ಕೊಟ್ಟೂರು: ಪಟ್ಟಣದ ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ ಶುಕ್ರವಾರ ದ್ವಿತೀಯ ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ (English) ವಿಭಾಗದಿಂದ ಪರೀಕ್ಷಾ ದಿಕ್ಸೂಚಿ ಒಂದು ದಿನದ ಕಾರ್ಯಾಗಾರವನ್ನು (Workshop) ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಸಿದ್ಧರಾಮ ಕಲ್ಮಠ ಉದ್ಘಾಟಿಸಿ ಮಾತನಾಡಿ, ಇಂಗ್ಲಿಷ್ ಎನ್ನುವುದು ಕಬ್ಬಿಣದ ಕಡಲೆಯಲ್ಲ, ಅರ್ಥೈಸಿಕೊಂಡರೆ ಬಹಳ ಸುಲಭದ ವಿಷಯ, ಎಲ್ಲಾ ವಿದ್ಯಾರ್ಥಿಗಳು ಈ ಕಾರ್ಯಾಗಾರವನ್ನು ಸದುಪಯೋಗಪಡಿಸಿಕೊಂಡು ಹೆಚ್ಚಿನ ಅಂಕಗಳಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಎಂ. ರವಿಕುಮಾರ್ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ ಇಂಗ್ಲೀಷನ್ನು ಸುಲಭಗೊಳಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಈ ಕಾರ್ಯಾಗಾರದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಂಗ್ಲ ಭಾಷೆಗೆ ಸಂಬಂಧಪಟ್ಟಂತೆ ವಿಶೇಷ ಉಪನ್ಯಾಸವನ್ನು ನೀಡಲು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಹೊಸಪೇಟೆಯ ವಿಜಯನಗರ ಪದವಿಪೂರ್ವ ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕ ಶರಣಬಸವ ಉಪನ್ಯಾಸ ನೀಡಿ, ಮಾತನಾಡಿದರು.
ಈ ಸಂದರ್ಭದಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಶಾಂತ್ ಕುಮಾರ್ ಎಂ.ಎಚ್., ಆಡಳಿತ ಮಂಡಳಿಯ ಸದಸ್ಯರಾದ ಅಡಿಕೆ ಮಂಜುನಾಥಯ್ಯ ಕೆ.ಬಿ. ಮಲ್ಲಿಕಾರ್ಜುನ್, ಡಿ.ಎಸ್. ಶಿವಮೂರ್ತಿ ಹಾಗೂ ಹಿರಿಯ ಉಪನ್ಯಾಸಕರಾದ ಪ್ರೊ. ಎಸ್ ಕೃಷ್ಣಪ್ಪ, ಬಿ.ಎಸ್. ಪಾಟೀಲ್, ಪೃಥ್ವಿರಾಜ್, ಬಸವರಾಜ್, ಚೇತನ್ ಉಪಸ್ಥಿತರಿದ್ದರು.
ಇದನ್ನೂ ಓದಿ: New Year 2024: ಎಲ್ಲೆಂದರಲ್ಲಿ ವೆಹಿಕಲ್ ಪಾರ್ಕಿಂಗ್ ಮಾಡಿದ್ರೆ ಹುಷಾರ್; ನ್ಯೂ ಇಯರ್ ಸೆಲೆಬ್ರೆಷನ್‌ಗೆ ಟೋಯಿಂಗ್ ಶಾಕ್!
ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಬಿ. ಸುದರ್ಶನ್, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು. ವಿಜಯಲಕ್ಷ್ಮಿ ಸಜ್ಜನ್ ಪ್ರಾರ್ಥಿಸಿದರು. ಕೆ.ಎಂ. ಪ್ರಭಾಕರ್ ಸ್ವಾಗತಿಸಿದರು. ರೇವಣ್ಣ ನಿರೂಪಿಸಿದರು.