ಕೂಡ್ಲಿಗಿ: ಕೃಷಿ ಇಲಾಖೆಯ ಪ್ರಸಕ್ತ ಸಾಲಿನ ಬೆಳೆ ವಿಮೆ ಜಾಗೃತಿ ಜಾಥಾಕ್ಕೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಚಾಲನೆ (Vijayanagara News) ನೀಡಿದರು.
ಈ ವೇಳೆ ಜಿಲ್ಲಾ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ಮಾತನಾಡಿ, ಕೃಷಿ ಇಲಾಖೆಯಿಂದ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆ ಅನುಷ್ಠಾನಗೊಳಿಸಲು ರೈತರು ಬೆಳೆ ವಿಮೆ ನೋಂದಣಿ ಮಾಡಿಸಲು ಈಗಾಗಲೇ ಸೂಚನೆ ನೀಡಲಾಗಿದೆ, ಆದ್ದರಿಂದ ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸುವಂತೆ ತಿಳಿಸಿದರು.
ರೈತರಿಂದ ಬೆಳೆ ವಿಮೆ ನೋಂದಣಿ ಮಾಡಿಕೊಳ್ಳಲು ಈಗಾಗಲೇ ವಿವಿಧ ಬೆಳೆಗಳಿಗೆ ದಿನಾಂಕ ನಿಗದಿ ಮಾಡಿದ್ದು, ಜೋಳ ಹಾಗೂ ಮೆಕ್ಕೆಜೋಳ ಬೆಳೆಗೆ ಇದೇ 31 ಕೊನೆಯ ದಿನವಾಗಿದೆ. ಅದರಂತೆ ಶೇಂಗಾ ಸೇರಿದಂತೆ ಇತರೆ ಬೆಳೆಗಳಿಗೂ ವಿಮೆ ಮಾಡಿಸಿದಲ್ಲಿ ರೈತರಿಗೆ ಬೆಳೆ ನಷ್ಟದಿಂದ ವಿಮೆ ಪರಿಹಾರ ಬರುತ್ತದೆ. ಇದರಿಂದ ಆರ್ಥಿಕ ನಷ್ಟ ಎದುರಾಗುವುದಿಲ್ಲ.
ಇದನ್ನೂ ಓದಿ: CM Siddaramaiah: ನಿತಿನ್ ಗಡ್ಕರಿ ಭೇಟಿಯಾದ ಸಿಎಂ ಸಿದ್ದರಾಮಯ್ಯ; ಪ್ರಮುಖ ಹೆದ್ದಾರಿ ಯೋಜನೆಗಳ ಬಗ್ಗೆ ಚರ್ಚೆ
ಶೇ.75 ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡರೆ, ಬಿತ್ತನೆಯಾದ ನಂತರ ಕಟಾವಿಗೆ ಮೊದಲು ಸಕಾಲಕ್ಕೆ ಮಳೆ ಬಾರದೇ ನಿರೀಕ್ಷಿತ ಇಳುವರಿಗಿಂತ ಶೇ 50 ಕ್ಕಿಂತ ಹೆಚ್ಚು ಇಳುವರಿ ನಷ್ಟವಾದಲ್ಲಿ ಅಥವಾ ಅಕಾಲಿಕ ಮಳೆಯಾಗಿ ಬೆಳೆ ಮುಳುಗಡೆ ಅಥವಾ ಕಟಾವಿನ ನಂತರ 14 ದಿನದೊಳಗೆ ಅಕಾಲಿಕ ಮಳೆಯಿಂದ ಬೆಳೆ ನಾಶವಾದರೆ ವಿಮಾ ಸಂಸ್ಥೆ ವೈಯಕ್ತಿಕವಾಗಿ ನಷ್ಟವನ್ನು ನಿರ್ಧರಿಸಿ ಪರಿಹಾರ ನೀಡಲು ಅವಕಾಶವಿರುತ್ತದೆ. ಆದ್ದರಿಂದ ರೈತರು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಬೆಳೆವಿಮೆ ಮಾಡಿಸಲು ಅವರು ಮನವಿ ಮಾಡಿದರು.
ಇದನ್ನೂ ಓದಿ: Paris Olympics 2024 : ಒಲಿಂಪಿಕ್ಸ್ ಸ್ಮರಣೆಗಾಗಿ ಜೆಎಸ್ಡಬ್ಲ್ಯುನಿಂದ ಪ್ಯಾರಿಸ್ನಲ್ಲಿ ವಿಶೇಷ ಪ್ರದರ್ಶನ
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಸಿಇಒ ಸದಾಶಿವ ಪ್ರಭು, ತಾಪಂ ಇಒ ವೈ. ರವಿಕುಮಾರ್, ಸಹಾಯಕ ಕೃಷಿ ನಿರ್ದೇಶಕ ಸುನೀಲ್ ಕುಮಾರ್, ಬಣವಿಕಲ್ಲು ಯರಿಸ್ವಾಮಿ, ನರೇಂದ್ರ ಸ್ವಾಮಿ ಹಾಗೂ ಇತರರು ಉಪಸ್ಥಿತರಿದ್ದರು.