ಹೊಸಪೇಟೆ: ಫ್ರೂಟ್ಸ್ (FRUITS) ತಂತ್ರಾಂಶದಲ್ಲಿ ರೈತರ (Farmers) ಸಂಪೂರ್ಣ ಮಾಹಿತಿಯನ್ನು ಡಿ.31 ರ ಒಳಗಾಗಿ ಅಪ್‌ಡೇಟ್ ಮಾಡಲು ಮತ್ತು ಬೆಳೆ ನಷ್ಟ ಪರಿಹಾರದ ಮೊದಲ ಕಂತನ್ನು ಹೊಸ ವರ್ಷದ (New Year) ಮೊದಲ ವಾರದಲ್ಲಿ ರೈತರ ಖಾತೆ ಫ್ರೂಟ್ಸ್ ಮೂಲಕ ಪಾವತಿಸಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ವಿಜಯನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈವರೆಗೆ ಶೇ.77 ರಷ್ಟು ಫ್ರೂಟ್ಸ್ ಅಪ್‌ಡೇಟ್ ಮಾಡಲಾಗಿದೆ. ಇದರಿಂದ ಬರ ಪರಿಹಾರದ ಹಣ ರೈತರಿಗೆ ಆನ್‌ಲೈನ್ ಮೂಲಕವೇ ತಲುಪಲಿದೆ. ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ಸಂಪೂರ್ಣ ಜಮೀನಿನ ಒಟ್ಟು ವಿಸ್ತೀರ್ಣ ನಮೂದಿಸಿದರೆ ಮಾತ್ರ ಅವರಿಗೆ ನ್ಯಾಯಯುತ ಪರಿಹಾರ ತಲುಪಲು ಸಾಧ್ಯವಾಗಲಿದೆ.
ರೈತರಿಗೆ ಮೊದಲ ಕಂತಿನ ಹಣ ನೀಡಲು ಸರ್ಕಾರದ ಬಳಿ ಹಣ ಇದೆ. ಆದರೂ ಫ್ರೂಟ್ಸ್ ತಂತ್ರಾಂಶದ ನವೀಕರಣಗೊಳ್ಳದೆ ರೈತರಿಗೆ ಹಣ ಬಿಡುಗಡೆ ಸಾಧ್ಯವಿಲ್ಲ ಎಂದ ಅವರು, ಗ್ರಾಮ ಆಡಳಿತ ಅಧಿಕಾರಿಗೆ ಆತನ ಅಧಿಕಾರದ ವ್ಯಾಪ್ತಿಯಲ್ಲಿ ಯಾವ ರೈತನಿಗೆ ಎಲ್ಲಿ, ಎಷ್ಟು ಎಕರೆ ಜಮೀನಿದೆ? ಎಂಬ ಕನಿಷ್ಠ ಮಾಹಿತಿ ಇದ್ದೇ ಇರುತ್ತದೆ. ಅದನ್ನು ಮತ್ತೆ ರೈತರಲ್ಲಿ ಕೇಳಿ ತಂತ್ರಾಂಶದಲ್ಲಿ ನಮೂದಿಸಲು ಸೂಚಿಸಿದರು.
ಇದನ್ನೂ ಓದಿ: Upcoming Movies 2024: 2024ರ ಬಹು ನಿರೀಕ್ಷಿತ ಬಾಲಿವುಡ್ ಚಲನಚಿತ್ರಗಳಿವು!
