ಕೊಟ್ಟೂರು: ನಗರದ ಎಪಿಎಂಸಿ ಆವರಣದಲ್ಲಿನ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಸಾರ್ವಜನಿಕರ ಅಹವಾಲು (Vijayanagara News) ಆಲಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲೂಕಾಡಳಿತ ಮತ್ತು ತಾಲೂಕು ಪಂಚಾಯಿತಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ನೇಮಿರಾಜ ನಾಯ್ಕ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ ಶಾ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಲೀಮ್ ಪಾಶಾ ಮತ್ತು ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ನೇತೃತ್ವದಲ್ಲಿ ಡಿಸಿ ಎಂ.ಎಸ್. ದಿವಾಕರ್, ಸ್ವೀಕೃತವಾದ ಅರ್ಜಿಗಳನ್ನು ಪರಿಶೀಲಿಸಿದರು.
ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಮಚಂದ್ರಪ್ಪ ಕೆ.ಬಿ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಅಧಿಕಾರಿ ಡಾ.ಶಂಕರ ನಾಯ್ಕ, ಆಹಾರ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಶ್ವೇತಾ ಸೇರಿದಂತೆ ವಿವಿಧ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದು, ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಆಯಾ ಇಲಾಖೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಪರಿಶೀಲಿಸಿ, ಮಾಹಿತಿ ನೀಡಿದರು.
ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಜು. 6,7ರಂದು ʼನಟನ ತರಂಗಿಣಿʼ 20ನೇ ವರ್ಷೋತ್ಸವ
ಕುಡಿಯುವ ನೀರು ಪೂರೈಕೆ, ಮಾಸಾಶನ, ರಸ್ತೆ ಸುಧಾರಣೆ, ವಿದ್ಯುತ್ ಸಂಪರ್ಕ, ವಿವಿಧ ಭವನಗಳ ಮಂಜೂರಾತಿ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಸಾರ್ವಜನಿಕರು ತಮ್ಮ ಅಹವಾಲನ್ನು ಸಲ್ಲಿಸಿದರು. ಅಧಿಕಾರಿಗಳ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳು ಸಾರ್ವಜನಿಕ ಅಹವಾಲುಗಳ ಬಗ್ಗೆ ಚರ್ಚಿಸಿ ಕೆಲವು ಅಹವಾಲುಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಿದರು.
113 ಅರ್ಜಿಗಳು ಸ್ವೀಕೃತ
ಕಂದಾಯ ಇಲಾಖೆಗೆ 61, ಪಟ್ಟಣ ಪಂಚಾಯಿತಿಗೆ 19, ಕೃಷಿ ಇಲಾಖೆಗೆ 12, ತಾಲೂಕು ಪಂಚಾಯಿತಿಗೆ 10, ಜೆಸ್ಕಾಂ ಮತ್ತು ಸಿಡಿಪಿಓಗೆ ತಲಾ 4., ಸಾರಿಗೆ, ಭೂಮಾಪನ ಮತ್ತು ಆಹಾರ ಇಲಾಖೆಗೆ ತಲಾ 3, ಶಿಕ್ಷಣ ಇಲಾಖೆಗೆ 2, ಪಶುಪಾಲನೆ, ಎಪಿಎಂಸಿ, ಆರೋಗ್ಯ ಇಲಾಖೆ, ತೋಟಗಾರಿಕಾ ಇಲಾಖೆಗಳಿಗೆ ತಲಾ 1 ಅರ್ಜಿಗಳು ಸೇರಿ ಒಟ್ಟು 113 ಅರ್ಜಿಗಳು ಸ್ವೀಕೃತವಾದವು. ಸ್ವೀಕೃತವಾದ ಒಟ್ಟು ಅರ್ಜಿಗಳ ಪೈಕಿ 12 ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇ ಮಾಡಲಾಯಿತು.
ಕೃಷಿ, ತೋಟಗಾರಿಕೆ, ಶಾಲಾ ಶಿಕ್ಷಣ ಇಲಾಖೆ, ಆಹಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರಿಗೆ, ಲೋಕೋಪಯೋಗಿ, ಕಾರ್ಮಿಕ, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ, ಸರ್ವೆ ಇಲಾಖೆ, ಜೆಸ್ಕಾಂ, ಪ್ರಾದೇಶಿಕ ಸಾರಿಗೆ, ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮತ್ತು ಕೆಆರ್‌ಐಡಿಎಲ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ನೀಡುವ ಅರ್ಜಿಗಳನ್ನು ನೋಂದಾಯಿಸಿಕೊಂಡರು.
ಆರೋಗ್ಯ ತಪಾಸಣೆ
ತಾಲೂಕು ಆರೋಗ್ಯ ಇಲಾಖೆಯಿಂದ ಕಾರ್ಯಕ್ರಮದ ಸ್ಥಳದಲ್ಲಿ ಉಚಿತವಾಗಿ ಮಧುಮೇಹ, ರಕ್ತದೊತ್ತಡ ಸೇರಿದಂತೆ ವಿವಿಧ ಕಾಯಿಲೆಗಳ ಬಗ್ಗೆ ಪರೀಕ್ಷೆ ನಡೆಸಿ ಔಷಧೋಪಚಾರ ನೀಡಲಾಯಿತು.
ಇದನ್ನೂ ಓದಿ: Uttara Kannada News: ರೈತ ಯುವಕರು, ವಿಕಲಚೇತನರ ವಿವಾಹಕ್ಕೆ ಉ.ಕ ಜಿಲ್ಲಾಡಳಿತದಿಂದ ವಿನೂತನ ಪ್ರಯತ್ನ!
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಅಮರೇಶ ಜಿ.ಕೆ., ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವೈ.ರವಿಕುಮಾರ್, ಸಿಡಿಪಿಒ ವಿಜಯಲಕ್ಷ್ಮಿ, ಬಿಇಒ ಪದ್ಮನಾಭ ಕರ್ಣಂ, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರದೀಪ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಇತರರು ಇದ್ದರು.