Site icon Vistara News

Vijayanagara News: ಹೊಸಪೇಟೆಯಲ್ಲಿ ಮೈನವಿರೇಳಿಸಿದ ಆಫ್‌ ರೋಡ್‌ ಮೋಟಾರ್‌ ಸ್ಪೋರ್ಟ್ಸ್‌

Vijayanagara News Motor Sports in Hosapete

ಹೊಸಪೇಟೆ: ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾದ ಆಶ್ರಯದಲ್ಲಿ ವಿಜಯನಗರದ ಮೋಟಾರ್ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಹೊಸಪೇಟೆ (Hosapete) ಸಮೀಪದ ರಾಜಾಪುರ ಬೆಟ್ಟದಲ್ಲಿ ಭಾನುವಾರ ನಡೆದ ಆಫ್‌ರೋಡ್‌ ಮೋಟರ್‌ ಸ್ಪೋರ್ಟ್ಸ್‌ (Motor Sports) ಮೈನವಿರೇಳಿಸುವಂತೆ ಮಾಡಿತು.

ಸಾಹಸ ಪ್ರಿಯರಿಗೆ ಅದರಲ್ಲೂ ಮುಖ್ಯವಾಗಿ ವಾಹನ ಚಲಾಯಿಸುವ ಅಸಕ್ತಿ ಇದ್ದವರಿಗಂತೂ ಇದೊಂದು ಅತ್ಯಂತ ರಸದೌತಣ ನೀಡಿದ ದಿನವಾಗಿತ್ತು. ದೂರದ ಬೆಂಗಳೂರು, ಗೋವಾ, ಕೇರಳದಿಂದ ಈ ಆಫ್‌ರೋಡ್‌ ಮೋಟಾರ್‌ ಸ್ಪೋರ್ಟ್ಸ್‌ ನೋಡಲು ಹಲವರು ಬಂದಿದ್ದರು. ಹೊಸಪೇಟೆ ಸುತ್ತಮುತ್ತಲಿನ ನೂರಾರು ಯುವಕರು, ಮಕ್ಕಳು ಸಹ ಇದ್ದರು.

ಈ ಸಾಹಸ ವಾಹನ ಕ್ರೀಡೆ ನಡೆಯುತ್ತಿರುವುದು ಇದು ಆರನೇ ವರ್ಷ. ಸಂತೋಷ್‌, ದರ್ಪಣ್ ಗೌಡ, ರೋಹಿತ್ ಗೌಡ, ಅಶ್ವಿನ್‌ ನಾಯ್ಕ್, ಮೂಸಾ ಷರೀಫ್‌, ಮಂಜುನಾಥ್‌ ಮೊದಲಾದ ಉತ್ಸಾಹಿಗಳ ಶ್ರಮ, ಆಸಕ್ತಿಯ ಫಲವಾಗಿ ಹೊಸಪೇಟೆಗೆ ಹೊಸ ಆಯಾಮ ನೀಡುವ ಮೋಟಾರ್‌ ಸ್ಪೋರ್ಟ್ಸ್‌ ಕಾರ್ಯಕ್ರಮವಾಗಿ ಬದಲಾಗಿದೆ.

ಇದನ್ನೂ ಓದಿ: SBI PO Recruitment 2023: 2000 ಪ್ರೊಬೇಷನರಿ ಹುದ್ದೆ ನೇಮಕಕ್ಕೆ ಎಸ್‌ಬಿಐ ಅರ್ಜಿ ಆಹ್ವಾನ, ಸೆ.27 ಅಪ್ಲೈಗೆ ಕೊನೆ ದಿನ