ರಾಜ್ಯದಲ್ಲಿ ಶೇ.70 ರಷ್ಟು ಸಣ್ಣ ರೈತರಿದ್ದಾರೆ. ಆದರೆ, ಕೇಂದ್ರ ಸರ್ಕಾರದ ಹಳೆಯ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿನ ಸಣ್ಣ ರೈತರ ಸಂಖ್ಯೆ ಶೇ.44 ಮಾತ್ರ. ಇದರಿಂದ ರಾಜ್ಯಕ್ಕೆ ಲಭ್ಯವಾಗುವ ಬರ ಪರಿಹಾರದಲ್ಲೂ ಅನ್ಯಾಯವಾಗುತ್ತಿದೆ. ಹೀಗಾಗಿ ಗ್ರಾಮ ಲೆಕ್ಕಿಗರು ಮುಂದಿನ ದಿನಗಳಲ್ಲಿ ರೈತರ ಪಹಣಿಗಳನ್ನು ಆಧಾರ್ ನಂಬರ್ ಜತೆಗೆ ಲಿಂಕ್ ಮಾಡಿದರೆ ರಾಜ್ಯದ ಸಣ್ಣ ರೈತರ ಅಂಕಿ ಸಂಖ್ಯೆ ನಿಖರವಾಗಿ ತಿಳಿಯಲಿದೆ. ಇದನ್ನೇ ಕೇಂದ್ರದ ಮುಂದಿಟ್ಟು ರಾಜ್ಯದ ಹಕ್ಕನ್ನು ಮಂಡಿಸಬಹುದು. ಇದಕ್ಕೆ ಸಹಕಾರಿಯಾಗುವಂತೆ ಶೀಘ್ರದಲ್ಲೇ ಆ್ಯಪ್ ಒಂದನ್ನೂ ಅಭಿವೃದ್ಧಿ ಪಡಿಸಲಾಗುವುದು ಎಂದು ಸಚಿವರು ಸೂಚಿಸಿದರು.
ಕುಡಿಯುವ ನೀರು-ಮೇವಿನ ಬಗ್ಗೆ ಎಚ್ಚೆತ್ತುಕೊಳ್ಳಿ
ವಿಜಯನಗರ ಜಿಲ್ಲೆಯಲ್ಲಿ ಎಲ್ಲಿಯಾದರೂ ಕುಡಿಯುವ ನೀರಿನ ಸಮಸ್ಯೆ ಉಂಟಾದರೆ, ಖಾಸಗಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಮುಂಜಾಗ್ರತಾ ಕ್ರಮವಾಗಿ ಈಗಲೇ ಜಿಲ್ಲೆಯಲ್ಲಿ 272 ಟ್ಯಾಂಕರ್‌ಗಳಿಗೆ ಟೆಂಡರ್ ಮಾಡಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ ಎಂದು ಪ್ರಶಂಸಿದ ಅವರು, ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಟ್ಯಾಂಕರ್ ಒಂದೇ ಪರಿಹಾರವಲ್ಲ. ಬದಲಿಗೆ ಖಾಸಗಿ ಬೋರ್ ವೆಲ್‌ಗಳನ್ನು ಬಾಡಿಗೆಗೆ ಪಡೆದು ನೀರಿನ ಸಮಸ್ಯೆ ಎಲ್ಲೇ ಕಂಡು ಬಂದರೂ 24 ಗಂಟೆಯ ಒಳಗಾಗಿ ನೀರು ಪೂರೈಸುವಂತಿರಬೇಕು. ಟ್ಯಾಂಕರ್ ಬಾಡಿಗೆಯನ್ನು 15 ದಿನಗಳಲ್ಲಿ ಬಿಲ್ ಪಾವತಿಗೆ ಕ್ರಮ ವಹಿಸಬೇಕು ಎಂದರು.
ಬಗರ್ ಹುಕುಂ ಅರ್ಜಿಗಳ ಶೀಘ್ರ ವಿಲೆಗೆ ಸೂಚನೆ
ನಮೂನೆ 50, 53, 57ಕ್ಕೆ ಸಂಬಂಧಿಸಿದ ಅಕ್ರಮ-ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡಲು ಕೋರಿ ಜಿಲ್ಲೆಯಲ್ಲಿ 26,365 ಅರ್ಜಿಗಳು ಬಾಕಿ ಇವೆ. ನಿಜವಾದ ಸಾಗುವಳಿದಾರರಿಗೆ ಭೂಮಿ ನೀಡುವ ಸಲುವಾಗಿ ಬಗರ್ ಹುಕುಂ ಆ್ಯಪ್ ಅನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಅಧಿಕಾರಿಗಳು ಅರ್ಜಿದಾರರ ನಿರ್ದಿಷ್ಟ ಪ್ರದೇಶಕ್ಕೆ ತೆರಳಿ ಆ್ಯಪ್ ಮೂಲಕ `ಜಿಯೋ ಫೆನ್ಸಿಂಗ್ʼ ಮಾಡಬೇಕು. ಆ ಮೂಲಕ ಸ್ಯಾಟಲೈಟ್ ಇಮೇಜ್ ಪಡೆದು ಕೃಷಿ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಆನಂತರ ಭೂ ಮಂಜೂರಾತಿ ಸೇರಿ 4.38 ಎಕರೆ ಜಮೀನಿಗಿಂತ ಹೆಚ್ಚಾಗಬಾರದು ಮತ್ತು ಅರ್ಜಿದಾರರಿಗೆ ಬೇರೆಲ್ಲೂ ಕೃಷಿ ಭೂಮಿ ಇಲ್ಲ ಎಂಬ ಕುರಿತು ಮಾಹಿತಿ ಖಚಿತಪಡಿಸಿಕೊಂಡು ಭೂ ಮಂಜೂರು ಮಾಡಬೇಕು.
