ಹೊಸಪೇಟೆ: ನಗರದ ಶ್ರೀ ಜಗದ್ಗುರು ಕೊಟ್ಟೂರು ಸಂಸ್ಥಾನ ಮಠದ ಸರ್ವಧರ್ಮ ಸಮನ್ವಯ ಮಹಾ ರಥೋತ್ಸವವು ಸೋಮವಾರ ಸಡಗರ-ಸಂಭ್ರಮದಿಂದ (Vijayanagara News) ಜರುಗಿತು.
ಭಾಲ್ಕಿ ಹಿರೇಮಠದ ಡಾ. ಬಸವಲಿಂಗ ಪಟ್ಟದ್ದೇವರು ರಥೋತ್ಸವಕ್ಕೆ ಚಾಲನೆ ನೀಡಿದರು. ಶ್ರೀ ಮಠದಿಂದ ಆರಂಭವಾದ ರಥೋತ್ಸವ ಪಾದಗಟ್ಟೆ ಆಂಜನೇಯ ದೇವಸ್ಥಾನದವರೆಗೆ ರಥೋತ್ಸವವು ಸಾಗಿತು.
ಶ್ರೀ ಜಗದ್ಗುರು ಕೊಟ್ಟೂರು ಸಂಸ್ಥಾನ ಮಠದ ಲಿಂಗೈಕ್ಯ ಜಗದ್ಗುರು ಡಾ.ಸಂಗನಬಸವ ಸ್ವಾಮೀಜಿ ಅವರು 2017 ರಲ್ಲಿ ಈ ಸರ್ವಧರ್ಮ ಸಮನ್ವಯ ರಥೋತ್ಸವ ಆರಂಭಿಸಿದ್ದರು. ʼಸಮಾಜದಲ್ಲಿ ಭಾವೈಕ್ಯತೆ ಮೂಡಲಿ, ಕೋಮು ಸೌಹಾರ್ದತೆ ಹೆಚ್ಚಲಿ, ಮನುಜ ಕುಲ ಒಂದೇ ಆಗಿರಬೇಕು ಎಂಬ ಸದುದ್ದೇಶದಿಂದ ಪ್ರತಿ ವರ್ಷ ಫಾಲ್ಗುಣ ಬಹುಳ ಸಪ್ತಮಿಯಂದು ರಥೋತ್ಸವ ಜರುಗುತ್ತದೆ’ ಎಂದು ಕೊಟ್ಟೂರು ಸಂಸ್ಥಾನ ಮಠದ ಬಸವಲಿಂಗ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: Summer Season: ವಾಹನ ಸವಾರರನ್ನು ಬಿಸಿಲ ತಾಪದಿಂದ ಪಾರು ಮಾಡಲು ಟ್ರಾಫಿಕ್ ಸಿಗ್ನಲ್ ಸ್ಥಗಿತ!
ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ರಾಜ್ಯದಲ್ಲಿ ಅನೇಕ ರಥೋತ್ಸವಗಳು ನಡೆಯುತ್ತವೆ, ಆದರೆ ಸರ್ವಧರ್ಮ ಗ್ರಂಥಗಳನ್ಳು ಇಟ್ಟು ರಥೋತ್ಸವ ನಡೆಯುವುದು ವಿರಳ. ಅದಕ್ಕಾಗಿಯೇ ಇಲ್ಲಿನ ರಥೋತ್ಸವ ವಿಶಿಷ್ಟವೆನಿಸುತ್ತದೆ. ಸರ್ವ ಧರ್ಮೀಯರು ತಮ್ಮ ಧರ್ಮಗ್ರಂಥಗಳನ್ನು ವೈಭವದ ಮೆರವಣಿಗೆಯಲ್ಲಿ ತಂದು ರಥದಲ್ಲಿಟ್ಟು ರಥೋತ್ಸವದಲ್ಲಿ ಪಾಲ್ಗೊಳ್ಳುವುದನ್ನು ಕಣ್ತುಂಬಿಕೊಳ್ಳುವುದೇ ಆನಂದದ ಸಂಗತಿ. ಜಾತಿ, ಧರ್ಮಗಳ ನಡುವೆ ದ್ವೇಷ ಹೆಚ್ಚುತ್ತಿರುವ ಸಂದರ್ಭದಲ್ಲಿ ಇಂತಹ ಉತ್ಸವ ನೀಡುವ ಸಂದೇಶ ಅದ್ಭುತ’ ಎಂದು ತಿಳಿಸಿದರು. ರಥೋತ್ಸವದಲ್ಲಿ ಕೊಟ್ಟೂರು ಶಾಖಾ ಮಠದ ಶ್ರೀಗಳು ಪಾಲ್ಗೊಂಡಿದ್ದರು.
ರಥೋತ್ಸವದ ಬಳಿಕ ಭಜನಾ ಮಂಡಳಿಗಳಿಂದ ಭಜನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬಳಿಕ ಗಣೇಶ ಅಮೀನಗಡ ರಚಿಸಿದ, ಭಾಗ್ಯಶ್ರೀ ಬಿ. ಪಾಳಾ ಅಭಿನಯಿಸಿದ ‘ಕೌದಿ’ ಏಕವ್ಯಕ್ತಿ ನಾಟಕ ಪ್ರದರ್ಶನಗೊಂಡಿತು.
ಇದನ್ನೂ ಓದಿ: Vijayanagara News: ಕೊಟ್ಟೂರಿನಲ್ಲಿ ನಿವೃತ್ತ ಶಿರಸ್ತೇದಾರ್ ಲೀಲಾ ಎಸ್.ಗೆ ಬೀಳ್ಕೊಡುಗೆ
ಹತ್ತು ದಿನ ನಡೆದ ವಿಶ್ವಧರ್ಮ ಪ್ರವಚನ
ಸರ್ವಧರ್ಮ ಸಮನ್ವಯ ರಥೋತ್ಸವದ ಹಿನ್ನಲೆಯಲ್ಲಿ ವಿಶ್ವಧರ್ಮ ಪ್ರವಚನ ಮಾರ್ಚ್ 21ರಿಂದ 31ರವರೆಗೆ ಮಠದ ಆವರಣದಲ್ಲಿ ನಡೆಯಿತು. ಗದಗ ಡೋಣಿಯ ಶಶಿಧರ ಶಾಸ್ತ್ರಿ ಹಿರೇಮಠ ಅವರು ಪ್ರವಚನ ನಡೆಸಿಕೊಟ್ಟಿದ್ದರು.