Site icon Vistara News

Vijayanagara News: ಯುನೆಸ್ಕೊ ಸಾಂಸ್ಕೃತಿಕ ವಲಯದ ಮುಖ್ಯಸ್ಥರೊಂದಿಗೆ ಸಭೆ; ಸುಸ್ಥಿರ ಪ್ರವಾಸೋದ್ಯಮದ ಬಗ್ಗೆ ಚರ್ಚೆ

Meeting with Head of UNESCO Cultural Sector at DC Office Vijayanagara

ವಿಜಯನಗರ (ಹೊಸಪೇಟೆ): ಯುನೆಸ್ಕೊದಿಂದ (UNESCO) ವಿಶ್ವ ಪ್ರಸಿದ್ಧ ಹಂಪಿಗೆ (Hampi) ಆಗಮಿಸಿರುವ ಸೌತ್ ಕೋರಿಯಾದ (South Korea) ಸಾಂಸ್ಕೃತಿಕ ವಲಯದ ಮುಖ್ಯಸ್ಥೆ ಜುನಾಯಿ ಹಾನ್ ಅವರೊಂದಿಗೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌ ಹಾಗೂ ಹಂಪಿಯ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಹಮದ್ ಅಲಿ ಅಕ್ರಮ ಷಾ ಅವರು ಸಭೆ ನಡೆಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹಂಪಿಯ ಪ್ರದೇಶದ ಐತಿಹ್ಯದ ವಿಶೇಷತೆಗಳು ಹಾಗೂ ಅಭಿವೃದ್ಧಿ ಬಗ್ಗೆ ಮುಖ್ಯವಾಗಿ ಸುಸ್ಥಿರ ಪ್ರವಾಸೋದ್ಯಮದ ಬಗ್ಗೆ ಸುಧೀರ್ಘ ಚರ್ಚೆ ನಡೆಯಿತು.

ಹಂಪಿಯ ಪ್ರದೇಶದ ಸ್ಥಿತಿಗತಿಯ ಬಗ್ಗೆ ಅಧ್ಯಯನ ಮತ್ತು ಚರ್ಚೆ ನಡೆಸಲು ವಿಜಯನಗರ ಜಿಲ್ಲೆಗೆ ಆಗಮಿಸಿದ್ದಾಗಿ ತಿಳಿಸಿದ ಜುನಾಯಿ ಹಾನ್ ಅವರು ಮಾತನಾಡಿ, ಹಂಪಿಯ ವಿರುಪಾಕ್ಷೇಶ್ವರ ದೇವಾಲಯದಿಂದ ಎದುರು ಬಸವಣ್ಣದವರೆಗಿನ ಎರಡು ಕಡೆಯ ಹಂಪಿಯ ಬಜಾರ್ ಕೋಣೆಗಳನ್ನು ದುರಸ್ಥಿ ಮಾಡುವುದರ ಬಗ್ಗೆ ಚರ್ಚಿಸಿದರು.

ಹಂಪಿಗೆ ಬರುವ ಪ್ರವಾಸಿಗರಿಗೆ ಹಂಪಿ ಪ್ರದೇಶದಲ್ಲಿ ಸೂಕ್ತವಾಗಿ ಮೊಬೈಲ್ ಸಿಗ್ನಲ್ ಸಿಗುವುದಿಲ್ಲ. ಇದರಿಂದ ಸಂವಹನಕ್ಕೆ ಕಿರಿಕಿರಿಯಾಗುತ್ತದೆ ಎನ್ನುವ ಅಭಿಪ್ರಾಯವಿದ್ದು, ಈ ನಿಟ್ಟಿನಲ್ಲಿ ಆಯಾ ಕಡೆಗಳಲ್ಲಿ ಮೊಬೈಲ್ ಟವರ್ ಅಳವಡಿಸುವುದರ ಬಗ್ಗೆ ಚರ್ಚಿಸಿದರು.

ಇದನ್ನೂ ಓದಿ: Lok Sabha Election 2024: 17 ಲೋಕಸಭಾ ಕ್ಷೇತ್ರಗಳಲ್ಲಿ ಮಹಿಳಾ ಮತದಾರರೇ ಹೆಚ್ಚು!

