ಕೂಡ್ಲಿಗಿ: ವಿಜಯನಗರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಫೆ. 24, 25 ರಂದು ಗುಡೇಕೋಟೆ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಶಾಸಕ ಡಾ.ಎನ್.ಟಿ. ಶ್ರೀನಿವಾಸ್ (Vijayanagara News) ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಗುಡೇಕೋಟೆ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗುಡೆಕೋಟೆ ಉತ್ಸವ ಸರ್ಕಾರದಿಂದಲೇ ಫೆಬ್ರವರಿ 24, 25ರಂದು ಅದ್ಧೂರಿಯಾಗಿ ಪಕ್ಷಾತೀತವಾಗಿ, ಜಾತ್ಯತೀತವಾಗಿ ಆಚರಿಸಲು ಎಲ್ಲರೂ ಸಹಕರಿಸುವಂತೆ ಇದೇ ವೇಳೆ ಮನವಿ ಮಾಡಿದರು.
ಗುಡೇಕೋಟೆ ಉತ್ಸವ ಸ್ಥಳೀಯ ಜನರೇ ಪ್ರತಿವರ್ಷ ಆಚರಣೆ ಮಾಡುತ್ತಾ ಬಂದಿದ್ದಾರೆ. ಆದರೆ ಸರ್ಕಾರದಿಂದಲೇ ಉತ್ಸವ ಆಚರಣೆ ಮಾಡುವ ಬಗ್ಗೆ ಒಂದು ವರ್ಷದ ಹಿಂದೆ ಗುಡೇಕೋಟೆ ಜನತೆ ನನ್ನ ಬಳಿ ಬೇಡಿಕೆ ಇಟ್ಟಿದ್ದರು. ಅದು ಈಗ ನನಸಾಗುವ ಕಾಲ ಕೂಡಿಬಂದಿದೆ. ಗುಡೇಕೋಟೆ ಉತ್ಸವ ಆಚರಿಸಲು ಮುಖ್ಯಮಂತ್ರಿಗಳ ಬಳಿ ಪ್ರಸ್ತಾಪ ಮಾಡಿದ್ದೆವು. ಅದಕ್ಕೆ ಒಪ್ಪಿಗೆ ಸೂಚಿಸಿ ಸರ್ಕಾರದಿಂದ 30 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಿದ್ದಾರೆ. ಗುಡೇಕೋಟೆ ಉತ್ಸವ ಅಧೀಕೃತ ಸರ್ಕಾರಿ ಕಾರ್ಯಕ್ರಮವಾಗಿದ್ದು, ರಾಜ್ಯದಲ್ಲಿ ವಿಶೇಷತೆಯಿಂದ ಕೂಡಿದ ಉತ್ಸವ ಇದಾಗಬೇಕು. ಉತ್ಸವ ಯಶಸ್ವಿಯಾಗಲು ಎಲ್ಲರ ಸಹಕಾರ ಅತ್ಯಗತ್ಯ. ಅಧಿಕಾರಿಗಳು ನಿಮ್ಮ ಜವಾಬ್ದಾರಿಯನ್ನು ಅರಿತು ಅಚ್ಚುಕಟ್ಟಾಗಿ ನಿಭಾಯಿಸಬೇಕು ಎಂದು ಸೂಚನೆ ನೀಡಿದರು.
ಇದನ್ನೂ ಓದಿ: Vijayanagara News: ಶ್ರೀ ಗುರು ಬಸವೇಶ್ವರಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ; 48.32 ಲಕ್ಷ ರೂ. ಸಂಗ್ರಹ
ಉತ್ಸವದಲ್ಲಿ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವ ಬಿ.ನಾಗೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಬಳ್ಳಾರಿ ಸಂಸದ ದೇವೇಂದ್ರಪ್ಪ ಸೇರಿದಂತೆ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಉತ್ಸವದಲ್ಲಿ ವಿಜಯನಗರ, ಬಳ್ಳಾರಿ ಜಿಲ್ಲೆಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದ ಅವರು, ಕಾರ್ಯಕ್ರಮದ ಚಾಲನೆಗೂ ಮೊದಲು ಗುಡೇಕೋಟೆ ಹೋಬಳಿಯಿಂದ ಉತ್ಸವ ನಡೆಯುವ ಸ್ಥಳದವರೆಗೆ ಬೃಹತ್ ಪ್ರಮಾಣದ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಡೊಳ್ಳು ಕುಣಿತ, ವೀರಗಾಸೆ, ಭಜನಾ ತಂಡಗಳು, ಪಾಳೆಯಗಾರರ ಸಂಪ್ರದಾಯಗಳು ಸೇರಿ ಹತ್ತಾರು ಜಾನಪದ ಮತ್ತು ಜನಪದ ಕಲೆಗಳು ಪ್ರದರ್ಶನಗೊಳ್ಳಲಿವೆ ಎಂದರು.
ಉತ್ಸವಕ್ಕೆ ಆಗಮಿಸುವ ಕಲಾ ತಂಡದವರಿಗೆ ವಸತಿ, ಊಟ ವ್ಯವಸ್ಥೆಗೆ ಕ್ರಮವಹಿಸಿ ಎಂದು ಸೂಚಿಸಿದ ಅವರು, ಉತ್ಸವದಲ್ಲಿ ಯಾವುದೇ ಕೊರತೆ, ಗೊಂದಲ, ಅನನುಕೂಲವಾಗದಂತೆ ಎಚ್ಚರ ವಹಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕ ಶ್ರೀನಿವಾಸ್ ಸೂಚಿಸಿದರು.
ಇದನ್ನೂ ಓದಿ: Yadgiri News: ವಿಶ್ವಗುರು ಬಸವಣ್ಣನವರ ಕಾಯಕ ತತ್ವ ಪಾಲಿಸಿ: ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ
ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು, ಮುಖಂಡರು ಹಾಗೂ ಇತರರು ಪಾಲ್ಗೊಂಡಿದ್ದರು.