ಈ ಪ್ರಕ್ರಿಯೆ ಕನಿಷ್ಠ ಪ್ರತಿ ವಾರಕ್ಕೊಂದು ಗ್ರಾಮಗಳಲ್ಲಿ ಈ ಕೆಲಸ ಆಗಬೇಕು. ಸಾಗುವಳಿ ಚೀಟಿ ಹಾಗೂ ಹಣ ಪಾವತಿ ಎರಡೂ ಡಿಜಿಟಲ್ ರೂಪದಲ್ಲಿ ಇರಬೇಕು, ತಹಸೀಲ್ದಾರರೇ ಕ್ರಯ ಮಾಡಿಕೊಟ್ಟು ರೈತರಿಗೆ ತುಸು ನೆಮ್ಮದಿ ನೀಡಿ ಎಂದು ಅವರು ತಿಳಿಸಿದರು.
ಇದನ್ನೂ ಓದಿ: Snake in bed : ಬೆಡ್ ಶೀಟ್ ಒಳಗೆ ನಾಗಪ್ಪ ಬುಸ್; ಮನೆಯವರು ಜಸ್ಟ್ ಮಿಸ್! video ಇದೆ!
ಅಲ್ಲದೆ, ಬಗರ್ ಹುಕುಂ ಅರ್ಜಿ ವಿಲೇವಾರಿ ಸಂದರ್ಭದಲ್ಲಿ ಅಧಿಕಾರಿಗಳು ಯಾವುದೇ ಪ್ರಭಾವಿಗಳ ಪಟ್ಟಭದ್ರ ಹಿತಾಸಕ್ತಿಗಳಿಗೆ ಅನುಕೂಲವಾಗುವಂತೆ ವರ್ತಿಸಬಾರದು, ಬದಲಾಗಿ ಬಡ ಜನರಿಗೆ ಮತ್ತು ಅರ್ಹರಿಗೆ ನ್ಯಾಯ ಒದಗಿಸಲು ಬದ್ಧರಾಗಿರಬೇಕು. ನಿಜಕ್ಕೂ ಉಳುಮೆಯಲ್ಲಿ ತೊಡಗಿರುವ ರೈತರಿಗೆ ಮಾತ್ರ ಸಾಗುವಳಿ ಚೀಟಿ ನೀಡಬೇಕು ಎಂದ ಅವರು, ಭೂ ಮಂಜೂರಾತಿ ಎಲ್ಲಾ ಪ್ರಕ್ರಿಯೆಗಳು ಡಿಜಿಟಲೀಕರಣ ರೂಪದಲ್ಲಿರಲಿದೆ ಎಂದರು.
