ಹೊಸಪೇಟೆ: ಹಂಪಿಯ (Hampi) ಸುತ್ತಮುತ್ತ ಈಗಾಗಲೇ ಹಲವು ಶಾಸನಗಳು ದೊರೆತು ಪ್ರಕಟವಾಗಿದ್ದರೆ, ಇನ್ನಷ್ಟು ಶಾಸನಗಳು ಬೆಳಕಿಗೆ ಬರುತ್ತಲೇ ಇವೆ. ವಿಜಯನಗರ ತಿರುಗಾಟ ತಂಡವು ‘ವಿರೂಪಾಕ್ಷ ದೇವರ ಪುರ’ ಎಂಬ ಹೆಸರಿನ ಶಾಸನವೊಂದನ್ನು ಪತ್ತೆ (Vijayanagara News) ಹಚ್ಚಿದೆ.
ಹಂಪಿ ಸಮೀಪದ ನಾಗೇನಹಳ್ಳಿಯ ಧರ್ಮರಗುಡ್ಡದ ಬಳಿಯ ಉತ್ತರ ದಿಕ್ಕಿನ ಹೊಲಹೊಂದರಲ್ಲಿರುವ ಕರಿಯಮ್ಮ ದೇವಾಲಯದ ಕಂಬದಲ್ಲಿನ ಶಾಸನ ಇದುವರೆಗೆ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಶಾಸನದ ಮೇಲ್ಬಾಗದಲ್ಲಿ ಸೂರ್ಯ, ಚಂದ್ರರನ್ನು ಕೆತ್ತಲಾಗಿದೆ. ‘ಶ್ರೀ ವಿರೂಪಾಕ್ಷ ದೇವರಪುರ’ ಎಂಬ ಮೂರು ಸಾಲುಗಳು ಬಿಟ್ಟರೆ ಬೇರೆ ಏನೂ ಉಲ್ಲೇಖವಾಗಿಲ್ಲ.
ಇದನ್ನೂ ಓದಿ: Ballari News: ಯುವ ಜನತೆ ಮಾದಕ ವಸ್ತುಗಳಿಂದ ದೂರವಿರಬೇಕು: ಬಿ.ಎಸ್.ಲೋಕೇಶ್ ಕುಮಾರ್
ಈ ಶಾಸನದಿಂದ ಆ ಭಾಗವು ‘ಶ್ರೀ ವಿರೂಪಾಕ್ಷ ದೇವರಪುರ’ ಎಂದು ಕರೆಯಲ್ಪಡುತ್ತಿತ್ತು ಎಂಬುದು ತಿಳಿದುಬರುತ್ತದೆ. ಸಂಗಮ, ಸಾಳಮ ವಂಶದ ಕಾಲಾವಧಿಯಲ್ಲಿ ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿ ‘ಶ್ರೀ ವಿರೂಪಾಕ್ಷ’ ಎಂಬ ಅಕ್ಷರ ನಮೂದಿತವಾಗಿತ್ತು. ಹರಿಹರ ಕವಿಯು ‘ಹಂಪಿಯನ್ನು ಆಳಿದವ ವಿರೂಪಾಕ್ಷ’ ಎಂದು ಕೃತಿಗಳಲ್ಲಿ ಕೂಡಾ ಉಲ್ಲೇಖಿಸಿದ್ದಾನೆ. ಅದನ್ನ ಬಿಟ್ಟರೆ ವಿರೂಪಾಕ್ಷ ಎಂಬ ಹೆಸರಿನ ಉಲ್ಲೇಖಗಳು ಸಿಕ್ಕಿದ್ದು ತೀರಾ ವಿರಳ. ಹೀಗಾಗಿ ವಿಜಯನಗರ ಸಾಮ್ರಾಜ್ಯದ ನೆಲೆಯಲ್ಲಿ ಕರಿಯಮ್ಮ ದೇವಾಲಯ ಇದೆ. ಈ ದೇವಾಲಯ ಸಂಗಮ ವಂಶ ಅಥವಾ ಸಾಳವ ವಂಶದ ಆಡಳಿತಾವಧಿಯಲ್ಲಿ ನಿರ್ಮಾಣ ಆಗಿರಬೇಕು ಅಂತ ಅಂದಾಜಿಸಲಾಗಿದೆ. ಕರಿಯಮ್ಮ ದೇಗುಲ ಮೊದಲಿಗೆ ಶಿವ ದೇವಾಲಯವಾಗಿರಬೇಕು’ ಎಂದು ಸಂಶೋಧನಾ ತಂಡದ ಸದಸ್ಯ ಪ್ರೊ. ಗೋವಿಂದ್ ಮಾಹಿತಿ ನೀಡಿದ್ದಾರೆ.
