ಹೊಸಪೇಟೆ: ಜಿಲ್ಲೆಯ ಪ್ರತಿ ವಸತಿ ನಿಲಯಗಳಲ್ಲಿ (Hostels) ಮಕ್ಕಳ ಹಕ್ಕುಗಳ (Children Rights) ಸಂಘ ಸ್ಥಾಪನೆ ಆಗಬೇಕು. ಮಕ್ಕಳಿಗೆ ಬಾಲಕಾರ್ಮಿಕ, ಬಾಲ್ಯವಿವಾಹ ಪದ್ಧತಿ ನಿರ್ಮೂಲನೆ, ಮಕ್ಕಳ ಹಕ್ಕುಗಳ ಉಲ್ಲಂಘನೆ ಹಾಗೂ ಮಕ್ಕಳ ಸಹಾಯವಾಣಿ (Helpline) ಅಧಿಕಾರಿಗಳು ಜಾಗೃತಿ (Awareness) ಮೂಡಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಆಯೋಜಿಸಿದ್ದ ಮಕ್ಕಳ ರಕ್ಷಣಾ ವ್ಯವಸ್ಥೆಯ ಕುರಿತು ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಮಕ್ಕಳ ಹಕ್ಕುಗಳ ರಕ್ಷಣೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸೇರಿದಂತೆ ಪೊಲೀಸ್, ಕಾರ್ಮಿಕ, ಆರೋಗ್ಯ ಇಲಾಖೆಯ ಜತೆಗೆ ಪ್ರಗತಿಯ ವರದಿ ಪಡೆದರು.
ಇದನ್ನೂ ಓದಿ: Zika Virus: ಮಹಾರಾಷ್ಟ್ರದಲ್ಲಿ ಝಿಕಾ ವೈರಸ್ ಹಾವಳಿ; ನಮಗೆಷ್ಟು ಅಪಾಯ? ಮುಂಜಾಗ್ರತಾ ಕ್ರಮಗಳು ಯಾವವು?
ಜಿಲ್ಲೆಯ ವಿವಿಧ ವಸತಿ ನಿಲಯಗಳಿಗೆ ಸೋಮವಾರ ಭೇಟಿ ನೀಡಿದ್ದ ಅವರು, ಈ ವೇಳೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಭಾಗದ ಕೆಲ ಹಾಸ್ಟೆಲ್‌ನ ವಾತಾವರಣ ಪರಿಸರ ಸ್ನೇಹಿಯಾಗಿದ್ದು, ವಾರ್ಡನ್‌ಗಳನ್ನು ಅಭಿನಂದಿಸಿದರು. ಪರಿಸರ ಸ್ನೇಹಿ ಪೂರಕ ವಾತಾವರಣ ಎಲ್ಲಾ ವಸತಿ ನಿಲಯಗಳಲ್ಲಿ ರೂಪಿಸಬೇಕು ಎಂದು ಸೂಚಿಸಿದರು.
ಸೋಮವಾರ ಭೇಟಿ ನೀಡಿದ ಸಂದರ್ಭದಲ್ಲಿ ವಿವಿಧ ಬಾರ್, ರೆಸ್ಟೋರೆಂಟ್ ಹಾಗೂ ಹೋಟೆಲ್‌ನಲ್ಲಿ ಬಾಲಕಾರ್ಮಿಕರು ಇರುವುದು ಕಂಡುಬಂದಿದೆ. ಈ ಬಗ್ಗೆ ಕ್ರಮವಹಿಸಬೇಕು. ಈ ಹಿಂದೆ ಸಮೀಕ್ಷೆ ನಡೆಸಿದ್ದ ವರದಿಯನ್ವಯ ಜಿಲ್ಲೆಯಲ್ಲಿ ಇರುವ ಬಾಲಕಾರ್ಮಿಕರ ಈಗಿನ ಸ್ಥಿತಿಗತಿ ಪರಿಶೀಲಿಸಿ ಆಯೋಗಕ್ಕೆ ವರದಿ ಸಲ್ಲಿಸಿ ಅವರ ಮುಂದಿನ ಸೌಕರ್ಯ, ಪುನರ್ವಸತಿ ಕಲ್ಪಿಸುವ ಕುರಿತು ಕ್ರಮ ಕೈಗೊಳ್ಳಬೇಕು. ಬಾಲಕಾರ್ಮಿಕ ಪದ್ಧತಿ ಹಾಗೂ ಭಿಕ್ಷಾಟನೆ ಪ್ರಕರಣ ಕಂಡುಬಂದರೆ ಎಚ್ಚರವಹಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿ ವಸತಿ ನಿಲಯದಲ್ಲಿ ಮಕ್ಕಳ ಹಕ್ಕುಗಳ ಸಂಘ ಸ್ಥಾಪಿಸಿ ಮಕ್ಕಳ ಹಕ್ಕುಗಳ ಕಾನೂನು ವ್ಯವಸ್ಥೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳು ವಾರ್ಡನ್‌ಗಳಿಗೆ ಸೂಚಿಸಲು ತಿಳಿಸಿದರು.
