ಹೊಸಪೇಟೆ: ಮದ್ಯಪಾನ, ಮಾದಕ ವಸ್ತು, ತಂಬಾಕು ವಸ್ತುಗಳ ಸೇವನೆಯು ಆರೋಗ್ಯಕ್ಕೆ ಹಾನಿಕರವಾಗಿದ್ದು, ಇದನ್ನರಿತು ವಿದ್ಯಾರ್ಥಿ ಯುವಜನರು ಸೇರಿದಂತೆ ಪ್ರತಿಯೊಬ್ಬರು ವ್ಯಸನಮುಕ್ತರಾಗಿ ಮುನ್ನುಗ್ಗಬೇಕು ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ಜಿ. (Vijayanagara News) ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಆರೋಗ್ಯ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ವಿಜಯನಗರ ಜಿಲ್ಲೆ ಹಾಗೂ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಮತ್ತು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಸಹಯೋಗದಲ್ಲಿ ಶ್ರೀ ಮ.ನಿ.ಪ್ರ. ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆಯ ಅಂಗವಾಗಿ ಗುರುವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಆಡಿಟೋರಿಯಂ ಸಭಾಂಗಣದಲ್ಲಿ ನಡೆದ ವ್ಯಸನ ಮುಕ್ತ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಜ್ಞಾನದ ಕಾರಣದಿಂದಲು ಸಹ ಬಹುತೇಕರು ಒಂದಿಲ್ಲೊಂದು ದುಶ್ಚಟಕ್ಕೆ ಒಳಗಾಗಿರುತ್ತಾರೆ. ಜೀವಕ್ಕೆ ಹಾನಿ ಎಂದು ಗೊತ್ತಿದ್ದು ಬಹುತೇಕರು ಕೆಟ್ಟ ಚಟಗಳಿಗೆ ಬಲಿಯಾಗುತ್ತಾರೆ. ಇದರಿಂದ ವ್ಯಕ್ತಿಯೊಬ್ಬರಷ್ಟೇ ಅಲ್ಲ, ಇಡೀ ಕುಟುಂಬದ ಸ್ವಾಸ್ತ್ಯ ಹಾಳಾಗುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Pralhad Joshi: ಕೇಂದ್ರ ಸರ್ಕಾರದಿಂದ 80 ಕೋಟಿ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯ; ಪ್ರಲ್ಹಾದ್ ಜೋಶಿ
ಸಾರ್ವಜನಿಕರ ಆರೋಗ್ಯವು ಸಹ ದೇಶದ ಅಭಿವೃದ್ಧಿಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ವಯಸ್ಸಿನ ಮಿತಿಯಿಲ್ಲದೇ ದುಶ್ಚಟಗಳಿಗೆ ದಾಸರಾಗುವುದನ್ನು ತಡೆಯುವ ಕೆಲಸವು ನಿರಂತರವಾಗಿ ನಡೆಯಬೇಕು ಎಂದು ತಿಳಿಸಿದರು.
ಹಿಟ್ನಾಳ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಬಸವರಾಜ ಟಿ.ಎಚ್. ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಹೊಸಮನಿ ಪ್ರಾಸ್ತಾವಿಕ ಮಾತನಾಡಿ, ಡಾ.ಮಹಾಂತ ಶಿವಯೋಗಿಗಳು ವ್ಯಸನಮುಕ್ತ ಆಂದೋಲನದ ಹರಿಕಾರರಾಗಿದ್ದಾರೆ. ಶ್ರೀಗಳ ಜನ್ಮದಿನದ ನಿಮಿತ್ತ ರಾಜ್ಯ ಸರ್ಕಾರವು ಪ್ರತಿ ವರ್ಷ ಆಗಸ್ಟ್ 1 ಅನ್ನು ವ್ಯಸನ ಮುಕ್ತ ದಿನವನ್ನಾಗಿ ಆಚರಿಸುತ್ತಿದೆ. ವಿದ್ಯಾರ್ಥಿ, ಯುವಜನರು ದುಶ್ಚಟಗಳಿಂದ ದೂರವಾಗಿ ಆರೋಗ್ಯಕರ ಜೀವನ ನಡೆಸುವ ಸಂಕಲ್ಪ ಮಾಡಿ, ಶ್ರೀಗಳು ಹೇಳಿದ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವಿಸಲಾಯಿತು.
ಶಾಲಾ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಮಂಜುನಾಥ, ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಆಯುಕ್ತ ವಿವೇಕಾನಂದ ಪಿ., ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಲೀಂ ಪಾಶಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಮಚಂದ್ರಪ್ಪ ಕೆ.ಬಿ., ಜಿಲ್ಲಾ ವಿಕಲಚೇತನರ ಕಲ್ಯಾಣ ಇಲಾಖೆಯ ಅಧಿಕಾರಿ ಅವಿನಾಶ ಗೋಟಖಿಂಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಮುತ್ತು ದೊಡ್ಡಮನಿ ಹಾಗೂ ಇತರರು ಉಪಸ್ಥಿತರಿದ್ದರು.