ಅಪರೂಪದ, ಐತಿಹಾಸಿಕ ಎರಡು ವೀರಗಲ್ಲುಗಳು ಪತ್ತೆ
ಇಂದಿನ ಹೊಸಪೇಟೆ ತಾಲೂಕಿನಿಂದ ಕೇವಲ ಮೂರು ಕಿಲೋಮೀಟರ್ ದೂರ, ಅಂದಿನ ವಿಜಯನಗರ ಸಾಮ್ರಾಜ್ಯದ ಅರಸರ ಆಳ್ವಿಕೆ ಒಳಪಟ್ಟಿದ್ದ ಗ್ರಾಮ ನಾಗೇನಹಳ್ಳಿ ಸಮೀಪದ ಬಸವನದುರ್ಗಾದಲ್ಲಿ (ಗುಡಿ ಓಬಳಾಪುರ) ಎರಡು ವೀರಗಲ್ಲುಗಳನ್ನ ಸಂಶೋಧನಾ ತಿರುಗಾಟ ತಂಡ ಪತ್ತೆ ಹಚ್ಚಿದೆ.
ಇದನ್ನೂ ಓದಿ: Kalaburagi News: ಕಲಬುರಗಿ- ಬೈಯ್ಯಪ್ಪನಹಳ್ಳಿ “ವಂದೇ ಭಾರತ್” ವೇಳಾಪಟ್ಟಿ ಹೀಗಿದೆ
ಊರಿಗೆ ನುಗ್ಗಿದ ಕಳ್ಳರು ಕಳ್ಳತನ ಮಾಡಲು ಬಂದಾಗ ಅಲ್ಲಿನ ದೇವರ ಶಾಪದಿಂದಾಗಿ ಕಳ್ಳರೇ ಕಲ್ಲಾಗಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಹಿಂದಿನಿಂದ ನಂಬಿಕೊಡು ಬಂದಿದ್ದಾರೆ. ಒಂದು ವೀರಗಲ್ಲಿನ ಮೇಲು ಭಾಗದಲ್ಲಿ ಮೂರು ಸಾಲಿನ ಶಾಸನ ಲಿಪಿಯ ಅಕ್ಷರಗಳಿದ್ದು, ಅವು ಸವೆದು ಹೋಗಿವೆ. ಗ್ರಾನೈಟ್ ಕಲ್ಲಿನಲ್ಲಿ ಕೆತ್ತಲಾಗಿರುವ ಈ ವೀರಗಲ್ಲು ತುಂಬಾ ವಿಶೇಷ ಹಾಗೂ ವಿಭಿನ್ನವಾಗಿವೆ ಎಂದು ತಂಡದ ಸದಸ್ಯ ಪ್ರೊ. ತಿಪ್ಪೇಸ್ವಾಮಿ ಹೇಳಿದ್ದಾರೆ.
ಕೃಷಿಗಾಗಿ ಇಲ್ಲವೇ ಭೂಮಿಗಾಗಿ ಕಾದಾಟ ನಡೆದಿರಬೇಕೆಂದೂ, ಆ ಹೋರಾಟದಲ್ಲಿ ಒಬ್ಬರು ವೀರ ಮರಣ ಹೊಂದಿರುವ ಕಾರಣದಿಂದ ವೀರಗಲ್ಲು ಕೆತ್ತಿರಬೇಕೆಂದೂ ಚಿತ್ರಗಳಿಂದ ತಿಳಿಯಬಹುದಾಗಿದೆ.
ಮೊದಲ ವೀರಗಲ್ಲಿನಲ್ಲಿ ನೇಗಿಲನ್ನು ಮೇಲಕ್ಕೆ ಎತ್ತಿ ಹಿಡಿದ ವ್ಯಕ್ತಿಯ ಚಿತ್ರವಿದೆ. ಎರಡನೇ ಹಂತದಲ್ಲಿ ಇಬ್ಬರು ವೀರರು ಕಾದಾಟ ಮಾಡುವ ಚಿತ್ರವಿದ್ದು, ಒಬ್ಬ ಎಡಗೈನಲ್ಲಿ ಗುರಾಣಿಯನ್ನು ಹಿಡಿದರೆ, ಮತ್ತೊಬ್ಬ ಬಲಗಡೆ ಕೈಯಲ್ಲಿ ಗುರಾಣಿ ಹಿಡಿದಿರುವಂತೆ ಕಾಣಸಿಗುತ್ತದೆ. ಮೂರನೆಯ ಹಂತದಲ್ಲಿ ಕಾದಾಟ ಮಾಡಿ ಮರಣವನ್ನ ಅಪ್ಪಿರಬೇಕು. ಪದ್ಮಾಸನದಲ್ಲಿ ಕುಳಿತ ಭಂಗಿಯಲ್ಲಿರುವ ವೀರನನ್ನು ಇಬ್ಬರು ದೇವದೂತರು ಹಿಡಿದುಕೊಂಡು ಕರೆದೊಯ್ಯುವ ಚಿತ್ರವನ್ನು ತುಂಬಾ ಸುಂದರವಾಗಿ ಕೆತ್ತಿದ್ದಾರೆ.