ಬಾಲ್ಯವಿವಾಹ ತಡೆಗೆ ಅಗತ್ಯ ಕ್ರಮ
ಜಿಲ್ಲೆಯಲ್ಲಿ ಬಾಲ್ಯವಿವಾಹ ತಡೆಗೆ ಅಗತ್ಯ ಕ್ರಮ ಕೈಗೊಂಡು, ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಬಾಲ್ಯವಿವಾಹ ಆಗುವ ಸಂದರ್ಭದಲ್ಲಿ ತಡೆದು ರಕ್ಷಣೆಗೆ ಒಳಪಟ್ಟ ಸಂತ್ರಸ್ತ ಬಾಲಕಿಯರ ಸದ್ಯದ ಸ್ಥಿತಿಗತಿ ಬಗ್ಗೆ ವರದಿ ಪಡೆದುಕೊಂಡು ಪುನರ್ವಸತಿ, ಕಾನೂನು ಬಲ, ಶಿಕ್ಷಣ ಸೌಲಭ್ಯಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ತಾಲೂಕು, ಗ್ರಾಪಂವಾರು ರಕ್ಷಣಾ ಸಮಿತಿ ರಚನೆ
ಜಿಲ್ಲೆಯ ಪ್ರತಿ ತಾಲೂಕು ಮಟ್ಟದಲ್ಲಿ ಮಕ್ಕಳ ರಕ್ಷಣಾ ಸಮಿತಿ, ಗ್ರಾಮ ಪಂಚಾಯತಿ ಮಟ್ಟದಲ್ಲಿ ಮಕ್ಕಳ ಕಾವಲು ಸಮಿತಿಯನ್ನು ತಹಸೀಲ್ದಾರ್ ಮತ್ತು ಕಾರ್ಯನಿರ್ವಹಣಾ ಅಧಿಕಾರಿ ಅಧ್ಯಕ್ಷತೆಯಲ್ಲಿ ರಚಿಸಿ ಪ್ರತಿ ಮೂರು ತಿಂಗಳಿಗೊಮ್ಮೆ ಪರಿಣಾಮಕಾರಿಯಾಗಿ ಸಭೆ ಕೈಗೊಳ್ಳಬೇಕು, ಶಾಲೆಯಿಂದ ಹೊರಗುಳಿಯುವ, ಬಾಲ್ಯ ವಿವಾಹ ಒಳಪಡುವವರನ್ನು ರಕ್ಷಿಸಬೇಕು ಜತೆಗೆ ಮಕ್ಕಳ ಹಕ್ಕುಗಳ ರಕ್ಷಣೆಗೆ ಹೆಚ್ಚಿನ ಗಮನಹರಿಸಬೇಕು ಎಂದು ಸೂಚಿಸಿದರು.
ಪೌಷ್ಟಿಕ ಪುನಶ್ಚೇತನ ಘಟಕ
ಜಿಲ್ಲಾ ಮಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ 10 ಹಾಸಿಗೆ, ತಾಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ 5 ಹಾಸಿಗೆಗಳನ್ನು ಮೀಸಲಿಟ್ಟು ಪೌಷ್ಠಿಕ ಪುನಶ್ಚೇತನ ಘಟಕ ಸ್ಥಾಪಿಸಬೇಕು, ಪ್ರತಿ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು ಆರೈಕೆ ಕೇಂದ್ರ ಸ್ಥಾಪಿಸುವ ಜತೆಗೆ ಬಾಣಂತಿಯರ ಆರೈಕೆಗೆ ಬೇಕಾದ ಬಿಸಿನೀರು ಒಳಗೊಂಡಂತೆ ಮೂಲಸೌಕರ್ಯ ಒದಗಿಸಬೇಕು ಎಂದು ಸೂಚಿಸಿದರು.
ಇದನ್ನೂ ಓದಿ: Aadhaar update: ಆಧಾರ್ ವಿವರ ಈಗಲೇ ಉಚಿತವಾಗಿ ನವೀಕರಿಸಿ; ಎಲ್ಲಿ, ಹೇಗೆ, ಎಷ್ಟು ದಿನ?
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ವೇತಾ ಎಸ್., ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುಭದ್ರಾ ದೇವಿ, ಉಪವಿಭಾಗಾಧಿಕಾರಿ ನೋಂಗ್ಡಾಯ್ ಮೊಹಮ್ಮದ್ ಅಲಿ ಅಕ್ರಮ್ ಪಾಷಾ ಉಪಸ್ಥಿತರಿದ್ದರು.