ಶೈಕ್ಷಣಿಕ ಸಂಸ್ಥೆಗಳ ಒಕ್ಕೂಟದ ಸಹಕಾರದೊಂದಿಗೆ ಹಂಪಿಯ ಗೈಡ್ಸ್, ಟ್ಯಾಕ್ಸಿ ಮತ್ತು ಹೋಟೆಲ್ ಸೇರಿದಂತೆ ಇತರರಿಗೆ ವಿಶೇಷ ಕಾರ್ಯಗಾರ ಏರ್ಪಡಿಸುವ ಯೋಜನೆಯಿದ್ದು, ಇದಕ್ಕೆ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯು ಸಮಯ ಸಮಯ ನಿಗಧಿಪಡಿಸಿ ಸಹಕಾರ ನೀಡಬೇಕು ಎಂದು ತಿಳಿಸಿದರು.

ಹೆಮ್ಮೆಯ ಸಂಗತಿ

ತನ್ನದೇ ಐತಿಹಾಸಿಕ ಸಂಗತಿಗಳಿಂದ ಹಂಪಿಯು ಪ್ರಸಿದ್ಧವಾಗಿದೆ. ಅದರಂತೆ ಹಂಪಿಯನ್ನು ಇದುವರೆಗೆ ರಕ್ಷಣೆ ಮಾಡಿದ ರೀತಿಯು ಹೆಮ್ಮೆ ಪಡುವಂತದ್ದಾಗಿದೆ. ಈ ಪರಂಪರೆಯನ್ನು ಜಿಲ್ಲಾಡಳಿತವು ಮುಂದುವರೆಸಿಕೊಂಡು ಹೋಗಬೇಕು ಎಂದು ಜುನಾಯಿ ಹಾನ್ ಸಲಹೆ ಮಾಡಿದರು.

ಅನ್ವೇಷಣೆಯಾಗಲಿ

ಹಂಪಿಯ ಇತಿಹಾಸವು ವಿಶಿಷ್ಟ ಹಾಗೂ ವಿಶಾಲತೆಯಿಂದ ಕೂಡಿದೆ. ಈ ಬಗ್ಗೆ ಅಧ್ಯಯನಗಳು ಆಗಬೇಕಿದೆ. ಹೊಸ ಹೊಸ ಅನ್ವೇಷಣೆ ಕಾರ್ಯಗಳು ನಿರಂತರವಾಗಿ ನಡೆಯಬೇಕು ಎಂದು ಅವರು ಸಲಹೆ ಮಾಡಿದರು.

ಜಿಲ್ಲಾಡಳಿತದ ಕಾರ್ಯಕ್ಕೆ ಮೆಚ್ಚುಗೆ

ಹಂಪಿ ಪ್ರದೇಶದಲ್ಲಿ ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಹಾಗೂ ಜನಸ್ನೇಹಿ ಸೈಕಲ್ ಟೂರಿಸಂಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಿದ್ಧಪಡಿಸುತ್ತಿರುವ ಸೈಕಲ್ ಟೂರಿಸಂನ ಪ್ಲಾನ್ ಮತ್ತು ರೂಟ್ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. ಸೈಕಲ್ ಮೂಲಕ ಎಲ್ಲರೂ ಹಂಪಿಯನ್ನು ನೋಡುವ ಪ್ರಾಜೆಕ್ಟ್ ನೋಡಿ ಜಿಲ್ಲಾಡಳಿತದ ಕ್ರಮದ ಬಗ್ಗೆ ಜುನಾಯಿ ಹಾನ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ: Myanmar Aircraft: ಮಿಜೋರಾಂನಲ್ಲಿ ಮ್ಯಾನ್ಮಾರ್‌ ಸೇನೆ ವಿಮಾನ ಪತನ; 8 ಜನಕ್ಕೆ ಗಾಯ

ಸಭೆಯಲ್ಲಿ ಪುರಾತತ್ವ ಇಲಾಖೆಯ ಅಧೀಕ್ಷಕ ನೀಲದಾಸ್ ರಾಜು, ಪುರಾತತ್ವ ಇಲಾಖೆಯ ಉಪ ನಿರ್ದೇಶಕ ತೇಜಸ್ವಿ, ಪ್ರವಾಸೋದ್ಯಮ ಇಲಾಖೆಯ ಶಿವಲಿಂಗಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version