ಹೊಸಪೇಟೆ: ಜಿಲ್ಲೆಯಲ್ಲಿ ಜಾನುವಾರುಗಳಿಗೆ (Cattle) ಯಾವುದೇ ರೀತಿಯ ಮೇವಿನ ಕೊರತೆ ಆಗದಂತೆ ಮುಂಜಾಗ್ರತೆ ವಹಿಸಲು ವಸತಿ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬರ ಪರಿಸ್ಥಿತಿ ನಿರ್ವಹಣೆ ಮತ್ತು ಜಿಲ್ಲೆಯ ಪ್ರಗತಿ ಕುರಿತು ಶುಕ್ರವಾರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೇವು ಬ್ಯಾಂಕ್ ಸ್ಥಾಪನೆ ಮಾಡಿ
ಜಾನುವಾರುಗಳು ರೈತರ ಬೆನ್ನೆಲಬಾಗಿದ್ದು, ಅವುಗಳನ್ನು ಕೃಷಿಕರು ಪ್ರಮುಖ ಆಧಾರವಾಗಿಟ್ಟುಕೊಂಡು ಹಾಗೂ ಆದಾಯದ ಮೂಲವಾಗಿಯೂ ಸಾಕಾಣಿಕೆ ಮಾಡಿಕೊಂಡಿದ್ದಾರೆ. ಮಳೆ ಕೊರತೆಯಿಂದಾಗಿ ಪ್ರಸ್ತುತ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಎದುರಾಗಿದ್ದರಿಂದ ಜಿಲ್ಲೆಯ ಜಾನುವಾರುಗಳಿಗೆ ಮೇವಿನ ಕೊರತೆಯಾಗದಿರಲಿ.
ಇದನ್ನೂ ಓದಿ: Vastu Tips: ನಿಮ್ಮ ಜೀವನ ಸಮೃದ್ಧಿಗಾಗಿ ಈ ಗಿಡಗಳನ್ನು ಬೆಳೆಸಿ
ಈ ಹಿನ್ನಲೆಯಲ್ಲಿ ಸಮರ್ಪಕ ಮೇವು ಪೂರೈಕೆಗೆ ಕೃಷಿ, ಪಶು ಇಲಾಖೆ ಹಾಗೂ ತಹಸೀಲ್ದಾರರು ಸೇರಿ ತಾಲೂಕುವಾರು ಜಂಟಿ ಸರ್ವೇ ಕೈಗೊಂಡು ಜಿಲ್ಲೆಯ ರೈತರಲ್ಲಿರುವ ಮೇವಿನ ಲಭ್ಯತೆ, ಅವಶ್ಯಕತೆ ಹಾಗೂ ಉಳಿಕೆ ಮೇವಿನ ವಿವರದ ಮಾಹಿತಿ ಪಡೆದು ರೈತರ ಪಟ್ಟಿ ತಯಾರಿಸಬೇಕು. ರೈತರ ಬೇಡಿಕೆಗನುಸಾರ ಮೇವು ಪೂರೈಕೆಗೆ ಹಾಗೂ ಮೇವು ಬ್ಯಾಂಕ್ ಸ್ಥಾಪನೆಗೂ ತ್ವರಿತ ಕ್ರಮ ಕೈಗೊಳ್ಳಬೇಕು. ಇಲಾಖೆಗೆ ರೈತರಿಂದಲೂ ಮೇವು ಖರೀದಿಸಲು ಅವಕಾಶವಿದ್ದು, ಈ ಕುರಿತು ರೈತರಿಗೆ ಜಾಗೃತಿ ಮೂಡಿಸುವುದರ ಜತೆಗೆ ಕಟಾವಿನ ನಂತರ ಉಳಿಯುವ ಮೇವನ್ನು ಸುಡದಂತೆ ರೈತರಿಗೆ ಅರಿವು ಮೂಡಿಸಬೇಕು ಎಂದು ಪಶು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಹರಪನಹಳ್ಳಿ ಮತ್ತು ಕೂಡ್ಲಿಗಿಯಲ್ಲಿ ಮೇವು ಬ್ಯಾಂಕ್ ಸ್ಥಾಪನೆ ಮಾಡಿ ಮೇವು ಸಂಗ್ರಹಿಸಲು ಸೂಚಿಸಿದರು.
