Site icon Vistara News

Vijayanagara News: ಶಾಲೆಯಿಂದ ಹೊರಗುಳಿದ 60 ಸಾವಿರಕ್ಕೂ ಅಧಿಕ ಮಕ್ಕಳನ್ನು ಪತ್ತೆ ಹಚ್ಚಲು ಸೂಚನೆ

Find more than 60 thousand children out of school says Shashidhar Kosambe

ಹೊಸಪೇಟೆ: ಕಲ್ಯಾಣ ಕರ್ನಾಟಕ (Kalyana Karnataka) ಭಾಗದಲ್ಲಿ 5ರಿಂದ 10ನೇ ತರಗತಿಯಲ್ಲಿ ಓದುತ್ತಿದ್ದ 62,519 ವಿದ್ಯಾರ್ಥಿಗಳು ಶಾಲೆ ಬಿಟ್ಟಿದ್ದಾರೆ. ಇಷ್ಟು ಮಕ್ಕಳು ಎಲ್ಲಿದ್ದಾರೆ ಎನ್ನುವುದನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಲೇಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ತಾಕೀತು (Vijayanagara News) ಮಾಡಿದರು.

ರಾಜ್ಯ ಮಕ್ಕಳ ಹಕ್ಕುಗಳ ಆಯೋಗ, ಬೆಂಗಳೂರು ಹಾಗೂ ವಿಜಯನಗರ ಜಿಲ್ಲಾಡಳಿತ, ಜಿ.ಪಂ., ಹೊಸಪೇಟೆ ತಾಲೂಕು ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್‌ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ರಕ್ಷಣೆಯ ಕುರಿತಾಗಿ ಇರುವ ಕಾನೂನು ಅರಿವು ಎರಡು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇದನ್ನೂ ಓದಿ: Karnataka Weather : ಬೆಂಗಳೂರು ಸೇರಿ ಕರಾವಳಿ, ಒಳನಾಡಲ್ಲಿ ತಾಪಮಾನ ಏರಿಕೆ

ದೇಶವು 2030 ರ ವೇಳೆಗೆ ಬಾಲ್ಯವಿವಾಹ ಮುಕ್ತ ದೇಶವಾಗಬೇಕು. ಈ ನಿಟ್ಟಿನಲ್ಲಿ ವಿಜಯನಗರ ಜಿಲ್ಲೆಯ ಎಲ್ಲಾ ಹಂತದ ಅಧಿಕಾರಿಗಳು ಈಗಿನಿಂದಲೇ ನಿಗಾವಹಿಸಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳು ಎಲ್ಲಿದ್ದಾರೆ ಎಂಬುದನ್ನು ಪತ್ತೆಹಚ್ಚುವ ಪ್ರಾಮಾಣಿಕ ಪ್ರಯತ್ನ ನಡೆದರೆ ಬಾಲ್ಯವಿವಾಹ, ಬಾಲಕಾರ್ಮಿಕ ಮೊದಲಾದ ಸಮಸ್ಯೆಗಳ ಮೇಲೆಯೂ ಬೆಳಕು ಚೆಲ್ಲಲು ಸಾಧ್ಯವಾಗುತ್ತದೆ ಎಂದರು.

ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 9,860 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಆದರೆ 202 ಪ್ರಕರಣಗಳಲ್ಲಿ ಮಾತ್ರ ಆಪರಾಧಿಗಳಿಗೆ ಶಿಕ್ಷೆಯಾಗಿದೆ. ಇದೇ ಅವಧಿಯಲ್ಲಿ ರಾಜ್ಯದಲ್ಲಿ 24,945 ಶಿಶುಮರಣ ಸಂಭವಿಸಿದೆ. 80 ಸಾವಿರ ಅಪ್ರಾಪ್ತರು ಗರ್ಭ ಧರಿಸಿದ್ದಾರೆ. ಇಂತಹ ಅಂಕಿ ಅಂಶಗಳು ನಿಜಕ್ಕೂ ಆತಂಕಕಾರಿ. ಇದನ್ನು ಗಣನೀಯವಾಗಿ ತಗ್ಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಲೇಬೇಕು ಎಂದು ಅವರು ಸೂಚನೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಲ್‌. ಶ್ರೀಹರಿಬಾಬು ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಸದಸ್ಯ ರಾಘವೇಂದ್ರ ಎಚ್‌.ಸಿ. ಮಾತನಾಡಿದರು.

ಇದನ್ನೂ ಓದಿ: Viral Video: ವಾಕಿಂಗ್‌ ಮಾಡುತ್ತ ಬರೋಬ್ಬರಿ 2 ಟ್ರಕ್‌ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹ; ಅಧಿಕಾರಿಯ ವಿಡಿಯೊ ವೈರಲ್‌

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಜಿಲ್ಲಾ ಮಕ್ಕಳ ರಕ್ಷಾಣಾಧಿಕಾರಿ ಸುದೀಪ್‌ ಕುಮಾರ್ ಉಂಕಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version