Site icon Vistara News

Vijayanagara News: ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ವಿತರಿಸಿ: ತಹಸೀಲ್ದಾರ್‌ ಅಮರೇಶ್

Vijayanagara News Distribute good quality sowing seeds and fertilizers says Tehsildar Amaresh G K

ಕೊಟ್ಟೂರು: ಈ ಬಾರಿ ಪೂರ್ವ ಮುಂಗಾರು ಉತ್ತಮ ಮಳೆಯಾಗುತ್ತಿದ್ದು, ಕಳೆದ ಬಾರಿಯ ರೈತರ ನೋವನ್ನು ಮರೆಸಿ ಸ್ವಲ್ಪ ಸಂತಸವನ್ನು ತಂದಿದೆ. ರೈತರು ಬಿತ್ತನೆ ಕಾರ್ಯವನ್ನು ಪ್ರಾರಂಭಿಸಿದ್ದು, ಅವರಿಗೆ ಉತ್ತಮ ಗುಣಮಟ್ಟದ ಬೀಜ ಹಾಗೂ ರಸಗೊಬ್ಬರವನ್ನು ವ್ಯಾಪಾರಸ್ಥರು ಮಾರಾಟ ಮಾಡಬೇಕು ಎಂದು ತಹಸೀಲ್ದಾರ್‌ ಅಮರೇಶ್ ಜಿ.ಕೆ. (Vijayanagara News) ಸೂಚಿಸಿದರು.

ಪಟ್ಟಣದ ತಾಲೂಕ ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಬುಧವಾರ ನಡೆದ ಬೀಜ/ಗೊಬ್ಬರ ಮಾರಾಟಗಾರರ ಮತ್ತು ರೈತರ ಸಭೆಯಲ್ಲಿ ಅವರು ಮಾತನಾಡಿದರು.

ರೈತರು ಬಿತ್ತನೆ ಕಾರ್ಯವನ್ನು ಪ್ರಾರಂಭಿಸಿದ್ದು, ಅವರಿಗೆ ಉತ್ತಮ ಗುಣಮಟ್ಟದ ಬೀಜ ಹಾಗೂ ರಸಗೊಬ್ಬರವನ್ನು ವ್ಯಾಪಾರಸ್ಥರು ಮಾರಾಟ ಮಾಡಬೇಕು. ಲಾಭದ ಆಸೆಗಾಗಿ ಕಳಪೆ ಗುಣಮಟ್ಟದ ಬೀಜ-ಗೊಬ್ಬರ ಮಾರಾಟ ಮಾಡಿದರೆ ಅಥವಾ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿಗೆ ಮಾರಾಟ ಮಾಡಿದರೆ ಅಂತಹವರ ವಿರುದ್ಧ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: IAS Exam : ಯುಪಿಎಸ್ ಸಿ ಪರೀಕ್ಷಾ ಅಭ್ಯರ್ಥಿಗಳಿಗೆ ಉಚಿತ ತರಬೇತಿ

ವ್ಯಾಪಾರಸ್ಥರು ತಾವು ಸಂಗ್ರಹ ಮಾಡಿರುವ ಗೋದಾಮಿನ ಮುಂದೆ ತಮ್ಮ ಅಂಗಡಿಯ ಮಾಹಿತಿ ಫಲಕವನ್ನು ಹಾಕಬೇಕು. ಅಂಗಡಿಯಲ್ಲಿ ಪ್ರತಿದಿನ ಬೀಜ ಗೊಬ್ಬರದ ದಾಸ್ತಾನು ಹಾಗೂ ಧರಪಟ್ಟಿಯನ್ನು ಕಡ್ಡಾಯವಾಗಿ ಹಾಕಿರಬೇಕು. ಯಾರಾದರೂ ಗೊಬ್ಬರ ಬೀಜಗಳನ್ನು ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿ ಮಾಡಿ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಪ್ರಯತ್ನ ಮಾಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮವಹಿಸಲಾಗುವುದು. ನಿಗದಿತ ಬೆಲೆಯಲ್ಲಿ ಬೀಜ/ರಸಗೊಬ್ಬರಗಳನ್ನು ಪೂರೈಸಿ ತಾಲೂಕಿನಲ್ಲಿ ಯಾವುದೇ ರೀತಿಯ ದೂರುಗಳು ಬಾರದಂತೆ ವ್ಯಾಪಾರವನ್ನು ಮಾಡುವಂತೆ ಸಲಹೆ ನೀಡಿದರು.

ತಾಲೂಕು ಕೃಷಿ ಸಹಾಯಕ ನಿರ್ದೇಶಕ ಸುನಿಲ್ ಕುಮಾರ್ ಎಂ.ಟಿ. ಮಾತನಾಡಿ, ಡಿಎಪಿ ಮತ್ತು ಯೂರಿಯಾ ಸಹಿತ ಎಲ್ಲ ರಸಗೊಬ್ಬರಗಳು ಸಾಕಷ್ಟು ಪೂರೈಕೆ ಇದ್ದು, ಯಾವುದೇ ಒಂದು ಕಂಪನಿ/ವಿಧದ ಬೀಜ/ರಸಗೊಬ್ಬರಗಳ ಮೇಲೆ ಅವಲಂಬನೆಯಾಗದೇ ಪರ್ಯಾಯ ಬೀಜ/ರಸಗೊಬ್ಬರಗಳನ್ನು ಬಳಸುವಂತೆ ಸಲಹೆ ನೀಡಿದರು.

ಸಿಪಿಐ ವೆಂಕಟಸ್ವಾಮಿ ಮಾತನಾಡಿದರು.

ಇದನ್ನೂ ಒದಿ: IPL 2024 : ಜಿಯೋಸಿನಿಮಾದಲ್ಲಿ ದಾಖಲೆಯ 62 ಕೋಟಿಗೂ ಅಧಿಕ ವೀಕ್ಷಣೆ ಕಂಡ ಐಪಿಎಲ್​

ಸಭೆಯಲ್ಲಿ ತೋಟಗಾರಿಕೆ ಇಲಾಖೆಯ ಎಎಚ್ಒ ಅಶ್ವಿನಿ ಡಿ., ಕೃಷಿ ಅಧಿಕಾರಿ (ತಾಂತ್ರಿಕ) ನೀಲಾನಾಯ್ಕ, ಕುಮಾರಸ್ವಾಮಿ ಕೆ., ಬೀಜ ಗೊಬ್ಬರ ವ್ಯಾಪಾರಿಗಳ ಸಂಘದ ತಾಲೂಕು ಅಧ್ಯಕ್ಷ ಶ್ರೀಧರಶೆಟ್ಟಿ, ರೈತ ಮುಖಂಡರಾದ ರಾಮಪ್ಪ, ಶ್ರೀಧರ, ಜಯಪ್ರಕಾಶನಾಯ್ಕ, ಸುರೇಶನಾಯ್ಕ ಹಾಗೂ ಇತರರು ಉಪಸ್ಥಿತರಿದ್ದರು. ಸಿ.ಮ. ಗುರುಬಸವರಾಜ ನಿರ್ವಹಿಸಿದರು.

Exit mobile version