ಹೊಸಪೇಟೆ: ನಗರದ ಸ್ಟೇಷನ್ ರಸ್ತೆಯಲ್ಲಿರುವ ರೋಟರಿ ಕ್ಲಬ್ (Rotary Club) ಕಚೇರಿ ಆವರಣದಲ್ಲಿ ಸಾರ್ವಜನಿಕರಿಗೆ ಎರಡು ದಿನಗಳ ಉಚಿತ ಆರೋಗ್ಯ ತಪಾಸಣಾ (Free Health Checkup) ಮತ್ತು ಶಸ್ತ್ರಚಿಕಿತ್ಸಾ ಶಿಬಿರ (Camp) ಹಮ್ಮಿಕೊಳ್ಳಲಾಗಿತ್ತು.
ರೋಟರಿ ಕ್ಲಬ್ ಹಾಗೂ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಇವರ ಸಹಯೋಗದಲ್ಲಿ ಪುಲ್ಲಮ್ಮ ಮತ್ತು ಶಂಕ್ರಪ್ಪ ಇವರ ಸ್ಮರಣಾರ್ಥ ಪಿಬಿಎಸ್ ಅಂಡ್ ಸನ್ಸ್ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ ಶಿಬಿರಕ್ಕೆ ಸಪ್ತಗಿರಿ ಆಸ್ಪತ್ರೆಯ ಮುಖ್ಯ ವೈದ್ಯ ಡಾ. ನಿತೀನ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ನಮ್ಮ ಆಸ್ಪತ್ರೆಯಿಂದ ಈಗಾಗಲೆ ಉಚಿತವಾಗಿ ಸಾಕಷ್ಟು ಆರೋಗ್ಯ ತಪಾಸಣೆ ಹಾಗೂ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಅಗತ್ಯ ಇದ್ದವರಿಗೆ ಉಚಿತ ಶಸ್ತ್ರಚಿಕಿತ್ಸೆ ಸಹ ಕೈಗೊಳ್ಳಲಾಗಿದೆ. ಸರ್ಕಾರದ ವಿವಿಧ ಪ್ರಾಯೋಜಿತ ವೈದ್ಯಕೀಯ ಸೌಲಭ್ಯಗಳ ಅಡಿ ಸಾವಿರಾರು ಜನರಿಗೆ ಉಚಿತ ಆರೋಗ್ಯ ಸೌಲಭ್ಯ ದೊರಕಿಸಿಕೊಟ್ಟಿದ್ದೇವೆ. ಸದ್ಯ ಹೊಸಪೇಟೆಯ ರೋಟರಿ ಕ್ಲಬ್ ಸಹಯೋಗದಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ನೀಡಲಾಗುತ್ತಿದ್ದು, ಹೊಸಪೇಟೆಯ ನಾಗರಿಕರು ಇದರ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: Aditya L1 Mission: ಭೂಮಿಯ ಸುತ್ತ ಎರಡನೇ ಸುತ್ತು ಮುಗಿಸಿದ ಆದಿತ್ಯ L1, ಇನ್ನೂ 3 ಸುತ್ತು ಬಾಕಿ
ರೋಟರಿ ಕ್ಲಬ್ ಅಧ್ಯಕ್ಷ ಆರ್. ಸತ್ಯನಾರಾಯಣ ಮಾತನಾಡಿ, ರೋಟರಿ ಕ್ಲಬ್ ನಿರಂತರವಾಗಿ ನೀಡುತ್ತಿರುವ ವಿವಿಧ ವೈದ್ಯಕೀಯ ಸೌಲಭ್ಯಗಳಾದ ಕಣ್ಣಿನ ಆಸ್ಪತ್ರೆ, ಫಿಸಿಯೋ ಥೆರಫಿ, ಡಯಾಲಿಸಿಸ್, ಶೀಘ್ರದಲ್ಲೇ ಆರಂಭಗೊಳ್ಳಲಿರುವ ಬ್ಲಡ್ ಬ್ಯಾಂಕ್ ಹಾಗೂ ಐಸಿಯು ಆಂಬ್ಯುಲೆನ್ಸ್ ಗಳ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದ ಅವರು, ಈ ಶಿಬಿರದ ಪ್ರಯೋಜನವನ್ನು ಜನತೆ ಸದುಪಯೋಗಪಡೆದುಕೊಂಡು ಇತರಿಗೂ ಈ ಶಿಬಿರದ ಕುರಿತು ತಿಳಿಸುವಂತೆ ಮನವಿ ಮಾಡಿದರು.
ಬೆಳಗ್ಗೆ 10 ಗಂಟೆಗೆ ಆರಂಭವಾದ ಶಿಬಿರದಲ್ಲಿ ಕ್ಯಾನ್ಸರ್ ತಜ್ಞರು, ಮೂಳೆ ಮತ್ತು ಕೀಲುರೋಗ ತಜ್ಞರು, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು, ಮಕ್ಕಳ ತಪಾಸಣೆ, ಹೃದಯರೋಗ ತಜ್ಞರು, ನರರೋಗ ತಜ್ಞರು, ಶಸ್ತ್ರಚಿಕಿತ್ಸೆ ತಜ್ಞರು ಭಾಗವಹಿಸಿ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿದರು.
ಸೋಮವಾರ 140ಕ್ಕೂ ಹೆಚ್ಚು ಸಾರ್ವಜನಿಕರು ಆಗಮಿಸಿ ತಪಾಸಣೆ ಮತ್ತು ಚಿಕಿತ್ಸೆ ಪಡೆದರು.
ಇದನ್ನೂ ಓದಿ: SSLC PUC Exam : ಎಸ್‌ಎಸ್‌ಎಲ್‌ಸಿ-ಪಿಯುಸಿ ವಿದ್ಯಾರ್ಥಿಗಳಿಗೆ ಇನ್ನು 3 ಪರೀಕ್ಷೆ! ಗುಡ್‌ನ್ಯೂಸ್ ಕೊಟ್ಟ ಸರ್ಕಾರ
ಈ ಸಂದರ್ಭದಲ್ಲಿ ಕ್ಲಬ್ ನ ಕಾರ್ಯದರ್ಶಿ ದಾದಾಪೀರ್, ಶಿಬಿರದ ಸಂಯೋಜಕ ಮಹೇಂದ್ರಕುಮಾರ್ ಸೋನಿ, ಡಾ. ಮುನಿವಾಸುದೇವರೆಡ್ಡಿ, ಕ್ಲಬ್ ನ ಮಾಜಿ ಅಧ್ಯಕ್ಷ ಎನ್.ಎಂ. ಅಗ್ನಿಹೋತ್ರಿ, ಶಾಂತಕುಮಾರ್, ರವೀಂದ್ರ, ಗೋಪಾಲ ಜೋಶಿ, ಪಿ.ಜಿ. ಚಂದ್ರಶೇಖರ್, ಅಬುಲ್ ಹಕ್ ಸೇಠ್, ಕಟ್ಟಾ ಪ್ರಶಾಂತ್, ವೀರಭದ್ರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.