Site icon Vistara News

Vijayanagara News: ಮೀನುಗಾರರಿಗೆ ರಾಜ್ಯ‌ ಸರ್ಕಾರದಿಂದ ನಾನಾ ಸೌಕರ್ಯ; ಸಚಿವ ಮಂಕಾಳ ವೈದ್ಯ

Vijayanagara News

ಹೊಸಪೇಟೆ: ಬಳ್ಳಾರಿ ವಲಯದ ವಿಜಯನಗರ, ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆಯು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್. ವೈದ್ಯ ಅವರ ಅಧ್ಯಕ್ಷತೆಯಲ್ಲಿ ಶನಿವಾರ (Vijayanagara News) ನಡೆಯಿತು.

ನಗರದ ಜಿಲ್ಲಾಡಳಿತ ಭವನದಲ್ಲಿನ ಆಡಿಟೋರಿಯಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ಮೀನುಗಾರಿಕೆ ಇಲಾಖೆಯು ಯಾವಾಗಲು ಮೀನುಗಾರರ ಪರವಾಗಿದೆ. 8 ರಿಂದ 10ನೇ ತರಗತಿಯಲ್ಲಿ ಓದುವ ಮೀನುಗಾರರ ಮಕ್ಕಳಿಗೆ 2000 ರೂ. ಪಿಯುಸಿಯಲ್ಲಿ ವಿದ್ಯಾರ್ಥಿನಿಯರಿಗೆ 3 ಸಾವಿರ ರೂ., ವಿದ್ಯಾರ್ಥಿಗಳಿಗೆ 2500 ರೂ., ಎಲ್‌ಎಲ್‌ಬಿ ಸೇರಿದಂತೆ ಬೇರೆ ಬೇರೆ ಕೋರ್ಸ್ ಓದುವ ವಿದ್ಯಾರ್ಥಿಗಳಿಗೆ 7500, ವಿದ್ಯಾರ್ಥಿನಿಯರಿಗೆ 8 ಸಾವಿರ ರೂ., ಎಂಬಿಬಿಎಸ್ ಓದುವವರಿಗೆ 10,000 ರೂ ಶಿಷ್ಯವೇತನ ನೀಡಲಾಗುತ್ತದೆ. ಐಎಎಸ್, ಐಪಿಎಸ್ ಓದ ಬಯಸುವ ವಿದ್ಯಾರ್ಥಿಗಳಿಗೆ ಉಚಿತ ಕೊಚಿಂಗ್‌ಗೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: MB Patil: ವಿಮಾನ‌ ನಿಲ್ದಾಣ, ಏರ್ ಸ್ಟ್ರಿಪ್ ಪ್ರಗತಿ ಪರಿಶೀಲನೆ; ತಾಂತ್ರಿಕ ಅಡಚಣೆ ನಿವಾರಣೆಗೆ ಸಚಿವ ಎಂ‌.ಬಿ. ಪಾಟೀಲ ಸೂಚನೆ

ರಾಜ್ಯ ಸರ್ಕಾರವು ಬಡವರ ಪರವಾಗಿದೆ.‌ ಪ್ರತಿಯೊಬ್ಬ ಶಾಸಕರು ಎಲ್ಲರಿಗೂ ಸ್ಪಂದಿಸುತ್ತಿದ್ದಾರೆ. ಮೀನುಗಾರರಿಗೆ ಸರ್ಕಾರದಿಂದ ಸಿಗಬೇಕಾದ ಎಲ್ಲ ಸೌಕರ್ಯಗಳನ್ನು ಫಲಾನುಭವಿಗಳಿಗೆ ಡಿಬಿಟಿ ಮೂಲಕ ನೇರವಾಗಿ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಮೀನುಗಾರಿಕೆ ಉತ್ಪಾದನೆ ಹೆಚ್ಚಾಗಬೇಕು ಎಂದು ಸಚಿವರು ಸಲಹೆ ಮಾಡಿದರು.

ರಾಜ್ಯದಲ್ಲಿ ಈ ಬಾರಿ ಮೀನುಗಾರರಿಗೆ 10 ಸಾವಿರ ವಸತಿ ಮಂಜೂರು ಮಾಡಲಾಗಿದೆ.‌ ಇದರಿಂದಾಗಿ ಸೂಕ್ತವಾದ ದಾಖಲಾತಿ ಒದಗಿಸುವ ಅರ್ಹ ಬಡ ಮೀನುಗಾರರಿಗೆ ವಸತಿ ವ್ಯವಸ್ಥೆಯಾಗಲಿದೆ ಎಂದು ತಿಳಿಸಿದರು.

ಕಚೇರಿ ಸ್ಥಾಪನೆಗೆ ಒತ್ತು

ವಿಜಯನಗರ ಜಿಲ್ಲೆ ಹೇರಳವಾಗಿ ನೀರಿನ ಮೂಲ ಮತ್ತು ಸೌಕರ್ಯ ಇರುವ ಜಿಲ್ಲೆಯಾಗಿದೆ. ಬೃಹತ್ ತುಂಗಭದ್ರಾ ಡ್ಯಾಂ ಇದೆ. ಇಲ್ಲಿ ಮೀನುಗಾರರ ಸಂಖ್ಯೆ ಹೆಚ್ಚಿದೆ. ಸ್ವಂತ ಕಚೇರಿ ಇದ್ದಲ್ಲಿ ಕಚೇರಿ ಕಾರ್ಯಗಳಿಗೆ ಅನುಕೂಲವಾಗಲಿದೆ. ಜಿಲ್ಲಾಡಳಿತ ಜಾಗ ನೀಡಿದಲ್ಲಿ ಕೂಡಲೇ ಹೊಸ ಕಚೇರಿ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ: Areca Nut Price: ದರ ಏರಿಳಿಕೆ; ಅಡಿಕೆ ಮಾರುಕಟ್ಟೆಯಲ್ಲೂ ಶುರುವಾಗಿದೆ ಷೇರುಪೇಟೆಯಂತೆ ಗೂಳಿ ಕಾಳಗ, ಕರಡಿ ಕುಣಿತ!

ಸಭೆಯಲ್ಲಿ ಶಾಸಕ ಎಚ್.ಆರ್. ಗವಿಯಪ್ಪ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌, ಮೀನುಗಾರಿಕೆ ಇಲಾಖೆಯ ನಿರ್ದೇಶಕ ದಿನೇಶ ಕಳ್ಳೇರ, ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಷಡಕ್ಷರಿ, ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಬಳ್ಳಾರಿಯ ಶಿವಣ್ಣ, ಸಿಂಧನೂರಿನ ಮಲ್ಲೇಶಿ, ರಾಯಚೂರಿನ ಬಸವನಗೌಡ, ಕೊಪ್ಪಳದ ಶ್ರೀನಿವಾಸ ಕುಲಕರ್ಣಿ, ಹಗರಿಬೊಮ್ಮನಹಳ್ಳಿಯ ರಿಯಾಜ್ ಅಹಮದ್, ಮುನಿರಾಬಾದ್‌ನ ಕಣ್ಣಿ ಭಾಗ್ಯ ಸೇರಿದಂತೆ ಇಲಾಖೆಯ ವಿವಿಧ ಜಿಲ್ಲೆಗಳ ಹಿರಿಯ ಸಹಾಯಕ ನಿರ್ದೇಶಕರು, ಸಹಾಯಕ ನಿರ್ದೇಶಕರು ಪಾಲ್ಗೊಂಡಿದ್ದರು.

Exit mobile version