Site icon Vistara News

Vijayanagara News: ಕೊಟ್ಟೂರಿನಲ್ಲಿ ಜನತಾ ದರ್ಶನ ಕಾರ್ಯಕ್ರಮ; 98 ಅರ್ಜಿಗಳ ಸ್ವೀಕಾರ

Janata Darshan programme in Kottur

ಕೊಟ್ಟೂರು: ವಿಜಯನಗರ ಜಿಲ್ಲಾಡಳಿತದಿಂದ ತಾಲೂಕು ಮಟ್ಟದ ‘ಜನತಾ ದರ್ಶನ’ (Janata Darshana) ಕಾರ್ಯಕ್ರಮವು ಮಂಗಳವಾರ ಕೊಟ್ಟೂರಿನಲ್ಲಿ (Kottur) ವಿಭಿನ್ನವಾಗಿ ನಡೆಯಿತು.

ಜನತಾ ದರ್ಶನ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌, ಬೆಳಗ್ಗೆಯೇ ಹೊಸಪೇಟೆಯಿಂದ ಹೊರಟು ಬೆಳಗ್ಗೆ 8.30ಕ್ಕೆ ಕೊಟ್ಟೂರಿಗೆ ಆಗಮಿಸಿದರು. ಬೆಳಗ್ಗೆಯಿಂದಲೇ ಪಟ್ಟಣ ಸಂಚಾರ ಆರಂಭಿಸಿದ ಜಿಲ್ಲಾಧಿಕಾರಿಗಳು, ಸತತ ಎರಡೂವರೆ ಗಂಟೆಗಳ ಕಾಲ ಕೊಟ್ಟೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನಾನಾ ವಾರ್ಡ್‌ಗಳಿಗೆ ತೆರಳಿ, ಸಾರ್ವಜನಿಕರ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ರಸ್ತೆ ಮತ್ತು ಇತರ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು.

ಜಿಲ್ಲಾಧಿಕಾರಿಗಳು, ಪಟ್ಟಣದ ಮಹಾತ್ಮ ಗಾಂಧೀಜಿಯವರ ಚಿತಾಭಸ್ಮ ಸ್ಥಳದಿಂದ ಸೈಕಲ್ ಏರಿ ಸಂಚಾರ ಆರಂಭಿಸಿದ್ದು ವಿಶೇಷವಾಗಿತ್ತು. ಅಲ್ಲಿಂದ ವಿವಿಧೆಡೆ ತೆರಳಿ ಸಾರ್ವಜನಿಕರೊಂದಿಗೆ ಆಪ್ತವಾಗಿ ಮಾತನಾಡಿ ಹಲವಾರು ಮಾಹಿತಿ ಪಡೆದರು. ಸಂಚಾರ ನಡೆಸಿದ ಎಲ್ಲ ಕಡೆಗಳಲ್ಲಿ ವಿಶೇಷವಾಗಿ ಶುಚಿತ್ವಕ್ಕೆ ಹೆಚ್ಚಿನ ಒತ್ತು ಕೊಡುವಂತೆ ಜನಜಾಗೃತಿ ಮೂಡಿಸಿದರು.

ಕೊಟ್ಟೂರು ಪಟ್ಟಣದಲ್ಲಿ ವಿಜಯನಗರ ಡಿಸಿ ಎಂ.ಎಸ್. ದಿವಾಕರ್‌ ಸೈಕಲ್‌ನಲ್ಲಿ ವಿವಿಧೆಡೆ ಸಂಚರಿಸಿ, ಸಾರ್ವಜನಿಕರಿಂದ ಹಲವು ಮಾಹಿತಿ ಪಡೆದರು.

