Site icon Vistara News

Vijayanagara News: ಹಂಪಿ ಕನ್ನಡ ವಿವಿ ನುಡಿಹಬ್ಬ; ಮೂವರಿಗೆ ನಾಡೋಜ ಗೌರವ ಪ್ರದಾನ

32nd Nudihabba Convocation Ceremony of Hampi Kannada University, Nadoja Gourava padavi award

ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯದ ಆರ್ಥಿಕ ಸ್ಥಿತಿಗತಿಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿ, ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರು ಹಾಗೂ ವಿವಿಯ ಸಮಕುಲಾಧಿಪತಿ ಡಾ. ಎಂ.ಸಿ.ಸುಧಾಕರ್ ತಿಳಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ 32ನೇ ನುಡಿಹಬ್ಬ ಘಟಿಕೋತ್ಸವ ಸಮಾರಂಭದಲ್ಲಿ ನಾಡೋಜ ಗೌರವ ಪದವಿ ಪ್ರದಾನ ಮಾಡಿದ ಬಳಿಕ ಅವರು ಮಾತನಾಡಿದರು.

ವಿವಿಯ ಕುಲಪತಿ ಡಾ. ಡಿ. ವಿ. ಪರಮಶಿವಮೂರ್ತಿ ಅವರು ಹಂಪಿ ಕನ್ನಡ ವಿವಿಯ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ನನ್ನೊಂದಿಗೆ ಚರ್ಚಿಸಿದ್ದಾರೆ. ಈ ವಿಷಯವನ್ನು ಮುಖ್ಯಮಂತ್ರಿಗಳ ಜತೆಗೆ ಚರ್ಚಿಸುವೆ. ಮುಖ್ಯಮಂತ್ರಿಗಳು ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ಕನ್ನಡ ವಿವಿಗೆ ಆರ್ಥಿಕ ಚೈತನ್ಯ ನೀಡಲಿದ್ದಾರೆ ಎಂದು ತಿಳಿಸಿದರು.

ಕನ್ನಡ ವಿಶ್ವವಿದ್ಯಾಲಯವು ನಾಡು-ನುಡಿ, ಪರಂಪರೆಯ ಬಗ್ಗೆ ಶಿಸ್ತು ಬದ್ಧವಾಗಿ ಅಧ್ಯಯನ ಮಾಡುತ್ತ ಹೆಸರಾಗಿದೆ. ಸಂಶೋಧನಾ ಕ್ಷೇತ್ರಕ್ಕೆ ಕನ್ನಡ ವಿವಿಯ ಕೊಡುಗೆ ಅನನ್ಯವಾಗಿದೆ ಎಂದರು.

ಹಂಪಿ ಕನ್ನಡ ವಿವಿಯ ಕುಲಪತಿ ಡಾ. ಡಿ. ವಿ. ಪರಮಶಿವಮೂರ್ತಿ ಮಾತನಾಡಿ, ಸಂಶೋಧನೆಗೆ ಹೆಸರಾದ ಹಂಪಿಯ ಕನ್ನಡ ವಿವಿಯು ಮಹತ್ವದ ವಿವಿಧ ಯೋಜನೆ ರೂಪಿಸಿಕೊಂಡು ಮುನ್ನಡೆಯುತ್ತಿದೆ. ನಾನಾ ಕಾರ್ಯಕ್ರಮಗಳ ಮೂಲಕ ವಿವಿಯು ಕನ್ನಡ ಅರಿವನ್ನು ವಿಸ್ತರಿಸುವ ಪ್ರಯತ್ನ ಮಾಡುತ್ತಿದೆ ಎಂದರು.

ಕನ್ನಡವು ಅನ್ನದ ಭಾಷೆಯಾಗಬೇಕು ಎಂಬ ಕೂಗು ಮತ್ತು ಒತ್ತಾಯ ಮತ್ತೆ ಮತ್ತೆ ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ವೈಜ್ಞಾನಿಕ ಹಾಗೂ ತಾಂತ್ರಿಕ ವಿಷಯಗಳ ಪಠ್ಯಗಳು ಕನ್ನಡ ಭಾಷೆಯಲ್ಲಿ ಪ್ರಕಟವಾಗಬೇಕಿದೆ ಎಂದು ತಿಳಿಸಿದರು.

ನಾಡೋಜ ಗೌರವ ಪದವಿ ಪ್ರದಾನ

ಹಂಪಿ ಕನ್ನಡ ವಿವಿಯ 32ನೇ ನುಡಿಹಬ್ಬ ಘಟಿಕೋತ್ಸವ ಸಮಾರಂಭದಲ್ಲಿ ಭಾಲ್ಕಿ ಹಿರೇಮಠದ ಡಾ. ಬಸವಲಿಂಗ ಪಟ್ಟದೇವರು, ಆಂಧ್ರಪ್ರದೇಶದ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಡಾ. ತೇಜಸ್ವಿ ವಿ ಕಟ್ಟಿಮನಿ, ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಬೆಂಗಳೂರಿನ ಡಾ. ಎಸ್.ಸಿ.ಶರ್ಮಾ ಅವರಿಗೆ ನಾಡೋಜ ಗೌರವ ಪ್ರದಾನ ಮಾಡಲಾಯಿತು. ಉನ್ನತ ಶಿಕ್ಷಣ ಸಚಿವರು ಮತ್ತು ಹಂಪಿ ಕನ್ನಡ ವಿವಿಯ ಸಮಕುಲಾಧಿಪತಿ ಡಾ. ಎಂ.ಸಿ.ಸುಧಾಕರ್ ಅವರು ನಾಡೋಜ ಗೌರವ ಪದವಿ ಪ್ರದಾನ ಮಾಡಿದರು.

275 ಸಂಶೋಧನಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರದಾನ

ಘಟಿಕೋತ್ಸವದಲ್ಲಿ ಈ ಬಾರಿ ಒಬ್ಬರಿಗೆ ಡಿ.ಲಿಟ್ ಹಾಗೂ ದಾಖಲೆಯ 275 ಜನರಿಗೆ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಯಿತು. ಉನ್ನತ ಶಿಕ್ಷಣ ಸಚಿವರು ಹಾಗೂ ಹಂಪಿ ಕನ್ನಡ ವಿವಿಯ ಸಮಕುಲಾಧಿಪತಿ ಡಾ. ಎಂ.ಸಿ.ಸುಧಾಕರ್, ಸಂಶೋಧನಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.

ಲಲಿತ ಕಲೆಗಳ ನಿಕಾಯದ ಒಬ್ಬರಿಗೆ ಡಿ.ಲಿಟ್ ಪದವಿ ಹಾಗೂ ಭಾಷಾ ನಿಕಾಯ, ಸಮಾಜ ವಿಜ್ಞಾನಗಳ ನಿಕಾಯ ಮತ್ತು ಲಲಿತಕಲೆಗಳ ನಿಕಾಯ ಸೇರಿ ಒಟ್ಟು 275 ಸಂಶೋಧನಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಈ ವೇಳೆ ವಿವಿಯ ಕುಲಪತಿ ಡಾ. ಡಿ.ವಿ.ಪರಮ ಶಿವಮೂರ್ತಿ, ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ ಹಾಗೂ ನಾಡೋಜ ಪದವಿ ಪುರಸ್ಕೃತರು, ಡಾಕ್ಟರೇಟ್ ಪದವಿ ಪಡೆದ ಸಂಶೋಧನಾರ್ಥಿಗಳಿಗೆ ಅಭಿನಂದಿಸಿದರು.

Exit mobile version