ಕಂದಾಯ ಗ್ರಾಮಗಳ ಘೋಷಣೆಗೆ ಗಡುವು
ಕಂದಾಯ ಗ್ರಾಮಗಳ ಘೋಷಣೆ ವಿಚಾರದಲ್ಲಿ ವಿಜಯನಗರದಲ್ಲಿ 115 ಗ್ರಾಮಗಳು ಅಂತಿಮ ಘೋಷಣೆಗೆ ಬಾಕಿ ಇದ್ದು, 48 ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಅಲ್ಲದೆ, 203 ಗ್ರಾಮಗಳನ್ನು ದಾಖಲೆ ರಹಿತ ಜನವಸತಿ ಪ್ರದೇಶ ಎಂದು ಗುರುತಿಸಲಾಗಿದ್ದು, ಗ್ರಾಮದಿಂದ 1 ಕಿ.ಮೀ ದೂರವಿರುವ ಮತ್ತು 50 ಕ್ಕೂ ಹೆಚ್ಚು ಕುಟುಂಬ ವಸತಿ ಇರುವ ಗ್ರಾಮಗಳನ್ನು ಕಂದಾಯ ಗ್ರಾಮಗಳ ಪಟ್ಟಿಗೆ ಸೇರಿಸಲು ಅವಕಾಶವಿದೆ. ಕಂದಾಯ ಇಲಾಖೆಗೆ ಸೇರದ ಕಾರಣ ಕಂದಾಯೇತರ ಜನವಸತಿ ನಿವಾಸಿಗಳು ಅಭಿವೃದ್ಧಿ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಇದೇ ಕಾರಣಕ್ಕೆ ಕರ್ನಾಟಕ ಭೂ ಕಂದಾಯ ಕಾಯಿದೆಗೆ ತಿದ್ದುಪಡಿ ತಂದು ತಾಂಡ-ಗೊಲ್ಲರಹಟ್ಟಿ ಸೇರಿದಂತೆ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮ ಎಂದು ಘೋಷಿಸಲು ಅನುವು ಮಾಡಿಕೊಡಲಾಗಿತ್ತು.
ಇದು ಬಡವರ ಕೆಲಸ. ಅಧಿಕಾರಿಗಳು ಮಾನವೀಯತೆಯಿಂದ ಕಾರ್ಯನಿರ್ವಹಿಸಬೇಕು. ಹೀಗಾಗಿ ಆದ್ಯತೆಯ ಮೇಲೆ ಜನವಸತಿ ಗ್ರಾಮಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಲು ಪಟ್ಟಿ ಸಿದ್ದಪಡಿಸಿ, ಅನುಮೋದನೆ ಪಡೆದು ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಸೂಚನೆ ನೀಡಿದರು.
ಒತ್ತುವರಿ ತೆರವುಗೊಳಿಸಿ
ಸರ್ಕಾರಿ ಭೂ ಒತ್ತುವರಿಯನ್ನು ತೆರವುಗೊಳಿಸಲು ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಆದರೂ, ಅಧಿಕಾರಿಗಳು ಈ ಬಗ್ಗೆ ಕ್ರಮ ಜರುಗಿಸದಿರಲು ಕಾರಣವೇನು? ಎಂದು ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ: Kannada Horata : ಕನ್ನಡ ನಾಮಫಲಕ; ಬೃಹತ್ ಹೋರಾಟಕ್ಕಿಳಿದ ಕರವೇ ; ಮಾಲ್ ಆಫ್ ಏಷ್ಯಾಗೆ ಬಿಗಿ ಭದ್ರತೆ
ಒತ್ತುವರಿಯಾದ ಸರ್ಕಾರಿ ಆಸ್ತಿಯನ್ನು ಟ್ಯಾಗ್ ಮಾಡಿ ಅಧಿಕಾರಿಗಳು ಮೂರು ತಿಂಗಳಿಗೊಮ್ಮೆ ಸರ್ಕಾರಿ ಆಸ್ತಿಗಳ ಸುತ್ತ ಪೊಲೀಸರ ರೀತಿ ಬೀಟ್ ಹಾಕುವ ಪದ್ಧತಿ ಆರಂಭಿಸಬೇಕು ಎಂದರು. ಅಲ್ಲದೆ, ಇನ್ನಾದರೂ ಅಧಿಕಾರಿಗಳು ವಾರದಲ್ಲಿ ಒಂದು ದಿನ ಭೂ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾಗಬೇಕು ಎಂದರು.