ಮೊದಲಿಗೆ ಪಟ್ಟಣದ ಉಜ್ಜಯಿನಿ ವೃತ್ತದ ಬಳಿಯಲ್ಲಿನ ಶಾಲೆ ಎದುರು ಇರುವ ಶೌಚಾಲಯಗಳ ವೀಕ್ಷಣೆ ನಡೆಸಿ ಅವುಗಳ ಸ್ವಚ್ಛತೆಗೆ ಕ್ರಮವಹಿಸಲು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು. ಅಲ್ಲಿಂದ ಕೆಳಗೇರಿ ದುರಗಮ್ಮನ ಗುಡಿ ಮುಂಭಾಗದಿಂದ ಗಚ್ಚಿನಮಠಕ್ಕೆ ಹೋಗುವ ರಸ್ತೆಯ ಅಕ್ಕಪಕ್ಕದ ಮನೆಗಳ ಸಾರ್ವಜನಿಕರೊಂದಿಗೆ ಮಾತನಾಡಿ, ಕುಡಿಯುವ ನೀರಿನ ಬಗ್ಗೆ ಚರ್ಚಿಸಿದರು. ಬಳಿಕ ಗಚ್ಚಿನಮಠದ ಆವರಣದಲ್ಲಿ ನಡೆಯುತ್ತಿದ್ದ ಕಾಮಗಾರಿಯ ಬಗ್ಗೆ ವಿಚಾರಣೆ ಮಾಡಿದರು. ಆನಂತರ ಬಳ್ಳಾರಿ ಕ್ಯಾಂಪ್ ಪ್ರದೇಶಕ್ಕೆ ತೆರಳಿ ಅಲ್ಲಿ ಪಟ್ಟಣ ಪಂಚಾಯಿತಿಯಿಂದ 50 ಮನೆ ಖಾತಾ ದಾಖಲೆ ಫಾರಂ ನಂ.3 ಗಳನ್ನು ಸಾಂಕೇತಿಕವಾಗಿ ಕೆಲವರಿಗೆ ವಿತರಿಸಿದರು.

ಇದನ್ನೂ ಓದಿ: Academy Awards : ಇದು ನಿಮ್ಮ ಮೊದಲ ಕೃತಿಯೇ?; ಹಾಗಿದ್ರೆ ಸಾಹಿತ್ಯ ಅಕಾಡೆಮಿ ಬಹುಮಾನಕ್ಕಾಗಿ ಅರ್ಜಿ ಸಲ್ಲಿಸಿ

ಬಳಿಕ ಬಸ್ ನಿಲ್ದಾಣದ ಬಳಿಗೆ ತೆರಳಿ ಅಲ್ಲಿನ ನಾನಾ ಹೊಟೆಲ್ ಮಾಲೀಕರರೊಂದಿಗೆ ಮಾತನಾಡಿ, ಶುಚಿತ್ವ ಕಾಯ್ದುಕೊಳ್ಳುವುದರ ಬಗ್ಗೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಬಸ್ ನಿಲ್ದಾಣದ ಆವರಣದಲ್ಲಿನ ಶೌಚಾಲಯಗಳ ವೀಕ್ಷಣೆ ನಡೆಸಿ ಶುಚಿತ್ವ ಕಾಯ್ದುಕೊಳ್ಳಲು ಬಸ್ ಡಿಪೋ ಮ್ಯಾನೇಜರ್‌ಗೆ ಸೂಚನೆ ನೀಡಿದರು. ಬಾಲಾಜಿ ಲಾಡ್ಜ್ ಪಕ್ಕದಲ್ಲಿರುವ ಮನೆಗಳಿಗೆ ಕಾಲುವೆ ನೀರು ಹರಿಯುತ್ತಿರುವುದನ್ನು ವೀಕ್ಷಣೆ ನಡೆಸಿ ಅಲ್ಲಿ ಶುಚಿತ್ವ ಕಾಯ್ದುಕೊಳ್ಳಲು ಮತ್ತು ಕಾಲುವೆಗೆ ಸರಿಯಾದ ಕಾಮಗಾರಿ ನಡೆಸಲು ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.

ಇದನ್ನೂ ಓದಿ: ಕ್ರಿಕೆಟ್​ ಪ್ರಿಯರೇ ಗಮನಿಸಿ! ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ನಾಳೆ ಪಾರ್ಕಿಂಗ್ ನಿಷೇಧ

