ವಿಜಯನಗರ: ಜಿ-20 ಶೃಂಗಸಭೆಯ (G-20 Summit) ಈ ಬಾರಿಯ ಅಧ್ಯಕ್ಷೀಯ ರಾಷ್ಟ್ರ ಭಾರತವಾಗಿದ್ದು (India), ಅತಿ ಮುಖ್ಯವಾದ ಜಿ-20 ಶೃಂಗಸಭೆಯ ಮೂರನೇ ಪ್ರಮುಖ ಸಭೆ ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ (Hampi) ಜು.9 ರಿಂದ 16 ರವರೆಗೆ ನಡೆಯಲಿದೆ ಎಂದು ಜಿ-20 ಶೆರ್ಪಾದ ಮುಖ್ಯಸ್ಥ ಅಮಿತಾಬ್ ಕಾಂತ್ ತಿಳಿಸಿದರು.
ವಿಶ್ವವಿಖ್ಯಾತ ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ ನಡೆಯಲಿರುವ ಶೆರ್ಪಾ ಸಭೆಗೆ ಸಂಬಂಧಿಸಿದಂತೆ ಭಾನುವಾರ ಖಾಸಗಿ ಹೊಟೇಲ್‌ನಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಜತೆಗೆ ಕೈಗೊಂಡ ಸಿದ್ಧತಾ ಸಭೆಯ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಸಿದ್ಧತಾ ಸಭೆಗೂ ಮುನ್ನ ಭಾರತದ ಜಿ-20 ಉನ್ನತ ಮಟ್ಟದ ಅಧಿಕಾರಿಗಳ ತಂಡ ಬೆಳಿಗ್ಗೆ ವಿಶ್ವವಿಖ್ಯಾತ ಹಂಪಿಗೆ ತೆರಳಿ ಜಿ-20 ಸಭೆಯಲ್ಲಿ ಭಾಗವಹಿಸುವ ಪ್ರತಿನಿಧಿಗಳು ಭೇಟಿ ನೀಡಲಿರುವ ಸ್ಥಳಗಳ ಪರಿಶೀಲನೆ ಕೈಗೊಂಡು ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಜಾಗತಿಕ ಮಟ್ಟದ ಒಟ್ಟು ಜಿ-20 ಶೃಂಗಸಭೆಯ 20 ಸದಸ್ಯ ರಾಷ್ಟ್ರಗಳು, 9 ಆಹ್ವಾನಿತ ರಾಷ್ಟ್ರಗಳು ಸೇರಿದಂತೆ ಒಟ್ಟು 43 ರಾಷ್ಟ್ರಗಳು ಈ ಸಭೆಯಲ್ಲಿ ಭಾಗವಹಿಸಲಿವೆ.
ಇದನ್ನೂ ಓದಿ: Asia Cup Schedule: ಈ ವಾರ ಪ್ರಕಟಗೊಳ್ಳಲಿದೆ ಏಷ್ಯಾಕಪ್ ವೇಳಾಪಟ್ಟಿ; ಭಾರತ-ಪಾಕ್ ಪಂದ್ಯದ ತಾಣ ನಿಗದಿ
ಈಗಾಗಲೇ ರಾಜಸ್ಥಾನದ ಉದಯಪುರ, ಅಸ್ಸಾಮಿನ ಕುಮಾರ್ಗಮ್‌ನಲ್ಲಿ ಶೆರ್ಪಾ ಸಭೆಗಳು ನಡೆದಿದೆ. ಜಾಗತಿಕ ಮಟ್ಟದಲ್ಲಿ ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಹಾಗೂ ಸಾಂಸ್ಕೃತಿಕ ಹಿರಿಮೆ ಮತ್ತು ಉತ್ಪನ್ನಗಳನ್ನು ಉನ್ನತೀಕರಿಸಲು 3ನೇ ಶೆರ್ಪಾ ಸಭೆ ವಿಶ್ವವಿಖ್ಯಾತ ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಈಗಾಗಲೇ ಹಂಪಿ ಪಾರಂಪರಿಕ ಪ್ರದೇಶದಲ್ಲಿ ಶೆರ್ಪಾ ಸಭೆಗಾಗಿ ಅಂತಿಮ ಹಂತದ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಈ ಶೆರ್ಪಾ ಸಭೆಯು ವಸುದೈವ ಕುಟುಂಬಕಂ ಎಂಬ ಧ್ಯೇಯದಡಿ, ಒಂದು ಭೂಮಿ, ಒಂದು ಕುಟುಂಬ, ಒಂದೇ ಭವಿಷ್ಯ ಎಂಬ ಘೋಷವಾಕ್ಯದಡಿ ಶೃಂಗಸಭೆ ಆಯೋಜನೆ ಮಾಡಲಾಗುತ್ತಿದೆ. ಇಲ್ಲಿ 43 ದೇಶಗಳ ಉನ್ನತಮಟ್ಟದ ಅಧಿಕಾರವುಳ್ಳ ಪ್ರತಿನಿಧಿಗಳು ಭಾಗವಹಿಸಲಿದ್ದು, ಅಂತಾರಾಷ್ಟ್ರೀಯ ಮಟ್ಟದ ಹಲವಾರು ಉನ್ನತ ಸಭೆಗಳು ನಡೆಯಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: Actor Dhanush: ತಲೆ ಬೊಳಿಸಿಕೊಂಡ ಸೂಪರ್ ಸ್ಟಾರ್ ಧನುಷ್; ಹೊಸ ಲುಕ್ ಯಾತಕ್ಕಾಗಿ?