ಒಂದೊಂದು ಸಾಹಸವೂ ವಿಭಿನ್ನ

ಪ್ರೊ ಮಾಡಿಫೈಡ್ ಕ್ಲಾಸ್‌, ಮಾಡಿಫೈಡ್‌ ಕ್ಲಾಸ್‌, ಸ್ಟಾಕ್‌ ಪೆಟ್ರೋಲ್‌, ಡೀಸೆಲ್‌ ಕ್ಲಾಸ್, ಥಾರ್ ಕ್ಲಾಸ್‌, ಲೇಡಿಸ್ ಸ್ಟಾಕ್‌ ಮತ್ತು ಲೇಡಿಸ್‌ ಮಾಡಿಫೈಡ್‌ ವಿಭಾಗಗಳಲ್ಲಿ ಒಟ್ಟು 64 ವಾಹನಗಳು ಪಾಲ್ಗೊಂಡಿದ್ದವು. ಇವೆಲ್ಲವೂ ಜೀಪ್‌ ಮಾದರಿಯ ವಾಹನಗಳು. ಒಂದೊಂದು ವಾಹನದಲ್ಲಿ ಇಬ್ಬರು ಸ್ಪರ್ಧಿಗಳು. ಹೀಗಾಗಿ ಒಟ್ಟು 128 ಮಂದಿ ರಾಜ್ಯ, ಹೊರರಾಜ್ಯಗಳಿಂದ ಬಂದಿದ್ದರು. ವಿಶೇಷವೆಂದರೆ ಪ್ರತಿಯೊಂದು ವಿಭಾಗಕ್ಕೆ ಆ ವಾಹನದ ಶಕ್ತಿ, ಸಾಮರ್ಥ್ಯಕ್ಕೆ ತಕ್ಕಂತಹ ಕಠಿಣ ಹಾದಿಯನ್ನೇ ನೀಡಲಾಗಿತ್ತು. ಹೀಗಾಗಿ ಎಲ್ಲಾ ವಿಭಾಗಗಳಲ್ಲಿ ಪಾಲ್ಗೊಂಡ ವಾಹನ ಚಾಲಕರು ತಮ್ಮ ಕೌಶಲ, ಚಾಕಚಕ್ಯತೆ, ಸಮಯಪ್ರಜ್ಞೆ, ಸಂಕಷ್ಟ ಎದುರಿಸುವ ಮನೋಸ್ಥೈರ್ಯಗಳನ್ನು ನೋಡುಗರ ಮುಂದೆ ಪ್ರದರ್ಶಿಸಬೇಕಿತ್ತು.

ಪ್ರೊ ಮಾಡಿಫೈಡ್ ಕ್ಲಾಸ್ ಎಂದರೆ ಅದಕ್ಕೆ ಅತ್ಯಂತ ಕಠಿಣ ಹಾದಿಯನ್ನು ನಿಗದಿಪಡಿಸಲಾಗಿರುತ್ತದೆ. ಈ ವಾಹನಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರ‍್ಯಾಲಿಗೆ ಬೇಕಾದ ಹೆಚ್ಚುವರಿ ಸೌಲಭ್ಯಗಳನ್ನು ಅಳವಡಿಸಲಾಗಿರುತ್ತದೆ. ಅದು ಬಂಡೆಗಲ್ಲನ್ನು ಹತ್ತಬೇಕು, ದೊಡ್ಡ ಹೊಂಡಕ್ಕೆ ಇಳಿಯಬೇಕು. ತನ್ನದೇ ಹಗ್ಗದಿಂದ, ತನ್ನ ಜೀಪಿನೊಳಗೆ ಇರುವ ಹೆಚ್ಚುವರಿ ಶಕ್ತಿಯಿಂದಲೇ ಆ ಗುಂಡಿಯಿಂದ ಮೇಲೆದ್ದು ಬರಬೇಕು. ಅದಕ್ಕೆಲ್ಲ ಸಮಯ ನಿಗದಿಪಡಿಸಿರುತ್ತಾರೆ. ನಿಗದಿತ ಸಮಯದೊಳಗೆ ಗುರಿ ತಲುಪುವರಿಗೆ ಅಂಕ ನಿರ್ಧಾರವಾಗುತ್ತದೆ.