ಇ-ಆಫೀಸ್ ಅನುಷ್ಠಾನ, ಸಚಿವರ ತೀವ್ರ ಅಸಮಾಧಾನ
ವಿಜಯನಗರದಲ್ಲಿ ಇ-ಆಫೀಸ್ ಬಳಕೆ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ. ಆದರೆ, ಸರಾಸರಿಯಾಗಿ ಜಿಲ್ಲಾ ಭವನದಲ್ಲಿ ಮಾತ್ರ ಇ-ಆಫೀಸ್ ಬಳಕೆ ಹೆಚ್ಚಾಗಿದೆ. ತಹಸೀಲ್ದಾರ್ ಹಾಗೂ ಎ.ಸಿ ಮಟ್ಟದಲ್ಲಿ ಈಗಲೂ ಇ-ಆಫೀಸ್ ಬಳಕೆ ಗಣನೀಯವಾಗಿ ಏರಿಕೆಯಾಗಿಲ್ಲ ಎಂದು ಸಚಿವರು ಅಸಮಧಾನ ಹೊರಹಾಕಿದರು.
ತಹಸೀಲ್ದಾರ್ ಮತ್ತು ಉಪ ವಿಭಾಗಾಧಿಕಾರಿ ಕಚೇರಿಗೆ ದಿನಕ್ಕೆ ಸರಾಸರಿಯಾಗಿ 30 ರಿಂದ 40 ಮಾತ್ರ ಹೊಸ ಕಡತ-ಟಪಾಲುಗಳು ಬರುತ್ತವೆ. ಇವನ್ನು ಇ-ಆಫೀಸ್ ಮೂಲಕ ವಿಲೇವಾರಿ ಮಾಡಲು ಏನು ಸಮಸ್ಯೆ? ಎಂದು ಪ್ರಶ್ನಿಸಿದ ಸಚಿವರು, ಇನ್ನುಮುಂದೆ ಭೌತಿಕ ಕಡತಗಳನ್ನು ಸ್ವೀಕರಿಸುವಂತಿಲ್ಲ.
ಜನರಿಂದ ಟಪಾಲು ಸ್ಬೀಕರಿಸುತ್ತಿದ್ದಂತೆ ಇ-ಆಫೀಸ್ ಫೈಲ್ ಸೃಷ್ಟಿಸಬೇಕು. ಜನರಿಗೆ ಶೀಘ್ರ ಮತ್ತು ಸುಲಭ ಆಡಳಿತ ನೀಡುವ ಮತ್ತು ಭ್ರಷ್ಟಾಚಾರಕ್ಕೆ ತಡೆಯೊಡ್ಡುವ ಸಲುವಾಗಿಯೇ ಇ-ಆಫೀಸ್ ಜಾರಿಗೊಳಿಸಲಾಗಿದೆ. ಪ್ರತಿಯೊಬ್ಬ ಅಧಿಕಾರಿಯೂ ಇದನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ತಾಕೀತು ಮಾಡಿದರು.
ಇದನ್ನೂ ಓದಿ: Gold Rate Today: 22 ಕ್ಯಾರಟ್ ಚಿನ್ನದ ಬೆಲೆ ₹10 ಏರಿಕೆ, 24 ಕ್ಯಾರಟ್‌ಗೆ ಎಷ್ಟಿದೆ?
ಸಭೆಯಲ್ಲಿ ಶಾಸಕರಾದ ಎಚ್.ಆರ್.ಗವಿಯಪ್ಪ, ಲತಾ ಮಲ್ಲಿಕಾರ್ಜುನ್, ಕೃಷ್ಣನಾಯಕ್, ಡಾ. ಎನ್.ಟಿ.ಶ್ರೀನಿವಾಸ್, ಕಂದಾಯ ಇಲಾಖೆ ಆಯುಕ್ತ ಪಿ.ಸುನೀಲ್ ಕುಮಾರ್, ಭೂ ಮಾಪನ ಇಲಾಖೆ ಆಯುಕ್ತ ಮಂಜುನಾಥ್, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ., ಅಪರ ಜಿಲ್ಲಾಧಿಕಾರಿ ಅನುರಾಧ ಜಿ. ಸೇರಿದಂತೆ ತಹಸೀಲ್ದಾರರು ಉಪಸ್ಥಿತರಿದ್ದರು.