Site icon Vistara News

Vijayanagara News: ಹೊಸಪೇಟೆಯಲ್ಲಿ ರಾಗಿ, ಜೋಳ ಖರೀದಿ ಪ್ರಕ್ರಿಯೆ ಆರಂಭ

Vijayanagara DC MS Diwakar Visit APMC Market

ಹೊಸಪೇಟೆ: ನಗರದ ಎಪಿಎಂಸಿ (APMC) ಪ್ರಾಂಗಣದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಹಂಗಾಮಿನ ರಾಗಿ ಮತ್ತು ಜೋಳದ ಖರೀದಿ ಪ್ರಕ್ರಿಯೆಯು ಸೋಮವಾರ (Vijayanagara News) ಪ್ರಾರಂಭವಾಯಿತು.

ನಗರದ ಎಪಿಎಂಸಿ ಪ್ರಾಂಗಣಕ್ಕೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌ ಭೇಟಿ ನೀಡಿ, ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಮೂಲಕ ರೈತರಿಂದ ರಾಗಿ ಮತ್ತು ಜೋಳ ಖರೀದಿಸುವ ಪ್ರಕ್ರಿಯೆ ಬಗ್ಗೆ ಮಾಹಿತಿ ಪಡೆದರು. ಪ್ರಸ್ತುತ ಈ ಖರೀದಿ ಕೇಂದ್ರದಲ್ಲಿ 59 ರೈತರು 1132.50 ಕ್ವಿಂಟಾಲ್ ರಾಗಿಯನ್ನು, 23 ರೈತರು 910 ಕ್ವಿಂಟಾಲ್ ಬಿಳಿಜೋಳವನ್ನು ನೋಂದಾಯಿಸಿದ್ದಾರೆ. ಸರ್ಕಾರವು ಈ ಬಾರಿ ಎಫ್.ಎ.ಕ್ಯೂ. ಗುಣಮಟ್ಟದ ಪ್ರತಿ ಕ್ವಿಂಟಾಲ್ ರಾಗಿಗೆ 3,846 ರೂ. ಮತ್ತು ಎಫ್.ಎ.ಕ್ಯೂ. ಗುಣಮಟ್ಟದ ಜೋಳಕ್ಕೆ 3180 ರೂ.ಗಳನ್ನು ಘೋಷಿಸಿರುತ್ತದೆ ಎಂದು ಅಧಿಕಾರಿಗಳು, ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.

ಇದನ್ನೂ ಓದಿ: Vijayanagara News: ವಿಜಯನಗರ ಜಿಲ್ಲೆಯಲ್ಲಿ ನ್ಯಾಯಸಮ್ಮತ, ನಿಸ್ಪಕ್ಷಪಾತ ಚುನಾವಣೆಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 2022-23ನೇ ಸಾಲಿನಲ್ಲಿ ಹೊಸಪೇಟೆಯಲ್ಲಿ ಖರೀದಿ ಕೇಂದ್ರವು ಆರಂಭವಾಗಿದೆ. 2022-23ನೇ ಸಾಲಿನ ಮುಂಗಾರು ಋತುವಿನಲ್ಲಿ ಬೆಳೆದ ಭತ್ತ, ರಾಗಿ ಮತ್ತು ಜೋಳ ಉತ್ಪನ್ನಗಳನ್ನು ಖರೀದಿಸಲು ವಿಜಯನಗರ ಜಿಲ್ಲೆಗೆ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯು ಖರೀದಿ ಎಜೆನ್ಸಿಯಾಗಿರುತ್ತದೆ. ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯು ವಿಜಯನಗರ ಜಿಲ್ಲೆಯ ಹೊಸಪೇಟೆ ಎಪಿಎಂಸಿ ಪ್ರಾಂಗಣದಲ್ಲಿ ಡಿಸೆಂಬರ್ 1 ರಿಂದ ನೋಂದಣಿ ಕೇಂದ್ರವನ್ನು ತೆರೆದಿರುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಖರೀದಿ ಮಾಡಿದ ಉತ್ಪನ್ನವನ್ನು ಸರ್ಕಾರವು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ವಿತರಿಸುವ ಉದ್ದೇಶವಿರುವುದರಿಂದ ರಾಗಿ ಮತ್ತು ಜೋಳವನ್ನು ಬೆಳೆದ ರೈತರು ತಾವು ಬೆಳೆದ ಉತ್ಪನ್ನವನ್ನು ಚೆನ್ನಾಗಿ ಒಣಗಿಸಿ, ಯಾವುದೇ ಕಸ, ಕಡ್ಡಿ, ಧೂಳು, ಮಣ್ಣಿರದಂತೆ ಸ್ವಚ್ಛಗೊಳಿಸಿ ಖರೀದಿ ಕೇಂದ್ರಗಳಿಗೆ ತರಲು ರೈತರಲ್ಲಿ ಮನವಿ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದರು.

ಇದನ್ನೂ ಓದಿ: Ballari News: ಪೇಯಿನ್‌ ಕಿಲ್ಲರ್‌ ಮಾತ್ರೆಗಳಿಂದ ಕಿಡ್ನಿ ಕಾಯಿಲೆ: ಡಾ. ವಸಂತ್ ಶೇಠ್

ಈ ಸಂದರ್ಭದಲ್ಲಿ ಆಹಾರ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ, ಕೃಷಿ ಮಾರಾಟ ಮಂಡಳಿಯ ಸಿದ್ದು ಸ್ವಾಮಿ ಸೇರಿದಂತೆ ಇತರರು ಇದ್ದರು.

Exit mobile version