ಇದರ ಪಕ್ಕದ ಇನ್ನೊಂದು ವೀರಗಲ್ಲಿನ ಮೊದಲ ಹಂತದಲ್ಲಿ ಕಾದಾಟ ಮಾಡುವ ಇಬ್ಬರು ವೀರರು, ಅವರ ಪಕ್ಕದಲ್ಲಿ ನೇಗಿಲು ಚಿಹ್ನೆಯ ಚಿತ್ರವಿದೆ. ಎರಡನೇ ಹಂತದಲ್ಲಿ ಇಬ್ಬರು ಸಖಿಯರು ಚಾಮರ ಬೀಸುತ್ತಿರುವ ಮತ್ತು ವೀರನನ್ನು ಕರೆದೊಯ್ಯುವ ಚಿತ್ರವನ್ನು ತುಂಬಾ ಸುಂದರವಾಗಿ ಕೆತ್ತಲಾಗಿದೆ. ಇಲ್ಲೂ ಲಿಪಿ ಇದ್ದುದು ಅಳಿಸಿ ಹೋಗಿದೆ. ಭೂಮಿಗಾಗಿ ಇಲ್ಲವೇ ಕೃಷಿಗಾಗಿ ಕಾದಾಟ ಮಾಡಿದವರ ಚಿತ್ರಗಳು ಇವುಗಳಾಗಿರಬೇಕು ಎಂದು ಅಂದಾಜಿಸಲಾಗಿದೆ.
ರಾಜ ಮಹಾರಾಜರ ಆಳ್ವಿಕೆಯಲ್ಲಿ ಆಯಾ ಸ್ಥಳಗಳನ್ನು ಕೇಂದ್ರಸ್ಥಾನ ಆಗಿಸಿಕೊಂಡು ರಾಜ್ಯಭಾರ ಮಾಡಲಾಗುತ್ತಿತ್ತು. ಪ್ರತಿಯೊಬ್ಬ ರಾಜ ಸಾಮ್ರಾಜ್ಯ ವಿಸ್ತರಣೆ ಮಾಡುವುದರೊಂದಿಗೆ ಪುರ, ಊರು, ಹಳ್ಳಿ, ನಗರಗಳ ಹೆಸರಲ್ಲಿ ಆಡಳಿತ ನಡೆಸುತ್ತಿದ್ದ. ಹಂಪಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾಜನ ಅಧೀನವಾಗಿ ಕೆಲವು ಊರುಗಳನ್ನು ದಾನ ದತ್ತಿಗಳನ್ನು ನೀಡಿದ ಬಗ್ಗೆ ಆಯಾ ಊರುಗಳಲ್ಲಿ ದೊರಕಿದ ಶಾಸನಗಳಿಂದ ತಿಳಿದುಬಂದಿದೆ. ಈ ಭಾಗದ ಹಿಂದಿನ ನಾಗಲಾಪುರವು (ಈಗ ನಾಗೇನಹಳ್ಳಿ) ಅಗ್ರಹಾರವಾಗಿತ್ತು. ವಿಜಯನಗರ ಸಾಮ್ರಾಜ್ಯದಲ್ಲಿ ಅಚ್ಯುತಾಪುರ, ವಿರುಪಾಪುರ, ಕೃಷ್ಣಾಪುರ, ವಲ್ಲಭಾಪುರ, ಚಿನ್ನಾಪುರ (ಚಿತ್ತವಾಡಿಗಿ) ಕಮಲಾಪುರ, ಆಪಿನಾಯಕನ ಪುರ (ಪಾಪಿನಾಯಕನ ಹಳ್ಳಿ) ಇವು ಪುರಗಳಾದರೆ, ಪಾಪಿನಾಯಕನಹಳ್ಳಿ, ನಾಗೇನಹಳ್ಳಿ, ಮರಿಯಮ್ಮನಹಳ್ಳಿ ಹಳ್ಳಿಗಳೆನಿಸಿಕೊಂಡಿದ್ದವು. ವಿನಾಯಕ ನಗರ (ಸಂಕ್ಲಾಪುರ), ವಿಜಯನಗರ (ಹಂಪಿ), ರಾಮನಗರ ನಗರಗಳೆಂದು ಕರೆಸಿಕೊಂಡಿದ್ದವು. ವರದಾರಜಮ್ಮನ ಪಟ್ಟಣ (ಹೊಸಪೇಟೆ) ಎಂಬ ಪಟ್ಟಣವೂ ಇತ್ತು.
ಇದನ್ನೂ ಓದಿ: Ballari News: ರಸ್ತೆಗೆ ಹೇಮಾದ್ರಿ ಭಟ್ ಹೆಸರಿಡಲು ನಾರಾ ಸೂರ್ಯನಾರಾಯಣ ರೆಡ್ಡಿ ಒತ್ತಾಯ
ಸಂಶೋಧನಾ ತಂಡದಲ್ಲಿ ಸದಸ್ಯರಾದ ಗೋವರ್ಧನ, ಕೃಷ್ಣೆಗೌಡ, ರಾಮಾಂಜಿನೇಯ, ರವಿಕುಮಾರ, ಸ್ಥಳೀಯರಾದ ಚನ್ನಪ್ಪ, ಅಧ್ಯಾಪಕ ಪ್ರಭು ಹಾಗೂ ವಕೀಲ ಷಣ್ಮುಖ ಇದ್ದರು.