Site icon Vistara News

Vijayanagara News: ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು: ಡಾ.ಟಿ. ಶ್ಯಾಮ್ ಭಟ್

Karnataka State Human Rights Commission Chairman dr T Shyam Bhat meeting with district level officials at Hosapete

ಹೊಸಪೇಟೆ: ಸಾರ್ವಜನಿಕ ಸೇವೆ ಒದಗಿಸುವಲ್ಲಿ ಲೋಪ, ತೊಂದರೆ ಆಗದಂತೆ ಅಧಿಕಾರಿಗಳು ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಬೇಕು. ಬೇರೆ ಬೇರೆ ಅಹವಾಲುಗಳೊಂದಿಗೆ ಕಚೇರಿಗೆ ಆಗಮಿಸುವ ಸಾರ್ವಜನಿಕರೊಂದಿಗೆ ಅಧಿಕಾರಿಗಳು ಸೌಜನ್ಯದಿಂದ ವರ್ತಿಸಬೇಕು ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ್ ಭಟ್ (Vijayanagara News) ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಆಡಿಟೋರಿಯಂ ಸಭಾಂಗಣದಲ್ಲಿ ಗುರುವಾರ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅವರು ಮಾತನಾಡಿದರು.

ಮಾನವ ಹಕ್ಕುಗಳ ಉಲ್ಲಂಘನೆಯಾಗಿವೆ ಎನ್ನುವ ಅಂಶಗಳಿಗೆ ಸಂಬಂಧಿಸಿದ ಆಯೋಗಕ್ಕೆ ಸಲ್ಲಿಕೆಯಾಗುವ ದೂರುಗಳ ಬಗ್ಗೆ ಆಯೋಗವು ವರದಿ ಬಯಸಿದಾಗ ಅಧಿಕಾರಿಗಳು ವಿಳಂಬ ಮಾಡದೇ ಸೂಕ್ತವಾದ ವರದಿಯನ್ನು ಸಲ್ಲಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದಲ್ಲಿ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಸೂಕ್ತ ಕ್ರಮಕ್ಕಾಗಿ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: Vijayanagara News: ಹೊಸಪೇಟೆಯ ದೇವರಾಜ ಅರಸು ಟ್ರಕ್ ಟರ್ಮಿನಲ್‌ ಸ್ಥಳಕ್ಕೆ ಸಚಿವ ರಾಮಲಿಂಗಾರೆಡ್ಡಿ ಭೇಟಿ

ಆಯೋಗದ ಸದಸ್ಯ ಎಸ್.ಕೆ. ವಂಟಿಗೋಡಿ ಮಾತನಾಡಿ, ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಸಂರಕ್ಷಣೆ ಮಾಡುವ ಜವಾಬ್ದಾರಿಯು ಸರ್ಕಾರದ ಮೇಲಿದೆ. ಯಾವುದೇ ದೂರುಗಳು ದಾಖಲಾಗದ ಹಾಗೆ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ, ಮಾನವ ಹಕ್ಕುಗಳ ಮೌಲ್ಯವನ್ನು ಕಾಪಾಡಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ಮಾತನಾಡಿ, ಕಾಲಕಾಲಕ್ಕೆ ಅಧಿಕಾರಿಗಳೊಂದಿಗೆ ನಡೆಸುವ ಸಭೆಯಲ್ಲಿ, ಮಾನವ ಹಕ್ಕುಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ಉತ್ತಮ ರೀತಿಯಲ್ಲಿ ಸೇವೆ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತಿದೆ. ಮುಖ್ಯವಾಗಿ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಉತ್ತಮ ಸೇವೆಗಾಗಿ ಸೂಕ್ತ ಮಾರ್ಗದರ್ಶನ ಮಾಡಲಾಗುತ್ತಿದೆ.

ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒಳಗೊಂಡು ವಾಟ್ಸಪ್ ಗ್ರೂಪ್ ರಚಿಸಿ ರೋಗಿಗಳಿಗೆ ಚಿಕಿತ್ಸೆ ನೀಡುವುದು, ಮಕ್ಕಳಿಗೆ ಆಹಾರ ಧಾನ್ಯ ಪೂರೈಕೆ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಛಾಯಾಚಿತ್ರಗಳ ಮೂಲಕ ಪರೀಕ್ಷಿಸಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಕಾಲಕಾಲಕ್ಕೆ ವಸತಿ ನಿಲಯಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: Yadgiri News: ನಿಸ್ವಾರ್ಥ ಸೇವೆಯಿಂದ ಮಾತ್ರ ಬದುಕಿನ ಮೌಲ್ಯ ವೃದ್ಧಿ: ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ ಶಾ, ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಕಾರ್ಯದರ್ಶಿ ಎ.ದಿನೇಶ್ ಸಂಪತ್‌ರಾಜ್, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಅರುಣ್ ಪೂಜಾರ, ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಲೀಮ್ ಪಾಶಾ, ನಗರಸಭೆ ಪೌರಾಯುಕ್ತ ಮನೋಹರ್, ತಹಸೀಲ್ದಾರ್‌ ವಿಶ್ವಜಿತ್ ಮೆಹತಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

Exit mobile version