Site icon Vistara News

Vijayanagara News: ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ 120 ಮನೆಗಳಿಗೆ ಭೇಟಿ ನೀಡಿದ ಶಿಕ್ಷಕ

eacher visit 120 homes in Hosapete to improve SSLC result

ಹೊಸಪೇಟೆ: ಎಸ್‌ಎಸ್‌ಎಲ್‌ಸಿ (SSLC) ಫಲಿತಾಂಶ ಸುಧಾರಣೆಗಾಗಿ ಹೊಸಪೇಟೆ ನಗರ ಹಾಗೂ ತಾಲೂಕಿನ ವಿವಿಧ ಗ್ರಾಮಗಳ (Vijayanagara News) 120 ಮನೆಗಳಿಗೆ ಭೇಟಿ ನೀಡಿ ಮಕ್ಕಳ ಕಲಿಕಾ ಮಟ್ಟ ಹೆಚ್ಚಿಸಲು ತಮ್ಮದೇ ಆದ ಪ್ರಯತ್ನ ನಡೆಸಿದ್ದಾರೆ ಸಮಾಜ ವಿಜ್ಞಾನ ಶಿಕ್ಷಕ ಸೋಮಪ್ಪ ಎಂ.

ಹೌದು, ಶಿಕ್ಷಕ ಸೋಮಪ್ಪ ಎಂ. ಅವರು ಮಂಗಳೂರಿನ ಮುಲ್ಲಕಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಒಂಭತ್ತು ವರ್ಷ ಸೇವೆ ಸಲ್ಲಿಸಿದ್ದಾರೆ. ಹೊಸಪೇಟೆ ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ (ಮಾಜಿ ಪುರಸಭೆ) ಸಮಾಜ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸೋಮಪ್ಪ ಅವರು, ಕಲಿಕೆಯಲ್ಲಿ ಸ್ವಲ್ಪ ಹಿಂದೆ ಬಿದ್ದಿರುವ ಮತ್ತು ಕಷ್ಟಪಟ್ಟು ಪ್ರಯತ್ನ ನಡೆಸುತ್ತಿರುವ 120 ವಿದ್ಯಾರ್ಥಿನಿಯರ ಮನೆಗಳಿಗೆ ತೆರಳಿ ಅವರ ಮನೆಯ ಪರಿಸರ, ಓದುವ ವಾತಾವರಣ ತಿಳಿದುಕೊಂಡು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಹೇಗೆ ಎದುರಿಸಬೇಕು ಎಂಬ ಮಾಹಿತಿಯನ್ನು ವಿದ್ಯಾರ್ಥಿನಿಯರಿಗೆ ಹಾಗೂ ಅವರ ಪೋಷಕರಿಗೆ ನೀಡಿ ಬಂದಿದ್ದಾರೆ. ಹೀಗೆ ಮನೆ ಭೇಟಿಯನ್ನು ಒಮ್ಮೆ ಮಾಡಿ ಬಂದಿಲ್ಲ, ಮೂರರಿಂದ ನಾಲ್ಕು ಬಾರಿ ಈ ಮನೆಗಳಿಗೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ: Kalaburagi News: ಲೋಕಸಭೆ ಚುನಾವಣೆಯ ನಂತರ ಕಾಂಗ್ರೆಸ್ ಸರ್ಕಾರ ಪತನ: ಡಾ.ಉಮೇಶ್ ಜಾಧವ್

ಮುಲ್ಲಕಾಡು ಶಾಲೆಯಲ್ಲಿ ಐದು ವರ್ಷ ನಾನು ಮನೆ ಮನೆಗೆ ತೆರಳಿ ಓದುವ ಹವ್ಯಾಸವನ್ನು ಮಕ್ಕಳಲ್ಲಿ ಬೆಳೆಸಲು ಪ್ರಯತ್ನಿಸಿದ್ದೆ. ಅದಕ್ಕೆ ಉತ್ತಮ ಪ್ರತಿಫಲವೂ ದೊರೆತಿತ್ತು ಎಂದು ಶಿಕ್ಷಕ ಸೋಮಪ್ಪ ತಿಳಿಸಿದ್ದಾರೆ.

ಆಗಸ್ಟ್‌ನಿಂದ ಮನೆ, ಮನೆಗೆ ಭೇಟಿ

ಶಿಕ್ಷಕ ಸೋಮಪ್ಪ ಅವರು ಕಳೆದ ಆಗಸ್ಟ್‌ನಿಂದ ಮನೆ ಭೇಟಿ ಆರಂಭಿಸಿದ್ದರು. ಕೆಲವೊಮ್ಮೆ ಶಾಲೆಯ ಮುಖ್ಯಾಧ್ಯಾಪಕಿ ಪ್ರಮೀಳಾ ಬಿ.ಅಲಗಣಿ ಅವರೂ ಸಾಥ್‌ ನೀಡಿದ್ದಾರೆ. ಸೋಮಪ್ಪ ಅವರು ತಮ್ಮ ಬೈಕ್‌ನಲ್ಲಿ ಹೊಸಪೇಟೆ ನಗರ ಮಾತ್ರವಲ್ಲದೆ, ಕಣಿವೆರಾಯನ ಗುಡಿ, ವಡ್ಡರಹಳ್ಳಿ, ಜಿ. ಜಿ. ಕ್ಯಾಂಪ್, ಮಲಪನಗುಡಿ, ಹೊಸ ಹಂಪಿ, ಕಡ್ಡಿರಾಂಪುರ ತಾಂಡಾ, ಕಡ್ಡಿರಾಂಪುರ, ಬೆನಾಕಪುರ, ಹೊಸೂರು, ಹಿಪ್ಪಿತೇರಿ ಮಾಗಾಣಿ ಸೇರಿ 11 ಊರುಗಳ 120 ಮನೆಗಳಿಗೆ ಸುಮಾರು ಮೂರು, ಮೂರು ಬಾರಿ ಭೇಟಿ ನೀಡಿ ಮಕ್ಕಳ ಕಲಿಕಾ ಮಟ್ಟ ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: Koppala News: ಸಮಯಕ್ಕೆ ಸರಿಯಾಗಿ ಸಿ ವಿಜಿಲ್ ದೂರುಗಳ ವಿಲೇವಾರಿ ಮಾಡಿ: ಡಿಸಿ ನಲಿನ್ ಅತುಲ್

ತಾಲೂಕಿಗೆ ದ್ವಿತೀಯ

ಕಳೆದ ಸಾಲಿನಲ್ಲಿ (2022–23) ನಗರದ ಪುರಸಭೆ ಶಾಲೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಶೇ 92ರಷ್ಟು ಸಾಧನೆಯೊಂದಿಗೆ ತಾಲೂಕಿಗೆ ದ್ವಿತೀಯ ಸ್ಥಾನದಲ್ಲಿತ್ತು. ಈ ಬಾರಿಯ ಪರೀಕ್ಷೆಗೆ ಶಾಲೆಯ 190ರಷ್ಟು ವಿದ್ಯಾರ್ಥಿನಿಯರು ಸಜ್ಜಾಗುತ್ತಿದ್ದು, ಶಿಕ್ಷಕ ಸೋಮಪ್ಪ ಅವರ ಮನೆ ಭೇಟಿಯ ಪ್ರಯತ್ನ ಎಂತಹ ಫಲಿತಾಂಶ ತಂದುಕೊಡುತ್ತದೆ ಎಂಬ ಕುತೂಹಲ ಗರಿಗೆದರಿದೆ.

Exit mobile version