ಮರಿಯಮ್ಮನಹಳ್ಳಿ: ನಾಟಕ (Drama) ಕೇವಲ ಮನೋರಂಜನೆಗೋಸ್ಕರಲ್ಲ. ಮಾನಸಿಕ ಸದೃಢತೆಯನ್ನು ಹೆಚ್ಚಿಸಿ, ಮನಸ್ಸಿಗೆ ಮುದ ನೀಡುವ ಮೂಲಕ ಸಮಾಜದಲ್ಲಿ ನಡೆಯುತ್ತಿರುವ ಘಟನಾವಳಿಗಳನ್ನು ಕಲಾವಿದರು (Artists) ರಂಗಕ್ಕೆ ತಂದು ಅಭಿನಯಿಸುವ ಮೂಲಕ ನಮ್ಮ ಸಮಾಜದ ಕನ್ನಡಿಯಾಗಿದ್ದಾರೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಹಿರಿಯ ರಂಗ ಕಲಾವಿದೆ ಡಾ. ಕೆ. ನಾಗರತ್ನಮ್ಮ ಹೇಳಿದರು.
ಇಲ್ಲಿನ ಅನ್ನದಾನೇಶ್ವರ ಮಠದಲ್ಲಿ ರಂಗಬಿಂಬ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕೆ. ಮಲ್ಲನಗೌಡ ಮತ್ತು ತಂಡದವರಿಂದ ಜಾಗತೀಕರಣವೋ ತಿಮ್ಮಜ್ಜಿ ಕೋಳಿಯೋ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾಟಕಗಳು ಮನುಷ್ಯರಲ್ಲಿ ಸೃಜನಶೀಲ ವ್ಯಕ್ತಿತ್ವವನ್ನು ಬೆಳೆಸುವಲ್ಲಿ ಪ್ರಮುಖಪಾತ್ರ ವಹಿಸುತ್ತವೆ ಎಂದ ಅವರು, ನಾಟಕ ಕಲೆ ಮತ್ತು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ಇದನ್ನೂ ಓದಿ: Money Guide: ಮಕ್ಕಳಲ್ಲೂ ಇರಲಿ ಆರ್ಥಿಕ ಸಾಕ್ಷರತೆ; ಮಕ್ಕಳ ದಿನಾಚರಣೆಯಂದೇ ಇದು ಆರಂಭವಾಗಲಿ
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ ಮಾತನಾಡಿ, ಮರಿಯಮ್ಮನಹಳ್ಳಿಯಲ್ಲಿ ನಿತ್ಯವೂ ರಂಗಭೂಮಿ ಚಟುವಟಿಕೆಗಳು ನಡೆಯುತ್ತಿರುವುದರಿಂದ ರಂಗಭೂಮಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಬಳಷ್ಟು ಕಲಾವಿದರು ಶ್ರಮಿಸುತ್ತಿದ್ದಾರೆ ಎಂದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜತೆಗೆ ಸ್ಥಳೀಯ ಸಂಘ-ಸಂಸ್ಥೆಗಳು ಮತ್ತು ಸ್ಥಳೀಯ ಉದ್ದಿಮೆದಾರರು ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ನೆರವಾಗಬೇಕು ಎಂದು ಅವರು ಹೇಳಿದರು.
ಪಟ್ಟಣ ಪಂಚಾಯಿತಿ ಸದಸ್ಯ ಬೆಣಕಲ್ ಭಾಷ, ಸ್ಥಳೀಯ ಮುಖಂಡರಾದ ಬಿ. ರಮೇಶ್, ಗುಂಡಾಸ್ವಾಮಿ, ಎಚ್. ರವಿಕಿರಣ್ ಮತ್ತು ಶ್ರೀರಾಂಪುರ ದುರ್ಗಾದೇವಿ ದೇವಸ್ಥಾನದ ಅರ್ಚಕ ಪೂಜಾರ್ ಬಸವರಾಜ, ರಂಗ ನಿರ್ದೇಶಕ ಬಿ. ಎಂ.ಎಸ್. ಪ್ರಭು ಕಾರ್ಯಕ್ರಮದಲ್ಲಿ ಮಾತನಾಡಿದರು.
ರಂಗಬಿಂಬ ಟ್ರಸ್ಟ್ ಅಧ್ಯಕ್ಷೆ ಎಂ. ಗಾಯಿತ್ರಿದೇವಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಲಲಿತಕಲಾ ರಂಗದ ಅಧ್ಯಕ್ಷ ಎಚ್. ಮಂಜುನಾಥ, ಸ್ಥಳೀಯ ಮುಖಂಡ ಬಿ. ಆನಂದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹನುಮಯ್ಯ ಮತ್ತು ಚಂದ್ರು ಪ್ರಾರ್ಥಿಸಿದರು. ರಂಗಬಿಂಬ ಟ್ರಸ್ಟ್ ನ ಕಾರ್ಯದರ್ಶಿ ಸಿ. ಕೆ. ನಾಗರಾಜ ಸ್ವಾಗತಿಸಿದರು. ಕಲಾವಿದ ಹಾಗೂ ನಿವೃತ್ತ ಶಿಕ್ಷಕ ಕೆ. ನಾಗೇಶ್ ನಿರೂಪಿಸಿ, ವಂದಿಸಿದರು.
ಇದನ್ನೂ ಓದಿ: ICC World Cup 2023: ಸೆಮಿ ಪಂದ್ಯಗಳ ಅಂಪೈರ್ ಪಟ್ಟಿ, ಮಳೆ ನಿಯಮ ಹೀಗಿದೆ
ನಂತರ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನಾಟಕ ವಿಭಾಗದ ಮುಖ್ಯಸ್ಥ ಪ್ರೊ. ಡಾ. ಶಿರಗಾನಹಳ್ಳಿ ಶಾಂತನಾಯ್ಕ್ ರಚಿಸಿರುವ ಸರದಾರ ಬಿ. ನೀನಾಸಂ ನಿರ್ದೇಶಿಸಿರುವ ಕೆ. ಮಲ್ಲನಗೌಡ ಮತ್ತು ತಂಡದವರಿಂದ ಜಾಗತೀಕರಣವೋ ತಿಮ್ಮಜ್ಜಿ ಕೋಳಿಯೋ ನಾಟಕ ಪ್ರದರ್ಶನ ನಡೆಯಿತು.