ಹೊಸಪೇಟೆ: ಕರ್ತವ್ಯನಿರತ ಪೊಲೀಸ್ (Police) ಹುತಾತ್ಮರ ಸೇವೆಯು ಶ್ಲಾಘನೀಯವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.
ವಿಜಯನಗರ ಜಿಲ್ಲಾ ಪೊಲೀಸ್ ವತಿಯಿಂದ ಹೊಸಪೇಟೆ ನಗರದ ಡಿ.ಎ.ಆರ್ ಹೊಸ ಪರೇಡ್ ಮೈದಾನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಪೊಲೀಸ್ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆಯ ಅನುಪಸ್ಥಿತಿಯಲ್ಲಿ ಕಾನೂನು ಪರಿಪಾಲನೆ ಕಷ್ಟವಾಗುತ್ತದೆ. ನಾವು ಸುರಕ್ಷಿತವಾಗಿದ್ದೇವೆ ಎಂಬುವುದಕ್ಕೆ ಪೊಲೀಸ್ ಇಲಾಖೆಯೇ ಪ್ರಮುಖ ಕಾರಣ. ಹಬ್ಬಗಳ ಆಚರಣೆ ಸಂದರ್ಭದಲ್ಲಿಯೂ ಸಹ ಪೊಲೀಸರು ನಮ್ಮೆಲ್ಲರ ರಕ್ಷಣೆಗಾಗಿ ಕರ್ತವ್ಯ ನಿರ್ವಹಿಸುತ್ತಾರೆ ಎಂದ ಅವರು, ಎಲ್ಲಾ ಪೊಲೀಸರು ಒತ್ತಡ ರಹಿತವಾಗಿ ಕರ್ತವ್ಯ ನಿರ್ವಹಿಸಿ. ಆರೋಗ್ಯ ಕಾಪಾಡಿಕೊಳ್ಳಿ. ಕುಟುಂಬಕ್ಕೂ ಹೆಚ್ಚಿನ ಸಮಯ ಕೊಡಿ. ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ತಿಳಿಸಿದರು.
ಇದನ್ನೂ ಓದಿ: SBI Recruitment 2023: ಎಸ್‌ಬಿಐಯಲ್ಲಿದೆ 439 ಹುದ್ದೆ; ಅರ್ಜಿ ಸಲ್ಲಿಕೆಗೆ ಇಂದೇ ಕೊನೆಯ ದಿನ
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಬಿ.ಎಲ್ ಸೇರಿದಂತೆ ಡಿವೈಎಸ್ಪಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.