ರಾಜ್ಯದ ಪ್ರವಾಸೋದ್ಯಮ ಉನ್ನತೀಕರಣ ಜತೆಗೆ ಇಲ್ಲಿನ ಕಲೆ, ಸಂಸ್ಕೃತಿ ಐತಿಹಾಸಿಕ ಸ್ಮಾರಕಗಳ ಪ್ರಸ್ತುತಿ ಸೇರಿದಂತೆ ರಾಜ್ಯದ ಕರಕುಶಲತೆ, ಕೈಮಗ್ಗ ಹಾಗೂ ಒಂದು ಜಿಲ್ಲೆ ಒಂದು ಉತ್ಪನ್ನ ಅದರಲ್ಲೂ ವಿಶೇಷವಾಗಿ ಸಿರಿಧಾನ್ಯಗಳ ಮಹತ್ವ ಸಾರುವ ಜತೆಗೆ ಇವುಗಳ ಜಾಗತಿಕ ಪರಿಚಯ ಹಾಗೂ ಮಾರುಕಟ್ಟೆ ಕಂಡುಕೊಳ್ಳಲು ವಿಫುಲ ಅವಕಾಶ ಜಿ-20ಯಿಂದ ದೊರೆಯುತ್ತದೆ. ಆದ್ದರಿಂದ ಜಿ-20 ಸಭೆಯನ್ನು ವ್ಯವಸ್ಥಿತವಾಗಿ ಆಯೋಜಿಸಿ ಇದರ ಲಾಭವನ್ನು ಪಡೆದುಕೊಳ್ಳಬೇಕಾಗಿದೆ ಎಂದರು.
ಸಭೆಯ ಜತೆಗೆ ತೆರೆದ ವಸ್ತುಸಂಗ್ರಹಾಲಯವಾಗಿರುವ ಹಂಪಿಯ ಐತಿಹಾಸಿಕ ಮಹತ್ವವನ್ನು ಪ್ರತಿನಿಧಿಗಳಿಗೆ ಸಾರಲಾಗುತ್ತದೆ, ಸಾಂಸ್ಕೃತಿಕ ಕಲಾ ಪ್ರದರ್ಶನದ ಮೂಲಕ ಗತವೈಭವವನ್ನು ಪ್ರಸ್ತುತಪಡಿಸಲು ಸಿದ್ಧತೆ ಸಹ ಕೈಗೊಳ್ಳಲಾಗುತ್ತಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಇಲಾಖೆ ಸೇರಿದಂತೆ ಜಿಲ್ಲಾಡಳಿತದ ಸಹಕಾರದೊಂದಿಗೆ ಸಭೆ ಆಯೋಜನೆಗೊಳ್ಳುತ್ತಿದೆ. ಜಾಗತಿಕ ಮಟ್ಟದಲ್ಲಿ ಹಂಪಿಯನ್ನು ಪ್ರಸ್ತುತ ಪಡಿಸಲು ಶೆರ್ಪಾ ಸಭೆಯು ಅಚ್ಚುಕಟ್ಟಾಗಿ ನೆರವೇರಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಇದನ್ನೂ ಓದಿ: ವಿಸ್ತಾರ Explainer: France Riots: ಫ್ರಾನ್ಸ್ ಹೊತ್ತಿ ಉರಿಯುತ್ತಿರುವುದೇಕೆ?
ಈ ಸಂದರ್ಭದಲ್ಲಿ ಜಂಟಿ ಕಾರ್ಯದರ್ಶಿ ಆಶಿಶ್ ಸಿನ್ಹಾ, ಜಂಟಿ ಕಾರ್ಯದರ್ಶಿ (ಭದ್ರತೆ) ಭಾವನಾ ಸಕ್ಸೇನಾ, ಅಧೀನ ಕಾರ್ಯದರ್ಶಿ ಆಸಿಮ್ ಅನ್ವರ್ ಅವರು ಸ್ಥಳ ಪರಿಶೀಲನೆ ನಡೆಸಿದರು.
ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಾಮಪ್ರಸಾತ್ ಮನೋಹರ್ ವಿ., ವಿಜಯನಗರ ಜಿಲ್ಲಾಧಿಕಾರಿ ವೆಂಕಟೇಶ್ ಟಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಬಿ.ಎಲ್. ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು.