Site icon Vistara News

Vijayanagara News: ಹೊಸಪೇಟೆಯಲ್ಲಿ ಡೆಂಗ್ಯೂ ಜಾಗೃತಿ ರಥಕ್ಕೆ ಜಿ.ಪಂ ಸಿಇಒ ಸದಾಶಿವ ಪ್ರಭು ಚಾಲನೆ

zp CEO Sadashiva Prabhu Drives Dengue Awareness Chariot in hospete

ಹೊಸಪೇಟೆ: ಜಿಲ್ಲೆಯಲ್ಲಿ ಡೆಂಗ್ಯೂ (Dengue) ಪ್ರಕರಣಗಳನ್ನು ತಡೆಗಟ್ಟಲು, ಸಾರ್ವಜನಿಕರಿಗೆ ಈ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಡೆಂಗ್ಯೂ ಜಾಗೃತಿ (Awareness) ರಥಕ್ಕೆ ನಗರದ ತಾಯಿ ಮತ್ತು ಮಕ್ಕಳ (ಎಂಸಿಎಚ್) ಆಸ್ಪತ್ರೆ ಆವರಣದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ. ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡೆಂಗ್ಯೂ ಜಾಗೃತಿ ಜಾಥಾ ರಥಕ್ಕೆ ಚಾಲನೆ ನೀಡಿ, ಬಳಿಕ ಮಾತನಾಡಿ, ಡೆಂಗ್ಯೂ ಯಾವ ರೀತಿ ಹರಡುತ್ತದೆ, ಎಲ್ಲಿಂದ ಹರಡುತ್ತದೆ, ಹೇಗೆ ಹರಡುತ್ತದೆ ಎಂಬುದರ ಮಾಹಿತಿ ಇಲ್ಲದೆ ಇರುವ ಕಾರಣ ಸಾರ್ವಜನಿಕರಿಗೆ ಡೆಂಗ್ಯೂ ಮುನ್ನೆಚ್ಚರಿಕೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

ಈ ಜಾಗೃತಿ ಕಾರ್ಯಕ್ರಮದ ಮೂಲಕ ಹೆಚ್ಚು ಜನರಿಗೆ ತಲುಪಬೇಕಾಗುತ್ತದೆ. ಏಕೆಂದರೆ ಕಳೆದ ವರ್ಷಕ್ಕಿಂತ ಈ ವರ್ಷ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗಿದ್ದು, ಸಾರ್ವಜನಿಕರು ನಿರ್ಲಕ್ಷ್ಯ ವಹಿಸದೇ ಈ ಲಕ್ಷಣಗಳು ಕಂಡು ಬಂದ ತಕ್ಷಣವೇ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Mysore dasara : ದಸರಾ ಮಹೋತ್ಸವದ ಉದ್ಘಾಟನೆಗೆ ಕ್ಷಣಗಣನೆ; ನಾಳೆ ಹಂಸಲೇಖರಿಂದ ಸಿಗಲಿದೆ ಚಾಲನೆ

ನಗರದ ವಾರ್ಡ್‌ಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಒಟ್ಟು 134 ತಂಡಗಳಲ್ಲಿ 400 ಜನರು ಭಾಗಿಯಾಗುತ್ತಿದ್ದಾರೆ. ಹೆಚ್ಚಾಗಿ ಡೆಂಗ್ಯೂ ಪ್ರಕರಣಗಳು ಕಂಡು ಬಂದ ಅಂತಹ ಜಾಗದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಂಕರ್ ನಾಯ್ಕ ಮಾತನಾಡಿ, ಡೆಂಗ್ಯೂ ರೋಗ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಜನಜಾಗೃತಿಯನ್ನು ಡೆಂಗ್ಯೂ ರಥ ಮೂಡಿಸಲಿದೆ. ನಗರದ ಎಲ್ಲ ವಾರ್ಡ್‌ಗಳಲ್ಲಿ ಈ ರಥ ಸಂಚರಿಸಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: Post Office: ಬಾಡಿಗೆ ಹಣ ಕೊಟ್ಟಿಲ್ಲಂತ ಪೋಸ್ಟ್‌ ಆಫೀಸ್‌ಗೆ ಬೀಗ ಜಡಿದ ಮಾಲೀಕ!

ಈ ಸಂದರ್ಭದಲ್ಲಿ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯಾಧಿಕಾರಿಗಳು, ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು, ನರ್ಸಿಂಗ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Exit mobile version