ಕೊಟ್ಟೂರು: ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ 1973, 74 ಮತ್ತು 75ನೇ ಸಾಲಿನಲ್ಲಿ 10ನೇ ತರಗತಿ ವಿದ್ಯಾರ್ಥಿಗಳು 50 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಏ.14 ರಂದು ಸ್ನೇಹ ಸಮ್ಮಿಲನ ಹಮ್ಮಿಕೊಂಡಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಪಿ.ಎಚ್. ದೊಡ್ಡರಾಮಣ್ಣ, ಅಧ್ಯಕ್ಷ ರೇವಣಸಿದ್ದಪ್ಪ (Vijayanagara News) ಹೇಳಿದರು.
ಪಟ್ಟಣದ ತುಂಗಭದ್ರ ಬಿಇಡಿ ಕಾಲೇಜಿನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1974ನೇ ಸಾಲಿನ ವಿದ್ಯಾರ್ಥಿಗಳ ಕಾರ್ಯಕ್ರಮ ನಡೆಸುವ ಯೋಜನೆ ರೂಪಿಸಿದಾಗ 73 ಮತ್ತು 75ನೇ ಸಾಲಿನವರೂ ಸೇರಿಕೊಂಡು ಒಟ್ಟಾಗಿ ಸಮಾರಂಭ ಮಾಡುವ ನಿರ್ಧಾರ ಮಾಡಿದ್ದೇವೆ. ಈಗಾಗಲೇ ಇದಕ್ಕೆ ಎಲ್ಲ ತಯಾರಿಯೂ ನಡೆದಿದೆ.
ಆ ಸಾಲಿನ ಶಿಕ್ಷಕರಾದ ಕೆ.ಜಯಪ್ಪ, ಅರವರ ಗುರುಬಸಪ್ಪ, ಎಚ್.ಎಂ. ಹಾಲಯ್ಯ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು. ಶ್ರೀ ಮರುಳಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುವ ಸಮಾರಂಭದ ವೇದಿಕೆಯಲ್ಲಿ ಆಸೀನರಾಗುವ ಶಿಕ್ಷಕರಿಂದ ವಿಶಿಷ್ಟ ಕಾರ್ಯಕ್ರಮ ನಡೆಸಲಾಗುವುದು. ಮಧ್ಯಾಹ್ನ ಹಳೆ ವಿದ್ಯಾರ್ಥಿಗಳಿಂದ ಕಲಾ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ಸಮಿತಿ ಕಾರ್ಯದರ್ಶಿ ಡಿ.ಚಾಮರಸ ಮಾತನಾಡಿ, 120 ಜನರು ಸೇರುವ ನಿರೀಕ್ಷೆ ಮಾಡಲಾಗಿದೆ. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದರು.
ಇದನ್ನೂ ಓದಿ: Cyber Crime: ಸೈಬರ್ ಅಪರಾಧದಲ್ಲಿ ರಷ್ಯವೇ ಪ್ರಥಮ: ಭಾರತಕ್ಕೆ ಎಷ್ಟನೇ ಸ್ಥಾನ?
ಈ ಸಂದರ್ಭದಲ್ಲಿ ಸಮಿತಿ ಉಪಾಧ್ಯಕ್ಷರಾದ ಟಿ.ಹನುಮಂತಪ್ಪ, ಡಿ.ಗುರುರಾಜ, ಖಜಾಂಚಿ ಕಂಡಕ್ಟರ್ ಕೊಟ್ರೇಶ, ಸದಸ್ಯರಾದ ಎಸ್.ರಾಜಶೇಖರ, ಕಂಡಕ್ಟರ್ ರವಿ, ಮಹಾಂತೇಶ, ಐನಳ್ಳಿ ಪರಮೇಶ್ವರಯ್ಯ, ನಿವೃತ್ತ ಶಿಕ್ಷಕ ಮಲ್ಲಪ್ಪ ಹಾಗೂ ಇತರರು ಉಪಸ್ಥಿತರಿದ್ದರು.