Site icon Vistara News

Vijayanagara News: ಹರಪನಹಳ್ಳಿಯಲ್ಲಿ ಜನಸ್ಪಂದನ ಕಾರ್ಯಕ್ರಮಕ್ಕೆ ಡಿಸಿ ಎಂ.ಎಸ್‌. ದಿವಾಕರ್‌ ಚಾಲನೆ

Janaspandana programme at Harpanahalli

ಹರಪನಹಳ್ಳಿ: ಪಟ್ಣಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌, ಸಾರ್ವಜನಿಕರ ಅಹವಾಲು (Vijayanagara News) ಆಲಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ ಶಾ, ಹರಪನಹಳ್ಳಿ ಸಹಾಯಕ ಆಯುಕ್ತ ಚಿದಾನಂದ‌ ಗುರುಸ್ವಾಮಿ ಮತ್ತು ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳು, ಸಾರ್ವಜನಿಕರ ಅಹವಾಲು ಆಲಿಸಿದರು.

ಇದನ್ನೂ ಓದಿ: Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

ಜನಸ್ಪಂದನ ಕಾರ್ಯಕ್ರಮದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಅಹವಾಲು ಸಲ್ಲಿಸಿದ್ದು ವಿಶೇಷವಾಗಿತ್ತು. ರೈತ, ಕಾರ್ಮಿಕ, ಕೃಷಿ ಕೂಲಿಕಾರ್ಮಿಕ ಸಂಘಟನೆಗಳ ಮುಖಂಡರು ಸಹ ಆಗಮಿಸಿ ಮನವಿ ಸಲ್ಲಿಸಿದರು.

ಹಳ್ಳಿಕೇರಿ, ಮಾದಿಹಳ್ಳಿ, ಗೌರಿಪುರ ತೊಗರಿಕಟ್ಟಿ, ಜಿಟ್ಟಿನಕಟ್ಟಿ, ಯರಬಾಳು, ತಾವರಗೊಂದಿ, ಅರಸನಾಳು, ಹಲುವಾಗಲು, ಗರ್ಭಗುಡಿ, ಬಿಕ್ಕಿಕಟ್ಟಿ ಗ್ರಾಮದಲ್ಲಿನ ಫಲಾನುಭವಿಗಳಿಗೆ ನಿವೇಶನ ನೀಡಬೇಕು, ನಿವೇಶನಕ್ಕೆ ಸರ್ಕಾರಿ ಜಮೀನು ಹುಡುಕಿಕೊಡಬೇಕು. ಜಾಗವಿರುವ ಕಡೆಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಆಯಾ ಗ್ರಾಮಸ್ಥರು ಜನಸ್ಪಂದನ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿ, ಭಾಗ್ಯ, ಶ್ರುತಿ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.

ಅರಸಿಕೇರಿಯಲ್ಲಿ ನಾಡಕಚೇರಿ ನಿರ್ಮಿಸಬೇಕು. ಬಸ್ ಸೌಕರ್ಯ ಕಲ್ಪಿಸಬೇಕು. ಆಸ್ಪತ್ರೆಗೆ ವೈದ್ಯಾಧಿಕಾರಿಗಳನ್ನು ನೇಮಿಸಬೇಕು. ನಿರಂತರ ಜ್ಯೋತಿ ಸಮಸ್ಯೆ ಸರಿಪಡಿಸಬೇಕು ಎಂದು ಅರಸಿಕೆರೆ ಗ್ರಾಮದ ರೈತ ಮುಖಂಡರಾದ ಎಚ್. ಹಾಲಪ್ಪ, ಎ.ಬಿ. ನಾಗರಾಜಗೌಡ ಹಾಗೂ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಹಿಂಬರಹ ಕೊಡಿ

ಯಾವುದೇ ಅರ್ಜಿಗಳ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು. ಕಾನೂನಿನಲ್ಲಿ ಅವಕಾಶವಿದ್ದರೆ ಕೂಡಲೇ ಅರ್ಜಿ ಪರಿಶೀಲಿಸಿ ಕ್ರಮ ವಹಿಸಬೇಕು. ಇಲ್ಲದಿದ್ದಲ್ಲಿ ವಿಳಂಬ ಮಾಡದೇ ಹಿಂಬರಹ ನೀಡಬೇಕು ಎಂದು ಡಿಸಿ ಎಂ.ಎಸ್‌. ದಿವಾಕರ್‌, ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸೌಜನ್ಯದಿಂದ‌ ವರ್ತಿಸಿ

ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳ ಪರಿಶೀಲನೆ ವೇಳೆ ಸಮರ್ಪಕ ಮಾಹಿತಿ ನೀಡದ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಜಿಲ್ಲಾಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸರಿಯಾಗಿ ವರ್ತಿಸಿ ಸ್ಪಂದನೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಇದನ್ನೂ ಓದಿ: Foreign Investment: ರಾಜ್ಯದಲ್ಲಿ ಸ್ಮಾರ್ಟ್ ಫೋನ್ ಕ್ಯಾಮೆರಾ ಬಿಡಿಭಾಗ ತಯಾರಿಕೆ ಘಟಕ; ದ.ಕೊರಿಯಾ ಜತೆ ಕರ್ನಾಟಕ ಒಪ್ಪಂದ

ಕಾರ್ಯಕ್ರಮದ ಸ್ಥಳದಲ್ಲಿ ವಿವಿಧ ಇಲಾಖೆಗಳಿಂದ ಸಾಲಾಗಿ ಮಳಿಗೆ ಹಾಕಿ ಅರ್ಜಿ ಸ್ವೀಕಾರಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು.

ಮಾಹಿತಿ ಫಲಕ

ತೋಟಗಾರಿಕೆ, ಆರೋಗ್ಯ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅರಣ್ಯ ಇಲಾಖೆಗಳ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಯೋಜನೆಗಳ ಮಾಹಿತಿ‌ ಫಲಕಗಳನ್ನು ಸ್ಟಾಲ್‌ನಲ್ಲಿ ಅಳವಡಿಸಿ, ಕರಪತ್ರ ವಿತರಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್‌ ಗಿರೀಶಬಾಬು, ತಾಪಂ ಇಒ ಚಂದ್ರಶೇಖರ, ಡಿವೈಎಸ್ಪಿ ಮಹಾಂತೇಶ ಸಜ್ಜನ, ಪಿಎಸ್ಐ ಶಂಭುಲಿಂಗ ಹಿರೇಮಠ, ನರೇಗಾ ಸಹಾಯಕ ನಿರ್ದೇಶಕ ಸೋಮಶೇಖರ, ಸಿಡಿಪಿಒ ಜಿ ಅವಿನಾಶ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಜಿಲ್ಲಾಧಿಕಾರಿಗಳಿಂದ ನಗರ ಸಂಚಾರ

ಜನಸ್ಪಂದನ ಕಾರ್ಯಕ್ರಮಕ್ಕೆ ಮೊದಲು ಜಿಲ್ಲಾಧಿಕಾರಿಗಳು ಹರಪನಹಳ್ಳಿ ನಗರ ಸಂಚಾರ ನಡೆಸಿದರು. ಸಹಾಯಕ ಆಯುಕ್ತ ಚಿದಾನಂದ‌ ಗುರುಸ್ವಾಮಿ, ತಹಸೀಲ್ದಾರ್‌ ಗಿರೀಶಬಾಬು, ಪುರಸಭೆ ಮುಖ್ಯಾಧಿಕಾರಿ ಶಿವಕುಮಾರ ಎರಗುಡೆ ಅವರೊಂದಿಗೆ ಸೈಕಲ್ ಸವಾರಿ ನಡೆಸಿದರು.

ಇದನ್ನೂ ಓದಿ: Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

ಸೈಕಲ್‌ನಲ್ಲಿ ಸ್ಥಳೀಯ ಎಪಿಎಂಸಿಯಿಂದ ಹೊರಟು ಕೊಟ್ಟೂರ ಸರ್ಕಲ್, ಬಳಿಕ ಕೆಂಪಯ್ಯನಮಠ ಹತ್ತಿರ ಸಂಚರಿಸಿ ಶುಚಿತ್ವ ಕಾಯ್ದುಕೊಳ್ಳಲು ಜನತೆಗೆ ತಿಳಿಸಿದರು. ಬಳಿಕ ಟಿಎಂಎಇ ಸೊಸೈಟಿಯ ಶಾಲೆಗೆ ಭೇಟಿ ನೀಡಿ ವಿದ್ಯಾಭ್ಯಾಸದ ಬಗ್ಗೆ ಮಕ್ಕಳೊಂದಿಗೆ ಆತ್ಮೀಯವಾಗಿ ಮಾತನಾಡಿದರು. ಬಳಿಕ ಮಹೇಶ ಆಸ್ಪತ್ರೆಗೆ ತೆರಳಿ ಅಲ್ಲಿನ ಸ್ಕ್ಯಾನಿಂಗ್ ಯಂತ್ರ, ಚಿಕಿತ್ಸಾ ದರದ ಬಗ್ಗೆ ಪರಿಶೀಲಿಸಿದರು. ಡೆಂಘಿ ಜ್ವರ ಪರೀಕ್ಷೆಗೆ ಶುಲ್ಕ ಪಡೆಯುವಾಗ ಸರ್ಕಾರ ನಿಗದಿಪಡಿಸಿದ ನಿಯಮ ಪಾಲಿಸಲು ಸೂಚಿಸಿದರು. ಬಳಿಕ ವಿವಿಧೆಡೆ ಡಿಸಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

Exit mobile version