ವಿಜಯನಗರ: ಪ್ರತಿಯೊಂದು ಮಗುವಿನಲ್ಲೂ ತನ್ನದೇ ಆದ ಸೂಪ್ತ ಪ್ರತಿಭೆ (Talent) ಅಡಗಿದ್ದು ಅದನ್ನು ಗುರುತಿಸಿ ಬೆಳೆಸುವ ಮಹತ್ತರ ಜವಾಬ್ದಾರಿ ಶಿಕ್ಷಕರದ್ದಾಗಿದೆ (Teachers) ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ತಿಳಿಸಿದರು.
ಹೊಸಪೇಟೆಯ ಜಿಲ್ಲಾ ಒಳ ಕ್ರೀಡಾಂಗಣದ ಸಭಾಭವನದಲ್ಲಿ ಸುವರ್ಣ ಕರ್ನಾಟಕ ಸಂಭ್ರಮದ ಪ್ರಯುಕ್ತ ಕರ್ನಾಟಕ ಮಕ್ಕಳ ಅಕಾಡೆಮಿ ಬೆಂಗಳೂರು ಹಾಗೂ ಮಕ್ಕಳ ಅಧ್ಯಯನ ಕೇಂದ್ರ ಹಗರಿಬೊಮ್ಮನಹಳ್ಳಿ ಇವರ ಸಹಯೋಗದಲ್ಲಿ ಗುರುವಾರ ನಡೆದ ರಾಜ್ಯಮಟ್ಟದ ಶೌರ್ಯ ಪ್ರಶಸ್ತಿ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಶೈಕ್ಷಣಿಕ ಕಾರ್ಯಗಾರವನ್ನು ಉದ್ಘಾಟಿಸಿ, ಮಾತನಾಡಿದ ಅವರು, ಮಕ್ಕಳನ್ನು ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಸಾಂಸ್ಕೃತಿಕವಾಗಿ ಸದೃಢಗೊಳಿಸಿ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಮಕ್ಕಳ ಹಕ್ಕುಗಳನ್ನು ಸಂರಕ್ಷಿಸಿ ಗೌರವಿಸಬೇಕಾಗಿದೆ ಎಂದರು.
ಮಕ್ಕಳ ಬೆಳವಣಿಗೆಗೆ ಸಹಾಯಕವಾಗುವ ಇಂತಹ ಶೈಕ್ಷಣಿಕ ಚಟುವಟಿಕೆಗಳ ಕಾರ್ಯಗಾರಗಳ ಮೂಲಕ ಮಕ್ಕಳ ಸರ್ವತೋಮುಖ ಪ್ರಗತಿಗೆ ಶಿಕ್ಷಕರು ಶ್ರಮಿಸಲು ಸಾಧ್ಯವಾಗುತ್ತದೆ ಎಂದರು.
ಇದನ್ನೂ ಓದಿ: Year Ender 2023: ಈ ವರ್ಷ ಗಮನ ಸೆಳೆದ ಹೊಸ ಫಿಟ್ನೆಸ್ ತಂತ್ರಗಳಿವು
ಚಿಲಿಪಿಲಿ ಬಳಗದ ಅಧ್ಯಕ್ಷ ಹಾಗೂ ಸಾಹಿತಿ ಹುರುಕಡ್ಲಿ ಶಿವಕುಮಾರ ಮಾತನಾಡಿ, ಮಕ್ಕಳಿಗೆ ಪಠ್ಯದ ಜತೆಗೆ ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿ ಶಿಸ್ತನ್ನು ಕಲಿಸಿದಾಗ ಮಗುವಿನಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದ ಅವರು, ವಿವಿಧ ರಂಗಗಳಲ್ಲಿ ಸಾಧನೆಗೈದ ಹಲವು ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಮೂಲಕ ಪ್ರೇರೇಪಿಸುವ ಕೆಲಸವನ್ನು ಕರ್ನಾಟಕ ಮಕ್ಕಳ ಅಕಾಡೆಮಿ ಹಾಗೂ ಮಕ್ಕಳ ಅಧ್ಯಯನ ಕೇಂದ್ರ ಉತ್ತಮ ಕೆಲಸ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಚಿತ್ರಕಲಾ ಉಪನ್ಯಾಸಕ ಆರ್.ಎಲ್. ಜಾಧವ್ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹಾಗೂ ವಲ್ಲಬಪುರ ಶಾಲೆಯ ಬಹುಮುಖ ಪ್ರತಿಭೆಯಾದ ಕುಸ್ತಿಪಟು ಕೆ.ಸಿ. ಸುಧಾ ಬಾಯಿ ಅವರಿಗೆ ರಾಜ್ಯಮಟ್ಟದ ಶೌರ್ಯ ಪ್ರಶಸ್ತಿಯನ್ನು ನೀಡಿ, ಗೌರವಿಸಲಾಯಿತು.
ಮಕ್ಕಳ ಹಕ್ಕುಗಳು ಹಾಗೂ ಮಕ್ಕಳಲ್ಲಿ ಸೃಜನಶೀಲತೆಯನ್ನು ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರದ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಎಲ್.ತಿಪ್ಪ ನಾಯ್ಕ ಹಾಗೂ ಬಿ.ಬಿ. ಶಿವಾನಂದ್ ಭಾಗವಹಿಸಿ, ಶಿಕ್ಷಕರಿಗೆ ತರಬೇತಿ ನೀಡಿದರು.
ಕರ್ನಾಟಕ ಮಕ್ಕಳ ಅಕಾಡೆಮಿಯ ರಾಜ್ಯಾಧ್ಯಕ್ಷ ಎಲ್. ರೆಡ್ಡಿ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಪ ನಿರ್ದೇಶಕ ಯುವರಾಜ ನಾಯ್ಕ, ಬಿಇಒ ಎಂ.ಚನ್ನಬಸಪ್ಪ, ಪಿಡಿಒ ಗಂಗಾಧರ, ಸಮನ್ವಯಾಧಿಕಾರಿ ಶಿವಕುಮಾರ ಹಾಗೂ ಎಂ.ಎಸ್. ಪ್ರಭಾಕರ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಕೃಷ್ಣ ನಾಯ್ಕ, ಎಚ್. ಲೋಕಪ್ಪ, ಕೆ. ಬಸವರಾಜ, ಹನುಮಂತಪ್ಪ, ಮಕ್ಕಳ ಅಕಾಡೆಮಿಯ ರಮೇಶ, ತಿಪ್ಪೇಸ್ವಾಮಿ, ಪ್ರಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ: Shortest Day: ಭಾರತದ ಪಾಲಿಗೆ ನಾಳೆ ಅತ್ಯಂತ ಕಿರಿಯ ದಿನ! ಏನು ಕಾರಣ?
ಸಂಗೀತ ಶಿಕ್ಷಕಿ ಶಾರದ ಸಕ್ರಹಳ್ಳಿ ಪ್ರಾರ್ಥಿಸಿದರು. ಮಕ್ಕಳ ಅಕಾಡೆಮಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕೊಟ್ರೇಶ್ ನಿರೂಪಿಸಿದರು.