ಹೊಸಪೇಟೆ: ಸರ್ಕಾರದ ಪ್ರತಿಯೊಂದು ಯೋಜನೆಗಳ ಅನುಷ್ಠಾನದ ಮಹತ್ವದ ಹೊಣೆಗಾರಿಕೆಯನ್ನು ಹೊಂದಿರುವ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಡಿಸಿ ಎಂ.ಎಸ್.ದಿವಾಕರ್ (Vijayanagara News) ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿನ ಆಡಿಟೋರಿಯಂ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಕಳೆದ ವಾರ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಒಗಳ ಸಭೆ ನಡೆಸಿ, ಹತ್ತಾರು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಮುಖ್ಯಮಂತ್ರಿಗಳು ಸಭೆಯಲ್ಲಿ ತಿಳಿಸಿದಂತೆ ಕಾರ್ಯಪ್ರವೃತ್ತರಾಗಲು ಪ್ರತಿಯೊಂದು ಇಲಾಖೆಯ ಅಧಿಕಾರಿಗಳ ಸಹಕಾರ, ಸಮನ್ವಯ ಅತೀ ಅವಶ್ಯಕವಾಗಿದೆ ಎಂದು ತಿಳಿಸಿದರು.
ಸರ್ಕಾರದ ಆದೇಶ ಪಾಲಿಸದಿದ್ದಲ್ಲಿ, ಕಡತ ವಿಲೇವಾರಿ ಮಾಡದೇ ಜನರಿಗೆ ಸ್ಪಂದಿಸದೇ ಇರುವುದು ಕಂಡು ಬಂದಲ್ಲಿ, ನಿರ್ಲಕ್ಷ್ಯ ಮಾಡುವುದು ತಿಳಿದು ಬಂದಲ್ಲಿ, ಮೇಲಿಂದ ಮೇಲೆ ಕರ್ತವ್ಯಲೋಪ ಎಸಗುವುದು ಸಾಬೀತಾದಲ್ಲಿ ಯಾವುದೇ ಮುಲಾಜಿಲ್ಲದೇ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಸಭೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: KSRTC Package Tour: ಜೋಗ ಜಲಪಾತ ವೀಕ್ಷಣೆಗೆ ಕೆಎಸ್‌ಆರ್‌ಟಿಸಿ ಪ್ಯಾಕೇಜ್ ಟೂರ್!
ಉತ್ತಮವಾಗಿ ಕಾರ್ಯ ನಿರ್ವಹಿಸುವುದರ ಮೂಲಕ ಸಾರ್ವಜನಿಕರು ತಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಬಡವರು, ಕೃಷಿ ಕಾರ್ಮಿಕರು, ನೊಂದವರ ಬಗ್ಗೆ ಅನುಕಂಪ, ಅಂತಃಕರಣ ಇಟ್ಟುಕೊಂಡು ಕೆಲಸ ನಿರ್ವಹಿಸಬೇಕು. ಅರ್ಜಿದಾರರು ಅನವಶ್ಯಕವಾಗಿ ಕಚೇರಿಗೆ ಅಲೆಯುವಂತೆ ಮಾಡಬಾರದು. ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುವುದು, ನಿಯಮಾನುಸಾರ ಕಾಲಮಿತಿಯೊಳಗೆ ಕಡತ ವಿಲೇವಾರಿಯಂತಹ ಕಾರ್ಯಗಳ ಮೂಲಕ ಅಧಿಕಾರಿಗಳು ತಮ್ಮ ಕಚೇರಿಯಲ್ಲಿನ ಸಿಬ್ಬಂದಿಗೆ ಮಾದರಿಯಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಪಾಲನೆ ಇಲಾಖೆಯ ಅಧಿಕಾರಿಗಳು ಕಾಲಕಾಲಕ್ಕೆ ಜಿಲ್ಲೆಯ ರೈತರ ಸಭೆ ಕರೆದು ಅವರಿಗೆ ನಾನಾ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಸಕಾಲಕ್ಕೆ ಬೀಜ, ಗೊಬ್ಬರ ವಿತರಣೆಗೆ ಕ್ರಮ ವಹಿಸಬೇಕು. ರೈತರ ಆತ್ಮಹತ್ಯೆಯಂತಹ ಪ್ರಕರಣಗಳಲ್ಲಿ ವಿಳಂಬ ಮಾಡದೇ ಪಾರದರ್ಶಕತೆ ಕಾಯ್ದುಕೊಂಡು ಶೀಘ್ರವೇ ಪರಿಹಾರ ದೊರಕುವಂತೆ ಮಾಡಿ ಸಂತ್ರಸ್ಥರಿಗೆ ಆತ್ಮವಿಶ್ವಾಸ ತುಂಬುವ ಕಾರ್ಯ ಮಾಡಬೇಕು. ಅರ್ಹರಿಗೆ ಮಾತ್ರ ಬಿಪಿಎಲ್ ಕಾರ್ಡುಗಳು ಸಿಗುವ ಹಾಗೆ ಆಹಾರ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಳೆಗಾಲ ಆರಂಭವಾಗಿರುವುದರಿಂದ ನಗರಸಭೆ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ನಿರಂತರವಾಗಿ ನಗರ ಸಂಚಾರ ಕೈಗೊಂಡು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ನಗರಸಭೆ ಪೌರಾಯುಕ್ತರಿಗೆ ನಿರ್ದೇಶನ ನೀಡಿದರು.
ಡೆಂಗ್ಯೂವನ್ನು ಕೂಡಲೇ ನಿಯಂತ್ರಣಕ್ಕೆ ತರಬೇಕು ಎಂದು ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ವೈದ್ಯಾಧಿಕಾರಿಗಳು ತಾಲೂಕು ಮಟ್ಟದ ವೈದ್ಯರ ಜತೆಗೆ ನಿರಂತರ ಸಂಪರ್ಕದಲ್ಲಿದ್ದು ಕೆಲಸ ಮಾಡಬೇಕು ಎಂದು ಸೂಚಿಸಿದರು.
ಇದನ್ನೂ ಓದಿ: Paris Olympics 2024 : ಒಲಿಂಪಿಕ್ಸ್ ಕ್ರೀಡಾಕೂಟದ ಇತಿಹಾಸ ಏನು? ಇದನ್ನು ಆಯೋಜಿಸುವವರು ಯಾರು?
ಸಭೆಯಲ್ಲಿ ಜಿ.ಪಂ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ ಶಾ, ಅಪರ ಜಿಲ್ಲಾಧಿಕಾರಿ ಅನುರಾಧ ಜಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್, ಸಹಾಯಕ ಆಯುಕ್ತ ಚಿದಾನಂದ ಗುರುಸ್ವಾಮಿ, ನಗರಸಭೆ ಪೌರಾಯುಕ್ತ ಮನೋಹರ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು, ತಹಸೀಲ್ದಾರರು ಇದ್ದರು.