ಹೊಸಪೇಟೆ: ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ಗತ ವೈಭವ ಸಾರುವ ಹಂಪಿ ಉತ್ಸವವನ್ನು (Hampi Utsav) ವಿಜೃಂಭಣೆಯಿಂದ ಆಚರಿಸಲು ಎಲ್ಲಾ ಸಮಿತಿಗಳು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಹಂಪಿ ಉತ್ಸವ ಆಚರಣೆ ಕಾರ್ಯಕಾರಿ ಸಮಿತಿ ಅಧ್ಯಕ್ಷ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹಂಪಿ ಉತ್ಸವ ಆಚರಣೆ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಬಾರಿಯ ಹಂಪಿ ಉತ್ಸವವನ್ನು ಫೆಬ್ರವರಿ 2, 3 ಮತ್ತು 4 ರಂದು ಆಚರಿಸಲು ನಿಗಧಿಪಡಿಸಲಾಗಿದೆ. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲು ಈಗಾಗಲೇ ಸ್ವಾಗತ ಮತ್ತು ಶಿಷ್ಠಾಚಾರ ಸಮಿತಿ, ಸಾರಿಗೆ ಸಮಿತಿ, ವಸತಿ ಸಮಿತಿ, ಆಹಾರ ಸಮಿತಿ, ಮಾಧ್ಯಮ ಸಮಿತಿ, ಮೂಲಭೂತ ಸೌಲಭ್ಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಸಮಿತಿ, ಆರೋಗ್ಯ ಮತ್ತು ನೈರ್ಮಲೀಕರಣ, ವಸ್ತು ಪ್ರದರ್ಶನ ಸಮಿತಿ, ವೇದಿಕೆ ಸಮಿತಿ, ಕ್ರೀಡಾ ಸೇರಿದಂತೆ ಸುಮಾರು 20ಕ್ಕೂ ಅಧಿಕ ಸಮಿತಿಗಳನ್ನು ರಚಿಸಿ, ಕಾರ್ಯ ಹಂಚಿಕೆ ಮಾಡಲಾಗಿದ್ದು, ಉತ್ಸವದ ಕಾರ್ಯಕ್ರಮಗಳು ವ್ಯವಸ್ಥಿತ ನಿರ್ವಹಣೆ ಆಗಬೇಕು. ಈ ಹಿನ್ನಲೆಯಲ್ಲಿ ಎಲ್ಲಾ ಸಮಿತಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: Gold Rate Today: 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ ತುಸು ಏರಿಕೆ
ಉತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ, ಕಬಡ್ಡಿ, ಕುಸ್ತಿ, ಸಾಹಸ ಕ್ರೀಡೆ ಮುಂತಾದ ಕ್ರೀಡಾಕೂಟಗಳು, ರಂಗೋಲಿ ಸ್ಪರ್ಧೆ, ವಿಜೃಂಭಣೆಯ ಸಾಂಸ್ಕೃತಿಕ ಕಲಾತಂಡಗಳ ಮೆರವಣಿಗೆ, ವಸ್ತು ಪ್ರದರ್ಶನ ಸೇರಿದಂತೆ ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳ ಆಯೋಜನೆಗೆ ಸಂಬಂಧಿಸಿದ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು.
ಸ್ಥಳೀಯ ಕಲಾತಂಡಗಳಿಗೆ ಆದ್ಯತೆ ನೀಡಬೇಕಾಗಿದ್ದು, ಜಿಲ್ಲೆಯಲ್ಲಿರುವ ಹಗಲುವೇಷ, ಬುಡಕಟ್ಟು ಸಮುದಾಯದ ಕಲೆ, ವೀರಗಾಸೆ, ಮಹಿಳಾ ಡೊಳ್ಳು ಕುಣಿತ, ಕೋಲಾಟ, ಹಲಗೆ ವಾದನ, ಯಕ್ಷಗಾನ ಸೇರಿದಂತೆ ವಿವಿಧ ಸ್ಥಳೀಯ ಕಲಾಪ್ರಕಾರಗಳನ್ನು ಗುರುತಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕ್ರಮ ವಹಿಸಬೇಕು.
ಕಾರ್ಯಕ್ರಮಕ್ಕೆ ಆಗಮಿಸುವ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರು, ಉಪಹಾರದ ವ್ಯವಸ್ಥೆಗೆ ಆಹಾರ ಇಲಾಖೆಯು ಕ್ರಮ ಕೈಗೊಳ್ಳಬೇಕು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಅನುಕೂಲವಾಗಲು ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಿಂದ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಸಾರಿಗೆ ಇಲಾಖೆಯಿಂದ ಹಂಪಿಗೆ ವಿಶೇಷ ಬಸ್ ವ್ಯವಸ್ಥೆ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಹಂಪಿ ಉತ್ಸವದ ಅಂಗವಾಗಿ ಶಾಲಾ ಮಕ್ಕಳ ನೃತ್ಯ, ಚಿತ್ರಕಲಾ, ಪ್ರಬಂಧ ಸ್ಪರ್ಧೆಗಳು, ಮೇಳಗಳು ಹಾಗೂ ಇತರೆ ಕಾರ್ಯಕ್ರಮಗಳ ಆಯೋಜನೆ ಕುರಿತಂತೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಹಂಪಿ ಉತ್ಸವವನ್ನು ವ್ಯವಸ್ಥಿತವಾಗಿ ಹಾಗೂ ಯಶಸ್ವಿಯಾಗಿ ಆಚರಿಸಲು ಎಲ್ಲಾ ಅಧಿಕಾರಿಗಳು ಶ್ರಮಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: Japan Earthquake: ಜಪಾನ್ನಲ್ಲಿ ಒಂದೇ ದಿನ 155 ಕಂಪನ, ಸಾವಿನ ಸಂಖ್ಯೆ 24ಕ್ಕೆ
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ., ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಸೇರಿದಂತೆ ವಿವಿಧ ಸಮಿತಿಗಳ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಇದ್ದರು.