ಹೊಸಪೇಟೆ: ಕಿತ್ತೂರು ರಾಣಿ ಚೆನ್ನಮ್ಮನವರ (Kitturu Raani Chennamma) ಹೋರಾಟ-ಬದುಕು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ಜಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹೊಸಪೇಟೆ ನಗರಸಭೆ ಸಹಯೋಗದಲ್ಲಿ ಜಂಬುನಾಥ ರಸ್ತೆಯ ಗವಿಸಿದ್ದೇಶ್ವರ ನಗರದ ಕಿತ್ತೂರು ರಾಣಿ ಚೆನ್ನಮ್ಮ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಅವರು ದೇಶಕ್ಕಾಗಿ ಮಾಡಿದ ತ್ಯಾಗ, ಪರಿಶ್ರಮ, ಹೋರಾಟದ ಬಗ್ಗೆ ಇಂದಿನ ಯುವ ಪೀಳಿಗೆಗೆ ಅರಿವು ಮೂಡಿಸಲು ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದೆ. ಚೆನ್ನಮ್ಮರ ಹೋರಾಟದ ಮನೋಭಾವ ಎಲ್ಲರಿಗೂ ಆದರ್ಶವಾಗಿವೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ್ದ ಹಂಪಿ ಹೇಮಕೂಟ ಸಿಂಹಾಸನಾದೀಶ್ವರ ಜಗದ್ಗುರು ಕೊಟ್ಟೂರು ಬಸವಲಿಂಗ ಸ್ವಾಮೀಜಿ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮನವರು ಒಂದು ಸಮುದಾಯಕ್ಕೆ ಮಾತ್ರ ಸಿಮಿತವಲ್ಲ. ಅವರು ಈ ಮನುಕುಲದ ಆಸ್ತಿಯಾಗಿದ್ದಾರೆ. ಇಂದಿನ ಎಲ್ಲಾ ಮಕ್ಕಳು ಉನ್ನತ ಮಟ್ಟದ ಶಿಕ್ಷಣವನ್ನು ಪಡೆದು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: Kannada Rajyotsava: ಕನ್ನಡ ನಾಡು ʻಕರ್ನಾಟಕʼ ಆಗಿದ್ದು ಹೇಗೆ?
ಹೊಸಪೇಟೆಯ ಅನಂತಶಯನಗುಡಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯಗುರು ಡಾ. ಅಕ್ಕಮಹಾದೇವಿ ಆರ್.ಎಸ್. ಕಿತ್ತೂರು ರಾಣಿ ಚೆನ್ನಮ್ಮನವರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಗ್ರೇಡ್-2 ತಹಶೀಲ್ದಾರ ವೆಂಕಟೇಶ ಆಶ್ರಿತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣವರ ಸೇರಿದಂತೆ ಸಮಾಜದ ಮುಖಂಡರು, ಜನಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಮೆರವಣಿಗೆಗೆ ಡಿಸಿ ಚಾಲನೆ
ಜಯಂತ್ಯುತ್ಸವ ನಿಮಿತ್ತ ಏರ್ಪಡಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಚಾಲನೆ ನೀಡಿದರು.
ಮೆರವಣಿಗೆಯು ಕಲಾತಂಡಗಳೊಂದಿಗೆ ಶ್ರೀ ಕೊಟ್ಟೂರುಸ್ವಾಮಿ ಮಠದಿಂದ ಆರಂಭಗೊಂಡು, ವಡಕರಾಯ ದೇವಸ್ಥಾನ ವೃತ್ತ, ಬಳ್ಳಾರಿ ರಸ್ತೆ ಮೂಲಕ, ಜಂಬುನಾಥ ರಸ್ತೆ ಮೂಲಕ ಕಿತ್ತೂರು ರಾಣಿ ಚೆನ್ನಮ್ಮ ಪ್ರೌಢಶಾಲೆಯವರೆಗೆ ಅದ್ದೂರಿಯಾಗಿ ಜರುಗಿತು. ದೀಪಾಯನ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಕೆ.ಎಸ್. ವೇದಾಶ್ರೀ ಕಿತ್ತೂರು ರಾಣಿ ಚೆನ್ನಮ್ಮ ವೇಷಧರಿಸಿ, ಕುದುರೆ ಸವಾರಿಯ ಮೂಲಕ ಮೆರವಣಿಗೆಯಲ್ಲಿ ಭಾಗವಹಿಸಿದ್ದು, ವಿಶೇಷವಾಗಿತ್ತು.
ಇದನ್ನೂ ಓದಿ: Side Effects Of Fiber: ನಾರಿನ ಅಂಶ ಒಳ್ಳೆಯದು; ಆದರೆ ಅತಿಯಾಗಿ ತಿನ್ನಬಾರದು, ಏಕೆಂದರೆ…
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣವರ ಸೇರಿದಂತೆ ಸಮಾಜದ ಮುಖಂಡರು, ಇತರ ಅಧಿಕಾರಿಗಳು ಉಪಸ್ಥಿತರಿದ್ದರು.