ಹೂವಿನ ಹಡಗಲಿ: ಸಾರ್ವಜನಿಕ ಸಮಸ್ಯೆಗಳ ಅರ್ಜಿ ಸ್ವೀಕಾರ ಹಾಗೂ ಅವುಗಳನ್ನು ಸ್ಥಳದಲ್ಲಿಯೇ ತ್ವರಿತವಾಗಿ ಪರಿಹರಿಸಲು ಜನತಾ ದರ್ಶನ (Janata Darshana) ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಹೂವಿನಹಡಗಲಿ ಶಾಸಕ ಕೃಷ್ಣ ನಾಯ್ಕ ತಿಳಿಸಿದರು.
ವಿಜಯನಗರ ಜಿಲ್ಲಾಡಳಿತದಿಂದ ಜಿಲ್ಲೆಯ ಹೂವಿನಹಡಗಲಿ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ‘ಜನತಾ ದರ್ಶನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನತಾ ದರ್ಶನ ಒಂದು ವಿನೂತನ ಹಾಗೂ ಒಳ್ಳೆಯ ಕಾರ್ಯಕ್ರಮ. ಇದರಿಂದ ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರವಾಗಿ ಪರಿಹಾರ ಸಿಗಲಿದೆ. ಹೂವಿನಹಡಗಲಿ ವಿಧಾನಸಭಾ ಕ್ಷೇತ್ರವು ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದಿರುವ ಕ್ಷೇತ್ರ ಎಂದರೆ ತಪ್ಪಾಗಲಾರದು. ಈ ಭಾಗದಲ್ಲಿ ದಿನನಿತ್ಯ ಜನರ ಸಮಸ್ಯೆಗಳಿರುತ್ತವೆ. ಪ್ರಸ್ತುತ ಬರಗಾಲವಾಗಿದ್ದು, ಜನರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಈ ಸಮಯದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯತ್ತಿರುವ ಜನತಾ ದರ್ಶನ ಕಾರ್ಯಕ್ರಮದಿಂದ ರೈತರು, ಜನಸಾಮಾನ್ಯರು ಜಿಲ್ಲಾ ಕೇಂದ್ರಕ್ಕೆ ಹಾಗೂ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ ಅವರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Job News: IREL 88 ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶ
ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ದಿವಾಕರ್ ಎಂ.ಎಸ್. ಉದ್ಘಾಟಿಸಿ, ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿ, ಅಹವಾಲು ಆಲಿಸಿದರು. ಬಳಿಕ ಮಾತನಾಡಿದ ಅವರು, ಸರ್ಕಾರದ ನಿರ್ದೇಶನದನ್ವಯ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಪರಿಹಾರ ಕೈಗೊಳ್ಳುವ ನಿಟ್ಟಿನಲ್ಲಿ ಪ್ರತಿ 15 ದಿನಗಳಿಗೊಮ್ಮೆ ತಾಲೂಕುಮಟ್ಟದಲ್ಲಿ ಅಥವಾ ಹೋಬಳಿ ಮಟ್ಟದಲ್ಲಿ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಿ, ಸ್ವೀಕೃತವಾಗುವ ಅರ್ಜಿಗಳ ವಿಲೇವಾರಿಗೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಹಡಗಲಿ ತಾಲೂಕಿನ ದೇವಗೊಂಡನಹಳ್ಳಿ ಗ್ರಾಮದಲ್ಲಿನ ಹಳ್ಳವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಹೊಲ ಗದ್ದೆಗಳಿಗೆ ಹೋಗಲು ದಾರಿ ಇಲ್ಲ. ಕೃಷಿ ಮಾಡುವುದೇ ಕಷ್ಟವಾಗಿದೆ ಎಂದು ರೈತರೊಬ್ಬರು ಅಳಲು ತೋಡಿಕೊಂಡರು. ನಕಾಶೆಯಲ್ಲಿ ರಸ್ತೆ ಇದ್ದರೆ ಕೂಡಲೇ ತೆರವುಗೊಳಿಸಿ ಎಂದು ತಹಸೀಲ್ದಾರ್ ಶರಣಮ್ಮಗೆ ಜಿಲ್ಲಾಧಿಕಾರಿ ದಿವಾಕರ್ ಸೂಚನೆ ನೀಡಿದರು.