ಇದನ್ನೂ ಓದಿ: Vijayanagara News: ಪತ್ರಕರ್ತರು ಆರೋಗ್ಯದ ಕಾಳಜಿ ವಹಿಸಬೇಕು: ಡಿ.ಸಿ ದಿವಾಕರ್

ಮಾಡಿಫೈಡ್‌ ಕ್ಲಾಸ್‌ನಲ್ಲಿ ಇಂತಹ ದೊಡ್ಡ ಸಾಹಸ ಇಲ್ಲದಿದ್ದರೂ, ಈ ಜೀಪುಗಳು ಕ್ರಮಿಸಬೇಕಾದ ಹಾದಿ ಸುಗಮದ್ದೇನೂ ಅಲ್ಲ. ಆಚೀಚೆ ಕಟ್ಟಿರುವ ಹಗ್ಗವನ್ನು ಮುಟ್ಟದೆ, ಇಳಿಜಾರು, ಏರು, ಇಳಿಜಾರಿನಲ್ಲಿ ಹೇರ್‌ಪಿನ್‌ ತಿರುವು, ಏರು ದಾರಿಯಲ್ಲಿ ಹೇರ್‌ಪಿನ್ ತಿರುವುಗಳನ್ನು ನಿಭಾಯಿಸಿಕೊಂಡು ಗುರಿ ತಲುಪಬೇಕು.

ಸಂಡೂರು ರಸ್ತೆಯಲ್ಲಿ ಸ್ವಲ್ಪ ಮುಂದಕ್ಕೆ ಸಾಗಿ ಬಲಕ್ಕೆ ತಿರುಗಿದರೆ ಹಸಿರು ಗದ್ದೆಗಳ ನಡುವೆ ಸಾಗುವ ಹಾದಿಯ ಅಂತ್ಯಕ್ಕೆ ರಾಜಾಪುರ ಗೇಟ್ ಸಿಗುತ್ತದೆ. ಅಲ್ಲಿಂದ ಮುಂದೆ ನಾಲ್ಕು ಕಿ.ಮೀ. ಸಾಗಿದಾಗ ಗುಡ್ಡದ ಮೇಲಕ್ಕೆ ಬಂದಿರುತ್ತೇವೆ. ಅಲ್ಲಿಂದ ತುಂಗಭದ್ರಾ ನದಿಯ ಹಿನ್ನೀರು ಭವ್ಯವಾಗಿ ಕಾಣಿಸುತ್ತದೆ. ಪವನ ವಿದ್ಯುತ್‌ ಘಟಕಗಳೂ ಅಲ್ಲಿವೆ. ಇಂತಹ ಗುಡ್ಡದ ಮೇಲೆ ನಡೆದ ಜೀಪುಗಳ ಸಾಹಸ ಮರೆಯಲಾಗದ ಅನುಭವವನ್ನು ನೋಡುಗರಿಗೆ ನೀಡಿತು.

ಇದನ್ನೂ ಓದಿ: Vijayanagara News: ಕೊಟ್ಟೂರಿನಲ್ಲಿ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ಸ್‌ಗಳ ಸಮಾಲೋಚನಾ ಸಭೆ

ಮೋಟಾರ್‌ ಸ್ಪೋರ್ಟ್ಸ್‌ ಎಂದರೆ ಅದೊಂದು ಕ್ರೇಜ್‌. ಅದೆಷ್ಟೋ ಮಂದಿ ಲಾರಿಗಳಲ್ಲಿ ತಮ್ಮ ಮಾಡಿಫೈಡ್‌ ಜೀಪುಗಳನ್ನು ತಂದಿದ್ದಾರೆ. ಜೀಪು ಮಾಡಿಫೈ ಮಾಡಲು ಲಕ್ಷಾಂತರ ಖರ್ಚು ಮಾಡಿರುತ್ತಾರೆ. ಹೊಸಪೇಟೆ ಸಮೀಪದ ಬೆಟ್ಟಗುಡ್ಡಗಳು ಮಡಿಕೇರಿಗೆ ಕಡಿಮೆ ಇಲ್ಲ. ಹೀಗಾಗಿ ಮಡಿಕೇರಿ, ಚಿಕ್ಕಮಗಳೂರಿನಲ್ಲಿ ಸಾಮಾನ್ಯವಾಗಿ ಆಯೋಜಿಸುವ ಮೋಟಾರ್ ಸ್ಪೋರ್ಟ್ಸ್‌ ಅನ್ನು ಹೊಸಪೇಟೆಗೆ ತಂದಿದ್ದೇವೆ. ಕಳೆದ ಆರು ವರ್ಷಗಳಿಂದ ಯಶಸ್ವಿಯಾಗಿ ನಡೆಸುತ್ತ ಬಂದಿದ್ದೇವೆ ಎಂದು ಸಂತೋಷ್‌ ತಿಳಿಸಿದ್ದಾರೆ.

Exit mobile version