್ರೈಮಾಸಿಕ ಫಲಿತಾಂಶ ಪ್ರಕಟ; 17,448 ಕೋಟಿ ರೂ. ಲಾಭ
ಬಳಿಕ ಜಿಲ್ಲಾಧಿಕಾರಿಗಳು ಚಿತ್ರಪಳ್ಳಿ ಕೆರೆಗೆ ಭೇಟಿ ನೀಡಿ, ಪರಿಶೀಲಿಸಿರು. ನಂತರ ಪಿಂಜಾರಹೆಗಡಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದರು. ಶಾಲೆಯ ತರಗತಿಗಳಿಗೆ ಭೇಟಿ ನೀಡಿ ಕಪ್ಪು ಹಲಗೆ ಮೇಲೆ ಬರೆಯುತ್ತ ಜೀವಶಾಸ್ತ್ರ ಪಾಠ ಮಾಡಿದರು. ಪಠ್ಯಕ್ಕೆ ಸಂಬಂದಿಸಿದಂತೆ ಮಕ್ಕಳಿಗೆ ಪ್ರಶ್ನೆಗಳನ್ನು ಕೇಳಿ ವಿದ್ಯಾಭ್ಯಾಸದ ಬಗ್ಗೆ ಪರೀಕ್ಷಿಸಿದರು.
ಅನಿರೀಕ್ಷಿತ ಭೇಟಿ
ಕಂದಾಯ ಅಧಿಕಾರಿಗಳು ಮಾಡುತ್ತಿದ್ದ ಸರ್ಕಾರಿ ಆಸ್ತಿಗಳ ಸರ್ವೇ ಕಾರ್ಯದ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲಿಸಿದರು. ವಿಜಯನಗರ ಜಿಲ್ಲೆಯಲ್ಲಿ ಒಟ್ಟು 62,737 ಸರ್ಕಾರಿ ಆಸ್ತಿಗಳಿದ್ದು ಈ ಪೈಕಿ ಈಗಾಗಲೇ 56,806 ಸರ್ಕಾರಿ/ಅನಾದೀನ ಆಸ್ತಿಗಳನ್ನು ಹೊಸದಾಗಿ ಸಿದ್ಧಪಡಿಸಿರುವ ಲ್ಯಾಂಡ್ ಬೀಟ್ ಅಪ್ಲಿಕೇಶನ್‌ನಲ್ಲಿ ಕಂದಾಯ ಅಧಿಕಾರಿಗಳು ಸರ್ವೇ ಮಾಡಿ ಫೋಟೋ ಸಹಿತ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಅಧಿಕಾರಿಗಳಿಗೆ ಸೂಚನೆ
ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಸರ್ವೇ ಮಾಡಲು ಬಾಕಿ ಉಳಿದಂತಹ ಆಸ್ತಿಗಳನ್ನು ಕೂಡಲೇ ಮುಕ್ತಾಯಗೊಳಿಸುವಂತೆ ಇದೇ ವೇಳೆ ಜಿಲ್ಲಾಧಿಕಾರಿಗಳು, ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: NEET UG 2024 Result: ಕ್ಷೇತ್ರವಾರು ನೀಟ್ ಪರೀಕ್ಷಾ ಫಲಿತಾಂಶ ಪ್ರಕಟ
ಸರ್ಕಾರಿ ಆಸ್ತಿಗಳಲ್ಲಿ ಅನಧಿಕೃತವಾಗಿ ಒತ್ತುವರಿಯಾಗದಂತೆ ಹಾಗೂ ಸರ್ಕಾರಿ ಆಸ್ತಿಗಳಲ್ಲಿ ಅನಧಿಕೃತ ಕಟ್ಟಡ, ಕಾಮಗಾರಿ ಹಾಗೂ ಇತರೆ ಅನಧಿಕೃತ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳುವಂತೆ ಸಹ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.