ಪಟ್ಟಣದ ಸೊಪ್ಪಿನ ಕಾಳಮ್ಮ ಬಡಾವಣೆಯಲ್ಲಿ ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಭಾರೀ ಅವ್ಯವಸ್ಥೆ ನಿರ್ಮಾಣವಾಗಿದೆ ಎಂದು ನಿವೃತ್ತ ಶಿಕ್ಷಕರು ಹೇಳಿದರು, ತಕ್ಷಣ ಸಮಸ್ಯೆ ಬಗೆಹರಿಸುವಂತೆ ಮುಖ್ಯಾಧಿಕಾರಿಗೆ ಡಿಸಿ ದಿವಾಕರ್ ಸೂಚನೆ ನೀಡಿದರು.
ಇದನ್ನೂ ಓದಿ: Archaeological Survey: ಆಳುಪ ದೊರೆ 2ನೇ ಬಂಕಿದೇವನ ಶಾಸನ ಅಧ್ಯಯನ
ಪಟ್ಟಣದ ಪಾದಚಾರಿ ರಸ್ತೆ ಅತಿಕ್ರಮಣ, ತಾಲೂಕಾ ಕ್ರೀಡಾಂಗಣದಲ್ಲಿ ಕ್ರೀಡಾ ಚಟುವಟಿಕೆ ಇಲ್ಲದಿರುವುದು, ಅಂತರ ಜಿಲ್ಲಾ ಸಂಪರ್ಕಕ್ಕಾಗಿ ಮಾಗಳ – ವಿಠಲಾಪೂರ ಮಾರ್ಗದ ರಸ್ತೆಗೆ ತುಂಗಭದ್ರಾ ನದಿಗೆ ಅಡ್ಡಲಾಗಿ ರಸ್ತೆ ನಿರ್ಮಾಣ ಸೇರಿ ಹತ್ತು ಹಲವು ಸಮಸ್ಯೆಗಳನ್ನು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಮುಂದಿಟ್ಡರು.
ವಿವಿಧ ಇಲಾಖೆಯ 28 ಕೌಂಟರ್ ಸ್ಥಾಪನೆ
ಸಾರ್ವಜನಿಕರಿಂದ ಅಹವಾಲು ಸಲ್ಲಿಕೆಗೆ ಜಿಲ್ಲಾಡಳಿತದಿಂದ ಕೌಂಟರ್‌ಗಳನ್ನು ಸ್ಥಾಪಿಸಿ, ಇಲಾಖಾವಾರು ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಕಂದಾಯ ಇಲಾಖೆ, ತಾಲೂಕು ಪಂಚಾಯಿತಿ, ಪೌರಾಡಳಿತ ಸೇರಿ ಸುಮಾರು 28 ಕೌಂಟರ್ ತೆರೆದು ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಲಾಯಿತು. ಪಿಂಚಣಿ ಸೌಲಭ್ಯ ಸೇರಿದಂತೆ ಕೆಲವೊಂದನ್ನು ಅಹವಾಲುಗಳಿಗೆ ಜಿಲ್ಲಾಧಿಕಾರಿಗಳು ಸ್ಥಳದಲ್ಲಿಯೇ ಪರಿಹರಿಸಿದರು. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಜಾಬ್ ಕಾರ್ಡ್ ವಿತರಣೆ ಮಾಡಲಾಯಿತು.
ಇದನ್ನೂ ಓದಿ: Leopard Death : ಅರಣ್ಯಾಧಿಕಾರಿಗಳು ಹುಡುಕುತ್ತಿದ್ದ ಚಿರತೆ ಕರೆಂಟ್ ಶಾಕ್‌ನಿಂದ ಸಾವು!
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಅಶೋಕ ತೋಟದ, ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.