ಹೊಸಪೇಟೆ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ನಗರಸಭೆ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ವಿಶೇಷಚೇತನರ ಯಂತ್ರಚಾಲಿತ ತ್ರಿಚಕ್ರ ವಾಹನಗಳೊಂದಿಗೆ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ (Vijayanagara News) ಜರುಗಿತು.
ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಹಸಿರು ನಿಶಾನೆ ತೋರಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದನ್ನೂ ಓದಿ: Youngest Billionaire: 19 ವರ್ಷದ ವಿದ್ಯಾರ್ಥಿನಿ ವಿಶ್ವದ ಕಿರಿಯ ಬಿಲಿಯನೇರ್ ಆಗಿದ್ದು ಹೇಗೆ? ಇಲ್ಲಿದೆ ಮನಿ ಸೀಕ್ರೆಟ್
ಬಳಿಕ ಮಾತನಾಡಿದ ಅವರು, ವಿಶೇಷಚೇತನರು ನಡೆಸಿದ ಜಾಥಾವು ಪರಿಣಾಮಕಾರಿಯಾಗಿದೆ. ನಗರದ ನಿವಾಸಿಗಳು ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡುವಂತೆ ಪ್ರೇರಣೆ ನೀಡುವಲ್ಲಿ ಸಹಕಾರಿಯಾಗಿದೆ. ಈ ಬಾರಿ ಹೊಸಪೇಟೆ ನಗರ ವ್ಯಾಪ್ತಿಯಲ್ಲಿ ಶೇ.80 ರಿಂದ ಶೇ.90 ರಷ್ಟು ಮತದಾನದ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.
ಸುಮಾರು 100ಕ್ಕು ಹೆಚ್ಚು ವಿಶೇಷಚೇತನರು ತ್ರಿಚಕ್ರ ವಾಹನ ಮತ್ತು ದ್ವಿಚಕ್ರ ವಾಹನಗಳ ಮೂಲಕ ಜಾಥಾದಲ್ಲಿ ಭಾಗವಹಿಸಿ, ನಗರದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸಿದರು.
ಇದನ್ನೂ ಓದಿ: IPL 2024 : ಐಪಿಎಲ್ ಪಂದ್ಯಕ್ಕೆ ನೀರು ಎಲ್ಲಿಂದ? ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನೋಟಿಸ್
ಈ ಸಂದರ್ಭದಲ್ಲಿ ನಗರಸಭೆ ಆಯುಕ್ತ ಚಂದ್ರಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅವಿನಾಶಲಿಂಗ ಗೋತಿಖಿಂಡಿ, ಯೋಜನಾ ಅಂಕ ಮೌಲ್ಯ ಮಾಪನಾಧಿಕಾರಿ ಪತ್ರಿಬಸಪ್ಪ ಎನ್.ಕೆ., ಜಿಲ್ಲಾ ಪಂಚಾಯಿತಿ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಅಂಬುಜಾ, ಸಾಧ್ಯ ಸಂಸ್ಥೆಯ ಮುಖ್ಯಸ್ಥೆ ಆರತಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.