Site icon Vistara News

Vijayanagara News: ಹಗರಿಬೊಮ್ಮನಹಳ್ಳಿಯಲ್ಲಿ ಜಿಲ್ಲಾ ಮಟ್ಟದ ಅತಿಥಿ ಶಿಕ್ಷಕರ ಬೃಹತ್ ಸಮ್ಮೇಳನಕ್ಕೆ ಚಾಲನೆ

District level guest teacher grand conference inauguration by MLA K.Nemaraj Naik in Hagaribommanahalli

ಹಗರಿಬೊಮ್ಮನಹಳ್ಳಿ: ಸರ್ಕಾರಿ ಶಾಲೆಗಳ ಅತಿಥಿ ಶಿಕ್ಷಕರ (Guest Teachers) ಸಮಸ್ಯೆಗಳ ಕುರಿತು ಮುಂದಿನ ಅಧಿವೇಶನದಲ್ಲಿ ಧ್ವನಿ ಎತ್ತುವ ಮೂಲಕ ಅತಿಥಿ ಶಿಕ್ಷಕರ ಪರವಾಗಿ ನಿಲ್ಲುತ್ತೇನೆ ಎಂದು ಶಾಸಕ ಕೆ. ನೇಮರಾಜ್ ನಾಯ್ಕ್‌ (Vijayanagara News) ತಿಳಿಸಿದರು.

ಸಮೀಪದ ಚಿತ್ರಂಪಳ್ಳಿ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಅತಿಥಿ ಶಿಕ್ಷಕರ ಬೃಹತ್ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ಅತಿಥಿ ಶಿಕ್ಷಕರ ಪಾತ್ರ ಅಪಾರ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಂದಿಪುರದ ಮಹೇಶ್ವರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ದೇಶದ ಬೆಳವಣಿಗೆಯಲ್ಲಿ ಶಿಕ್ಷಕರ ಕೊಡುಗೆ ಅಪಾರವಾಗಿದ್ದು ಅತಿಥಿ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕಾಗಿ ಧಾರ್ಮಿಕ ಪರಿಷತ್ತು ಸದಾ ನಿಮ್ಮೊಂದಿಗೆ ಇರುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: Budget 2024: ಲಕ್ಷದ್ವೀಪದಲ್ಲಿ ಹೂಡಿಕೆಯ ಮದ್ದು, ತಗಾದೆ ತೆಗೆದ ಮಾಲ್ಡೀವ್ಸ್‌ಗೆ ಗುದ್ದು

ಅತಿಥಿ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಕರಡಿಗುಡ್ಡ ಮಾತನಾಡಿ, ಪ್ರತಿವರ್ಷವೂ ಹೊಸದಾಗಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವ ಪದ್ದತಿ ಕೈಬಿಡಬೇಕು. ಅತಿಥಿ ಶಿಕ್ಷಕರನ್ನು ಹೊಸ ನೇಮಕಾತಿ ಕಾರಣ ನೀಡಿ ಬಿಡುಗಡೆಗೊಳಿಸದೆ ಮುಂದಿನ ಶೈಕ್ಷಣಿಕ ಸಾಲಿನವರೆಗೆ ಮುಂದುವರಿಸಬೇಕು. ಆಯಾ ಶಾಲೆಗಳಲ್ಲಿ ಸೇವಾ ಅನುಭವದ ದೃಢೀಕರಣ ಪತ್ರ ನೀಡಿ ಸೇವಾ ಭದ್ರತೆ ಒದಗಿಸಬೇಕು. ಸರ್ಕಾರಿ ಕಾಯಂ ಶಿಕ್ಷಕರಿಗೆ ನೀಡಲಾಗುತ್ತಿರುವಂತೆ ಅತಿಥಿ ಶಿಕ್ಷಕರಿಗೂ ಮಧ್ಯಂತರ ರಜೆ ಮತ್ತು ಬೇಸಿಗೆ ರಜೆಯಲ್ಲಿಯೂ ವರ್ಷದ 12 ತಿಂಗಳು ವೇತನ ನೀಡಬೇಕು. ಪ್ರತಿ ತಿಂಗಳ ಮೊದಲ ವಾರದಲ್ಲಿ ವೇತನ ಜಮೆ ಮಾಡಬೇಕು ಎಂದು ಒತ್ತಾಯಿಸಿದರು.

ಅತಿಥಿ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಹನುಮಂತಪ್ಪ ಮಾತನಾಡಿ, ಅತಿಥಿ ಶಿಕ್ಷಕರಿಗೆ ಮಾಸಿಕ ಕನಿಷ್ಠ ವೇತನ ಹೆಚ್ಚಿಸಬೇಕು. ಅತಿಥಿ ಶಿಕ್ಷಕರನ್ನು ಕಾಯಂ ಮಾಡಬೇಕು. ನೇಮಕಾತಿಯಲ್ಲಿ ಶೇ.5 ಕೃಪಾಂಕ ಮೀಸಲಾತಿ ನಿಯಮ ಜಾರಿಗೊಳಿಸಬೇಕು. ಅತಿಥಿ ಶಿಕ್ಷಕ ಎಂಬ ಪದವನ್ನು ಕೈಬಿಟ್ಟು ಗೌರವ ಶಿಕ್ಷಕ ಎಂದು ನಮೂದಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಶಾಸಕರು ಸರ್ಕಾರದ ಗಮನ ಸೆಳೆಯಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: Budget 2024: ತೆರಿಗೆ ಬಾಕಿ ಉಳಿಸಿಕೊಂಡವರಿಗೆ ವಿನಾಯಿತಿ ನೀಡಿದ ಹಣಕಾಸು ಸಚಿವೆ; ಎಷ್ಟು ವಿನಾಯಿತಿ ನೋಡಿ

ಈ ವೇಳೆ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಹ್ಯಾಪಿ ಲೋಕಪ್ಪ, ನೌಕರರ ಸಂಘದ ಅಧ್ಯಕ್ಷ ಎಂಪಿಎಂ ಮಂಜುನಾಥ, ದಾದೀಬಿ, ಮುಖಂಡರಾದ ಕನ್ನಿಹಳ್ಳಿ ಚಂದ್ರಶೇಖರ ನಾಗರಾಜ, ಅತಿಥಿ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಲಿಂಗೇಶ, ಜಿಲ್ಲಾ ಸಂಚಾಲಕ ದುರುಗೇಶ, ತಾಲೂಕಾಧ್ಯಕ್ಷ ಸತೀಶ್ ಕೊಳ್ಳಿ, ಸಂಘದ ರವಿಕುಮಾರ ಸಕ್ರಹಳ್ಳಿ, ವಿಜಯನಗರ ಜಿಲ್ಲೆಯ ಅತಿಥಿ ಶಿಕ್ಷಕ ಸಂಘದ ತಾಲೂಕು ಅಧ್ಯಕ್ಷರು, ಸಂಘದ ಪದಾಧಿಕಾರಿಗಳು, ಇತರರು ಉಪಸ್ಥಿತರಿದ್ದರು.

Exit mobile version