ನಂತರ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಔಷಧಿ ಸೇರಿದಂತೆ ನಾನಾ ವೈದ್ಯಕೀಯ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಆಸ್ಪತ್ರೆಯಲ್ಲಿ ಶುಚಿತ್ವ ಕಾಯ್ದುಕೊಳ್ಳುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಬಳಿಕ ಕೃಷಿ ಉತ್ಪನ್ನ ಮಾರುಕಟ್ಟೆಗೆ ತೆರಳಿ ಅಲ್ಲಿನ ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ರೈತರ ನೋಂದಣಿಯ ಬಗ್ಗೆ ಚರ್ಚಿಸಿದರು. ನಗರ ಸಂಚಾರದ ವೇಳೆಯಲ್ಲಿ ಬೀದಿ ಬದಿಯ ವ್ಯಾಪಾರಿಗಳೊಂದಿಗೆ ಮಾತನಾಡಿ, ಅವರ ಯೋಗಕ್ಷೇಮ ವಿಚಾರಿಸಿದರು. ಪೌರ ಕಾರ್ಮಿಕರಿಗೆ ಕಡ್ಡಾಯವಾಗಿ ಕೈಗವಸು ಮತ್ತು ತಲೆಗವಸು ಸರಬರಾಜು ಮಾಡಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಪಟ್ಟಣ ಪಂಚಾಯಿತಿಯಿಂದ ಸುರಕ್ಷತಾ ಸಾಮಗ್ರಿ ಪಡೆದುಕೊಂಡೆ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ಜಿಲ್ಲಾಧಿಕಾರಿಗಳು, ಪೌರ ಕಾರ್ಮಿಕರಿಗೆ ಸಲಹೆ ಮಾಡಿದರು.

ಜನತಾ ದರ್ಶನ ಕಾರ್ಯಕ್ರಮವನ್ನು ಹಗರಿಬೊಮ್ಮನಹಳ್ಳಿ ಶಾಸಕ ಕೆ.ನೇಮರಾಜ್ ನಾಯ್ಕ ಉದ್ಘಾಟಿಸಿ, ಮಾತನಾಡಿದರು.

ಈ ಸಂದರ್ಭದಲ್ಲಿ ಕೊಟ್ಟೂರು ಸೇರಿದಂತೆ ಸುತ್ತಲಿನ ನಾನಾ ಹಳ್ಳಿಗಳ ಗ್ರಾಮಸ್ಥರ ಅಹವಾಲುಗಳನ್ನು ಶಾಸಕ ಕೆ.ನೇಮರಾಜ್ ನಾಯ್ಕ, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ಅವರು ಆಲಿಸಿದರು.

ಈ ವೇಳೆ ಸಾರ್ವಜನಿಕರ ಕೆಲವು ಅರ್ಜಿಗಳ ಬಗ್ಗೆ ಡಿಸಿ ಎಂ.ಎಸ್. ದಿವಾಕರ್‌, ಸ್ಥಳದಲ್ಲಿದ್ದ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಿದರು. ಬಾಕಿ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ವರ್ಗಾಯಿಸಲು ಸೂಚನೆ ನೀಡಿದರು. ಜನತಾ ದರ್ಶನದಲ್ಲಿ ಸ್ವೀಕೃತವಾದ ಅರ್ಜಿಗಳಿಗೆ ಕಾಲಮಿತಿಯೊಳಗೆ ಪರಿಹಾರ ಕಲ್ಪಿಸಲು ಆಯಾ ಇಲಾಖೆಗಳ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಅಧಿಕಾರಿಗಳಿಗೆ ಗಡುವು ನೀಡಿದರು.

ಜನತಾ ದರ್ಶನ ಕಾರ್ಯಕ್ರಮದಲ್ಲಿ ಒಟ್ಟು 98 ಅರ್ಜಿಗಳು ಸ್ವೀಕೃತವಾದವು.

ಇದನ್ನೂ ಓದಿ: Sesame Seeds Beauty Tips: ನಿಮಗೆ ಗೊತ್ತಿದೆಯೆ? ಎಳ್ಳು ಸೌಂದರ್ಯ ವರ್ಧಕ!

ಸಮಾರಂಭದಲ್ಲಿ ತಹಸೀಲ್ದಾರ್‌ ಅಮರೇಶ ಜಿ.ಕೆ. ಸ್ವಾಗತಿಸಿದರು. ಸಿ.ಎಂ. ಗುರುಬಸವರಾಜ ನಿರೂಪಿಸಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ ವಂದಿಸಿದರು. ಕಂದಾಯ ನಿರೀಕ್ಷಕ ಹಾಲಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ ಹರೀಶ್ ಮತ್ತು ಸಿಬ್ಬಂದಿ ಇದ್ದರು.

Exit mobile version