ಪಶು ಇಲಾಖೆ ಉಪನಿರ್ದೇಶಕ ಡಾ. ಬಸವರಾಜ ಮಾತನಾಡಿ, ಜಿಲ್ಲೆಯಲ್ಲಿ 2.28 ಲಕ್ಷ ದನಗಳು, 93 ಸಾವಿರ ಎಮ್ಮೆಗಳು ಹಾಗೂ 8.13 ಲಕ್ಷ ಕುರಿ ಮೇಕೆಗಳಿವೆ. ಜಿಲ್ಲೆಯ ತಾಲೂಕಿಗೆ ಒಂದರಂತೆ ಗೋಶಾಲೆಗಳನ್ನು ಪ್ರಾರಂಭಿಸಲು ಹಾಗೂ ಹೋಬಳಿಗೆ ಒಂದರಂತೆ ಮೇವು ಬ್ಯಾಂಕ್ ಸ್ಥಾಪನೆಗೆ ಕ್ರಮ ಯೋಜನೆ ರೂಪಿಸಲಾಗಿದೆ. ಒಂದು ವಾರಕ್ಕೆ 17,110 ಟನ್ ಮೇವು ಅವಶ್ಯಕವಿದ್ದು, 29 ವಾರಗಳಿಗೆ ಅವಶ್ಯವಿರುವ ಮೇವು ಜಿಲ್ಲೆಯಲ್ಲಿ ಲಭ್ಯವಿದೆ. ರೈತರಿಂದ ಮೇವು ಖರೀದಿಸಲು ಟೆಂಡರ್ ಕರೆದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: Jio Airfiber: ಕರ್ನಾಟಕದ 54 ಪಟ್ಟಣಗಳಲ್ಲಿ ರಿಲಯನ್ಸ್ ಜಿಯೋ ಏರ್ ಫೈಬರ್ ಸೇವೆ
ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ಮಾತನಾಡಿ, ಜಿಲ್ಲೆಯಲ್ಲಿ ಜನವರಿ 1 ರಿಂದ ನವೆಂಬರ್ 23 ರವರೆಗೆ ವಾಡಿಕೆ ಮಳೆ 631 ಮಿ.ಮೀ ಇದ್ದು, 336 ಮಿ.ಮೀ ವಾಸ್ತವಿಕ ಮಳೆಯಾಗಿ, ಮಳೆ-47% ಕೊರತೆಯಾಗಿದೆ ಎಂದರು.
ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಿ
ಪ್ರಸ್ತುತ ಬರ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರುವ ಸಾಧ್ಯತೆ ಇದ್ದು, ಸಮಸ್ಯೆ ಉಂಟಾಗಬಹುದಾದ ಗ್ರಾಮಗಳು, ಪ್ರದೇಶಗಳನ್ನು ಗುರುತಿಸಬೇಕು. ಅಂತಹ ಸ್ಥಳಗಳಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಯಿಸುವುದು, ಕೊಳವೆಬಾವಿ ದುರಸ್ಥಿ, ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆಯುವುದರ ಜತೆಗೆ ಟ್ಯಾಂಕರ್ ಮೂಲಕವು ನೀರು ಪೂರೈಕೆಗೆ ಕ್ರಮ ಕೈಗೊಂಡು ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಮಾತನಾಡಿ, ಕುಡಿಯುವ ನೀರು ಪೂರೈಕೆಗಾಗಿ ಜಿಲ್ಲೆಯ ಗ್ರಾಮ ಪಂಚಾಯತಿಗೆ 10 ರಿಂದ 15 ಲಕ್ಷ ರೂ. ಗಳಷ್ಟು ಅನುದಾನವನ್ನು ಹದಿನೈದನೇ ಹಣಕಾಸು ಯೋಜನೆಯಡಿ ಮೀಸಲಿರಿಸಲಾಗಿದೆ. ಹೊಸದಾಗಿ ಕೊಳವೆಬಾವಿ ಕೊರೆಯಿಸಲು ಮತ್ತು ಪೈಪ್‌ಲೈನ್ ಅಳವಡಿಕೆಗೆ ಯಾವುದೇ ಅನುದಾನದ ಕೊರತೆ ಇರುವುದಿಲ್ಲ ಎಂದು ತಿಳಿಸಿದರು.
