ಕೊಟ್ಟೂರು: ಡಿ.25 ರಂದು ಸೋಮವಾರ ರಾತ್ರಿ ನಡೆಯಲಿರುವ ಕೊಟ್ಟೂರು ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ಕಾರ್ತಿಕೋತ್ಸವಕ್ಕೆ (Kottureshwara Kartikotsava) ಸಿದ್ಧತೆ ಕೈಗೊಳ್ಳಲಾಗಿದ್ದು, ನೂಕುನುಗ್ಗಲು ತಡೆಗೆ ಪೊಲೀಸ್ (Police) ಆಡಳಿತದ ಸಹಕಾರ ಪಡೆಯಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಕೃಷ್ಣಪ್ಪ ಹೇಳಿದರು.
ದೇವಸ್ಥಾನದ ಹಿಂಭಾಗದ ಸಭಾಂಗಣದಲ್ಲಿ ಸೋಮವಾರ ಪೊಲೀಸ್ ಠಾಣೆ ಆಯೋಜಿಸಿದ್ದ ಕಾರ್ತಿಕೋತ್ಸವದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ದೇವಸ್ಥಾನದ ಹೊರಾಂಗಣದಲ್ಲಿ ಡಿ.25ರ ಸೋಮವಾರ ಸಂಜೆ 5.30 ರ ನಂತರ ಕ್ರಿಯಾ ಮೂರ್ತಿಗಳು ದೀಪಗಳನ್ನು ಬೆಳಗುವ ಮೂಲಕ ಚಾಲನೆ ನೀಡುತ್ತಾರೆ. ಇದಾದ ಕೂಡಲೇ ಕಾರ್ತಿಕೋತ್ಸವ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: COVID Subvariant JN1: ಕೋವಿಡ್ ರಕ್ಷಣೆಗೆ 2 ಮಾರ್ಗಸೂಚಿ; ಹಿರಿಯರು, ಗರ್ಭಿಣಿ, ತಾಯಂದಿರಿಗೆ ಮಾಸ್ಕ್ ಕಡ್ಡಾಯ
ಸಬ್ ಇನ್‌ಸ್ಪೆಕ್ಟರ್ ಗೀತಾಂಜಲಿ ಸಿಂಧೆ ಮಾತನಾಡಿ, ಕಾರ್ತಿಕೋತ್ಸವದ ಬಂದೋಬಸ್ತಿಗೆ ಈಗಾಗಲೇ ಸಿಬ್ಬಂದಿಯನ್ನು ನಿಯೋಜಿಸುವ ಪ್ರಕ್ರಿಯೆ ನಡೆದಿದ್ದು ಮುಂದಿನ ಸೋಮವಾರ ಸಂಜೆಯ ನಂತರ ಪಟ್ಟಣ ಪ್ರವೇಶಿಸುವ 5 ದ್ವಾರಗಳ ಬಳಿ ಪ್ರಯಾಣಿಕರ ವಾಹನಗಳ ನಿಲುಗಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಇದನ್ನೂ ಓದಿ: Veterinary Hospital : ಪ್ರಾಣಿಪ್ರಿಯರಿಗೆ ಕಹಿ ಸುದ್ದಿ; ಬೆಂಗಳೂರಿನ 24 ವೆಟರ್ನರಿ ಆಸ್ಪತ್ರೆಗಳು ಬೇರೆಡೆ ಶಿಫ್ಟ್!
ಜಿ.ಪಂ ಮಾಜಿ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ್ ಮಾತನಾಡಿ, ಶ್ರೀ ಸ್ವಾಮಿಯ ಕಾರ್ತಿಕೋತ್ಸವ ಪ್ರತಿ ವರ್ಷ ಧಾರ್ಮಿಕ ಪದ್ಧತಿಯಂತೆ ನಡೆಯುತ್ತಿದ್ದು ಯಾವುದೇ ವರ್ಷದಲ್ಲೂ ಸಹ ಗೊಂದಲ ಗಲಾಟೆ ಉಂಟಾಗಿಲ್ಲ. ಇದಕ್ಕೆ ಭಕ್ತರು ಎಂದೂ ಅವಕಾಶ ನೀಡಿಲ್ಲ ಎಂದು ಹೇಳಿದರಲ್ಲದೆ, ಸುಗಮ ಕಾರ್ತಿಕೋತ್ಸವಕ್ಕೆ ಪಟ್ಟಣದ ಜನತೆ ಮತ್ತು ಭಕ್ತರು ಸಂಪೂರ್ಣ ಬೆಂಬಲಿಸುತ್ತಾರೆ ಎಂದು ಹೇಳಿದರು.
ಪ.ಪಂ ಮುಖ್ಯಾಧಿಕಾರಿ ನಸಲರುಲ್ಲಾ , ಜೆಸ್ಕಾಂ ಸಹಾಯಕ ಎಂಜಿನಿಯರ್ ಚೇತನ್ ಕುಮಾರ್, ಪ.ಪಂ ಸದಸ್ಯರಾದ ಮರಬದ ಕೊಟ್ರೇಶ್ , ಕೆಂಗರಾಜ ಸೇರಿದಂತೆ ಇತರರು ಪಾಲ್ಗೊಂಡಿದ್ದರು.