ಕೊಟ್ಟೂರು: ಗಣೇಶ ಚತುರ್ಥಿ (Ganesha Chaturthi) ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ, ಕೊಟ್ಟೂರು (Kottur) ಪಟ್ಟಣದಲ್ಲಿ ಈಗಾಗಲೇ ತರಹೇವಾರಿ ಗಣೇಶನ ಮೂರ್ತಿಗಳು ಸಿದ್ಧಗೊಳ್ಳುತ್ತಿದ್ದು, ಪರಿಸರ ಸ್ನೇಹಿ ಗಣೇಶನ ವಿಗ್ರಹಗಳಿಗೆ ಬೇಡಿಕೆ (Demand) ಹೆಚ್ಚಿದೆ.
ಕೊಟ್ಟೂರಿನಲ್ಲಿ ನಾಲ್ಕೈದು ಕುಟುಂಬಗಳು ವಂಶ ಪಾರಂಪರಿಕವಾಗಿ ವಿನಾಯಕನ ವಿಗ್ರಹಗಳನ್ನು ತಯಾರಿಸುತ್ತಿವೆ. ಈಗಾಗಲೇ ಪಟ್ಟಣದ ಯುವಕರು, ವಿವಿಧ ಸಂಘ ಸಂಸ್ಥೆಗಳು ಗಣೇಶನ ಪ್ರತಿಷ್ಠಾಪನೆಗಾಗಿ ತಮಗಿಷ್ಟವಾದ ಮಾದರಿಯಲ್ಲಿ ವಿಗ್ರಹಗಳನ್ನು ನಿರ್ಮಿಸಿ ಕೊಡಲು ಮುಂಗಡವಾಗಿ ಹಣ ನೀಡಿ, ತಯಾರಕರಿಗೆ ತಿಳಿಸುವುದರಿಂದ ಅದರಂತೆ ವಿಗ್ರಹ ಸಿದ್ಧವಾಗುತ್ತಿದೆ. ಗಣೇಶನ ಹಬ್ಬ ಹತ್ತಿರ ಬರುತ್ತಿರುವುದರಿಂದ ಮೂರ್ತಿಗಳ ತಯಾರಕರು ವಿವಿಧ ಆಕಾರದ ಗಣೇಶನ ಮೂರ್ತಿಗಳ ತಯಾರಿಕೆಯಲ್ಲಿ ನಿರತರಾಗಿದ್ದಾರೆ.
ಇದನ್ನೂ ಓದಿ: Weather report : ನಾಳೆ ಕರಾವಳಿ, ಮಲೆನಾಡಲ್ಲಿ ವ್ಯಾಪಕ ಮಳೆ; ಬೆಂಗಳೂರಲ್ಲಿ ಹೇಗಿರಲಿದೆ ಗೊತ್ತಾ?
ಪರಿಸರ ಸ್ನೇಹಿ ಗಣಪನ ಬೇಡಿಕೆ
ಜಲ ಮಾಲಿನ್ಯ ತಡೆಗಾಗಿ ಈಗಾಗಲೇ ಪಿಒಪಿ ಗಣೇಶನ ಮೂರ್ತಿಗಳ ತಯಾರಿಕೆಯನ್ನು ನಿಷೇಧಿಸಲಾಗಿದೆ. ಈ ಬಾರಿ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ. ವಿಗ್ರಹ ತಯಾರಕರು ಸಹ ಮೂರ್ತಿಗಳಿಗೆ ನೈಸರ್ಗಿಕ ಬಣ್ಣಗಳನ್ನು ಬಳಸಿ ಮೂರ್ತಿ ಸಿದ್ಧಗೊಳಿಸುತ್ತಿದ್ದಾರೆ. ಕೆಲ ಗ್ರಾಹಕರು ತಮಗೆ ಯಾವುದೇ ಬಣ್ಣ ಹಚ್ಚದಿರುವ ಗಣೇಶನ ಮೂರ್ತಿಗಳ ಸಿದ್ಧಪಡಿಸಿ ಕೊಡುವಂತೆ ತಿಳಿಸುವುದರಿಂದ ಅವುಗಳಿಗೂ ಬೇಡಿಕೆ ಹೆಚ್ಚಿದೆ ಎಂದು ಮೂರ್ತಿ ತಯಾರಕರು ತಿಳಿಸಿದ್ದಾರೆ.
ಗಣೇಶನ ಹಬ್ಬಕ್ಕಾಗಿ ಈಗಾಗಲೇ ಒಂದುವರೆ ತಿಂಗಳಿಂದಲೇ ಮೂರ್ತಿಗಳನ್ನು ತಯಾರಿಸುತ್ತಿದ್ದೇವೆ, ಶೇಕಡ 30ರಷ್ಟು ಜನರು ಬಣ್ಣ ಹಚ್ಚದ ಗಣೇಶನ ಮೂರ್ತಿಗಳಿಗೆ ಆರ್ಡರ್ ನೀಡಿದ್ದಾರೆ. ನಾವು ಜನರ ಬೇಡಿಕೆಗಳಿಗೆ ತಕ್ಕಂತೆ ಮೂರ್ತಿಗಳನ್ನು ತಯಾರಿಸುತ್ತಿದ್ದೇವೆ. ಆಯಿಲ್ ಪೇಂಟ್ ಬದಲಾಗಿ ವಾಟರ್ ಪೇಂಟನ್ನು ಬಳಸುತ್ತಿದ್ದೇವೆ ಎಂದು ಪಟ್ಟಣದ ವಿಗ್ರಹ ತಯಾರಕ ಸಿ., ಶ್ರೀಧರ್ ತಿಳಿಸಿದ್ದಾರೆ.
ಇದನ್ನೂ ಓದಿ: Yadgiri News: ಅಕ್ರಮವಾಗಿ ಶ್ರೀಗಂಧ ಕಟ್ಟಿಗೆ ಸಾಗಾಟ; ಆರೋಪಿಯ ಬಂಧನ
ನಾವು ಮೊದಲಿನಿಂದಲೂ ಅಚ್ಚನ್ನು ಬಳಸದೆ ಕೈಯಿಂದಲೇ ಮಣ್ಣಿನ ಮೂರ್ತಿಗಳನ್ನು ತಯಾರಿಸುತ್ತಿದ್ದೇವೆ, ಅನೇಕ ಗಣೇಶನ ವಿಗ್ರಹಗಳನ್ನು ನಾವು ಪ್ರತಿ ವರ್ಷ ತಯಾರಿಸುತ್ತಿದ್ದೇವೆ.
-ಸಿ. ಶ್ರೀಧರ, ಗಣೇಶನ ವಿಗ್ರಹ ತಯಾರಕ, ಕೊಟ್ಟೂರು.