ವಿಜಯನಗರ, ಚಿತ್ರದುರ್ಗ, ಪಾವಗಡ ಕುಡಿಯುವ ನೀರಿನ ಯೋಜನೆ ತ್ವರಿತವಾಗಿ ನಡೆಯುತ್ತಿದ್ದು ಡಿಸೆಂಬರ್ ಅಂತ್ಯದ ವೇಳೆ ಕೂಡ್ಲಿಗಿ ಪಟ್ಟಣಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ. ಈಗಾಗಲೇ ಪ್ರಾಯೋಗಿಕ ಕಾರ್ಯಾಚರಣೆ ನಡೆಸಲಾಗಿದೆ ಎಂದು ಎಂಜಿನಿಯರ್ ಸಭೆಗೆ ತಿಳಿಸಿದಾಗ ಈ ವರ್ಷ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆ ಇದ್ದು ಬಹುಗ್ರಾಮ ಕುಡಿಯುವ ನೀರಿನ ಜಾಕ್‌ವೆಲ್‌ಗೆ ನೀರು ಲಭ್ಯವಾಗದಿದ್ದಲ್ಲಿ ಸಮಸ್ಯೆಯಾಗಲಿದ್ದು ಇದಕ್ಕೆ ಯೋಜನೆ ರೂಪಿಸಿಕೊಳ್ಳಬೇಕೆಂದು ಸೂಚನೆ ನೀಡಿದರು.
ಸರ್ಕಾರದ ಗ್ಯಾರಂಟಿ ಯೋಜನೆಯಾದ ಗೃಹಜ್ಯೋತಿಯಡಿ ಎಚ್.ಬಿ.ಹಳ್ಳಿ ವಿಭಾಗ 144518, ಹೊಸಪೇಟೆ 70617, ಹರಪನಹಳ್ಳಿ 65011 ಸೇರಿ 280146 ಗ್ರಾಹಕರು ನೊಂದಣಿಯಾಗಿದ್ದಾರೆ. ಜಿಲ್ಲೆಯಲ್ಲಿ 315235 ಗ್ರಾಹಕರಿದ್ದಾರೆ. ಒಟ್ಟು ಗ್ರಾಹಕರಲ್ಲಿ 35089 ಆರ್.ಆರ್.ಸಂಖ್ಯೆ ಜ್ಯೋತಿಯಿಂದ ಹೊರಗುಳಿದಿವೆ ಎಂದರು.
ಗೃಹಲಕ್ಷ್ಮಿಯಡಿ ಮನೆಒಡತಿಗೆ ಮಾಸಿಕ ಎರಡು ಸಾವಿರ ನೀಡುವ ಯೋಜನೆ ಇದಾಗಿದ್ದು ಜಿಲ್ಲೆಯಲ್ಲಿ ಗ್ರಾಮೀಣ ಭಾಗದ 199697 ಮತ್ತು ನಗರ, ಪಟ್ಟಣದಲ್ಲಿ 68568 ಸೇರಿ 268265 ಯಜಮಾನಿಯರು ಗೃಹಲಕ್ಷ್ಮಿಯಡಿ ನೊಂದಣಿಯಾಗಿದ್ದಾರೆ. ಈಗಾಗಲೇ ಸೆಪ್ಟೆಂಬರ್ ಮಾಹೆಯವರೆಗೆ ಎರಡು ಸಾವಿರ ಪಾವತಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ಶ್ವೇತ ಮಾಹಿತಿ ನೀಡಿದರು.
ಈ ವೇಳೆ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಮಾತನಾಡಿ, ಈ ಯೋಜನೆಯಿಂದ ಅರ್ಹರು ಹೊರಗುಳಿಯದಂತೆ ಮನೆ ಮನೆ ಸರ್ವೆ ಮಾಡಿ ಒಂದು ತಿಂಗಳಲ್ಲಿ ಎಲ್ಲಾ ಅರ್ಹರಿಗೆ ಯೋಜನೆ ತಲುಪುವಂತೆ ಮಾಡಲು ಸೂಚನೆ ನೀಡಿದರು.
ಇದನ್ನೂ ಓದಿ: Brutal Tragedy : ಪೆಟ್ರೋಲ್ ಬಂಕ್‌ನಲ್ಲಿ ಅಚಾತುರ್ಯ; ಮಲಗಿದ್ದ ಕಾರ್ಮಿಕನ ಮೇಲೆ ಹರಿದ ಟಿಪ್ಪರ್!
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ., ಅಪರ ಜಿಲ್ಲಾಧಿಕಾರಿ ಡಾ. ಅನುರಾಧ ಜಿ. ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.