ಕೂಡ್ಲಿಗಿ: ಮುಂಬರುವ ದಿನಗಳಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ (Drinking Water) ತೊಂದರೆಯಾಗದಂತೆ ಅಧಿಕಾರಿಗಳು ಈಗಿನಿಂದಲೇ ಜಾಗೃತರಾಗಿ ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಸೂಚನೆ ನೀಡಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಬರ ಹಿನ್ನೆಲೆಯಲ್ಲಿ ಟಾಸ್ಕ್ ಫೋರ್ಸ್ ಸಮಿತಿಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆಯೋ ಅಲ್ಲಿ ಪರ್ಯಾಯವಾಗಿ ವ್ಯವಸ್ಥೆ ಕೈಗೊಳ್ಳಬೇಕು ಎಂದು ತಿಳಿಸಿದರು.
ತಾಲೂಕಿನ ಬಡೇಲಡಕು, ಆಲೂರು, ಕಾನಮಡುಗು, ಸಂಕ್ಲಾಪುರದಟ್ಟಿ ಸೇರಿದಂತೆ ಇತರೆ ಕೆಲ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇದ್ದು, ಅಧಿಕಾರಿಗಳು ಕೊಳವೆ ಬಾವಿ ಕೊರೆಸಲು ಕ್ರಮ ಕೈಗೊಳಬೇಕು. ಇಲ್ಲವಾದಲ್ಲಿ ಖಾಸಗಿ ಬೋರ್ ಗಳ ಮೂಲಕ ನೀರು ಸರಬರಾಜು ಮಾಡಲು ಮುಂದಾಗಿ ಎಂದು ಸೂಚಿಸಿದ ಅವರು, ಅವಶ್ಯವಿದ್ದೆಡೆ ಕೊಳವೆ ಬಾವಿ ಕೊರೆಸಿ, ವಿದ್ಯುತ್ ಸಂಪರ್ಕವನ್ನು ಜೆಸ್ಕಾಂ ಅಧಿಕಾರಿಗಳು ಇಲ್ಲಸಲ್ಲದ ಕಾನೂನುಗಳನ್ನು ಹೇಳದೆ ಸಂಪರ್ಕವನ್ನು ಕಲ್ಪಿಸಲು ಸೂಚನೆ ನೀಡಿದರು.
ಇದನ್ನೂ ಓದಿ: Viral Video: ಈ ಮಗುವಿಗೆ ಜೀವಂತ ಹಾವೇ ಆಟದ ಗೊಂಬೆ; ನೆಟ್ಟಿಗರು ಶಾಕ್
ಇನ್ನು ನಾಗರಹುಣಸೆ ಗ್ರಾಮದಲ್ಲಿ ಎರಡು ತಿಂಗಳ ಹಿಂದೆಯೇ ನೀರಿನ ಸಮಸ್ಯೆ ಇದ್ದು, ಈಗಾಗಲೇ ಕೊಳವೆ ಬಾವಿ ಕೊರೆಸಿದೆ, ನೀರು ಕೂಡ ಸಾಕಷ್ಟಿದೆ ಆದರೂ ಅಧಿಕಾರಿಗಳು ಜನರಿಗೆ ನೀರನ್ನು ನೀಡುತ್ತಿಲ್ಲ,ಇಲ್ಲದ ನೆಪಗಳು ಹೇಳುತ್ತ ಕಾಲಹರಣ ಮಾಡುತ್ತಿರುವುದು ಸರಿಯಲ್ಲ, ಈ ಕೂಡಲೇ ಅಧಿಕಾರಿಗಳು ನೀರು ಸರಬರಾಜು ಮಾಡುವಂತೆ ತಾಕೀತು ಮಾಡಿದರು.
ಡಿಸೆಂಬರ್‌ವರೆಗೂ ಮೇವಿನ ಸಮಸ್ಯೆ ಎದುರಾಗುವ ಲಕ್ಷಣಗಳು ಇಲ್ಲ, ಆದರೂ ಇನ್ನೊಮ್ಮೆ ಸರ್ವೇ ಮಾಡಿ ಎಲ್ಲೆಲ್ಲಿ ಗೋಶಾಲೆಗಳು ಆರಂಭಿಸಬೇಕು ಎನ್ನುವ ವರದಿ ನೀಡುವುದಾಗಿ ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ಲೋಹಿತ್ ಕುಮಾರ್ ಸಭೆಯಲ್ಲಿ ಶಾಸಕರಿಗೆ ತಿಳಿಸಿದರು.
ಟಾಸ್ಕ್ ಫೋರ್ಸ್ ಸಮಿತಿಯ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಹೆಚ್ಚು ಜವಾಬ್ದಾರಿಯುತ ಕರ್ತವ್ಯ ನಿರ್ವಹಿಸಬೇಕು, ನೀರಿಗೆ ಸಂಬಂಧಿಸಿದ ದೂರುಗಳು ಬಂದಲ್ಲಿ ತಕ್ಷಣವೇ ಪರ್ಯಾಯ ವ್ಯವಸ್ಥೆ ಕೈಗೊಳ್ಳಿ. ಸಮಸ್ಯೆಗಳು ಇದ್ದಲ್ಲಿ ನನಗೆ ಮಾಹಿತಿ ನೀಡಿ ನಾನು ಬಗೆಹರಿಸುವೆ ಎಂದು ಶಾಸಕರು ಭರವಸೆ ನೀಡಿದರು.
ಇದನ್ನೂ ಓದಿ: Bangles Trend: ಕೈಗಳ ಸಿಂಗಾರಕ್ಕೆ ಬಂತು ಟಾಕಿಂಗ್ ಬ್ಯಾಂಗಲ್ಸ್
ತಹಸೀಲ್ದಾರ್ ಎಂ. ರೇಣುಕಾ, ತಾಪಂ ನರೇಗಾ ಸಹಾಯಕ ನಿರ್ದೇಶಕ ವಿಜಯಕುಮಾರ್, ಕೃಷಿ ಸಹಾಯಕ ನಿರ್ದೇಶಕ ಸುನೀಲ್ ಕುಮಾರ್, ಪಪಂ ಮುಖ್ಯಾಧಿಕಾರಿ ಫಿರೋಜ್ ಖಾನ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಪ್ರಸನ್ನ, ಜೆಸ್ಕಾ ಎಇ ಮಾರಪ್ಪ ಇದ್ದರು.