ಕೂಡ್ಲಿಗಿ: ಈ ದೇಶಕ್ಕಾಗಿ (Nation) ಅಸಂಖ್ಯಾತ ದೇಶ ಪ್ರೇಮಿಗಳ ತ್ಯಾಗ, ಬಲಿದಾನಗಳ ಮೂಲಕ ದೇಶವು ಸ್ವತಂತ್ರವಾಗಿದೆ (Independence) ಎಂದು ಶಾಸಕ ಡಾ. ಎನ್. ಟಿ. ಶ್ರೀನಿವಾಸ್ ಹೇಳಿದರು.
ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ಮಂಗಳವಾರ ತಾಲೂಕು ಆಡಳಿತವತಿಯಿಂದ ಏರ್ಪಡಿಸಿದ್ದ 77ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಭಾರತ ದೇಶವು ಇಂದು ಜಾಗತಿಕ ಮಟ್ಟದಲ್ಲಿ ಎಲ್ಲಾ ರಂಗಗಳಲ್ಲೂ ಮುಂಚೂಣಿಯಲ್ಲಿದ್ದು, ಚಂದ್ರನ ಅಂಗಳಕ್ಕೂ ಕಾಲಿಡುವ ಮೂಲಕ ಭಾರತೀಯರು ಪ್ರಬುದ್ದತೆಯನ್ನು ವಿಶ್ವಕ್ಕೆ ತೋರಿಸಿದ್ದೇವೆ ಎಂದ ಅವರು, ಕಾಂಗ್ರೆಸ್ ಸರ್ಕಾರ ರಾಜ್ಯದಲಿ ಆರ್ಥಿಕವಾಗಿ ಹಿಂದುಳಿದ ಜನರಿಗೆ ಹಲವು ಗ್ಯಾರಂಟಿಗಳನ್ನು ನೀಡಿ, ಅವರಿಗೆ ನೆರವಾಗಿದೆ ಎಂದರು.
ಕೂಡ್ಲಿಗಿ ವಿಧಾನಸಭಾ ಕ್ಷೇತ್ರವು ನಂಜುಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದಿದ್ದು, ಈಗಾಗಲೇ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮುಗಿಯುವ ಹಂತದಲ್ಲಿದ್ದು, ಶೀಘ್ರದಲ್ಲೇ ಅದನ್ನು ಲೋಕಾರ್ಪಣೆ ಮಾಡಿ ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: Mahila Satyagraha Smaraka: ಧೀರ ಮಹಿಳೆಯರ ಹೋರಾಟ ನೆನಪಿಸುವ ಮಾವಿನಗುಂಡಿಯ ಮಹಿಳಾ ಸತ್ಯಾಗ್ರಹ ಸ್ಮಾರಕ
ತಾಲೂಕಿನಲ್ಲಿ ಕೂಲಿ ಅರಸಿ ಅನೇಕರು ರಾಜ್ಯದ ನಾನಾ ಕಡೆ ಗುಳೇ ಹೋಗುತ್ತಿದ್ದು,ಅದನ್ನು ತಪ್ಪಿಸಲು ಗುಡಿ ಕೈಗಾರಿಕೆ ಹಾಗೂ ಸ್ವಯಂ ಉದ್ಯೋಗ ಕಲ್ಪಿಸಲು ಸರ್ಕಾರದ ಇಲಾಖೆಗಳ ಮೂಲಕ ಸಹಾಯ ಸೌಲಭ್ಯಗಳನ್ನು ಒದಗಿಸಲಾಗುವುದು. ರೈತರಿಗೆ ಕೃಷಿ ಮಾರುಕಟ್ಟೆಗೆ ಮೂಲ ಸೌಕರ್ಯಗಳನ್ನು ನೀಡಿ, ವ್ಯಾಪಾರ ವಹಿವಾಟು ನಡೆಸಲು ಕ್ರಮ ಕೈಗೊಳ್ಳಲು ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮುನ್ನ ಗಾಂಧಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕಕ್ಕೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಪುಷ್ಪ ನಮನ ಸಲ್ಲಿಸಿದರು. ನಂತರ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತೆರೆದ ವಾಹನದ ಮೂಲಕ ಪೊಲೀಸ್, ಗೃಹರಕ್ಷಕ ದಳ ಸೇರಿದಂತೆ ನಾನಾ ಶಾಲೆಯ ವಿಧ್ಯಾರ್ಥಿಗಳ ಧ್ವಜಾವಂದನೆ ಸ್ವೀಕರಿಸಿದರು.
ಇದನ್ನೂ ಓದಿ: Independence Day 2023; ಸಚಿನ್ರಿಂದ ಕೊಹ್ಲಿವರೆಗೆ ಸ್ವಾತಂತ್ರ್ಯ ಸಂಭ್ರಮ ಹೇಗಿತ್ತು!
ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ತಹಸೀಲ್ದರ್ ಟಿ.ಜಗದೀಶ್, ತಾಪಂ ಇಒ ವೈ. ರವಿಕುಮಾರ್, ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ, ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಪಿ.ಶಿವರಾಜ್, ಪಪಂ ಸದಸ್ಯರಾದ ಕಾವಲಿ ಶಿವಪ್ಪನಾಯಕ, ಚೌಡಮ್ಮ, ರೇಣುಕ ದುರುಗೇಶ್, ಲಕ್ಷ್ಮಿದೇವಿ,ಸಚಿನ್ ಕುಮಾರ್,ಲೀಲಾವತಿ ಪ್ರಮುಖ ಪ್ರಭಾಕರ್, ಮುಖಂಡರಾದ ಹಿರೇಕುಂಬಳಗುಂಟೆ ಉಮೇಶ್, ಡಿ.ಎಚ್.ದುರುಗೇಶ್, ಎಚ್.ವೀರಭದ್ರಪ್ಪ, ಟಿ.ಜಿ.ಮಲ್ಲಿಕಾರ್ಜುನ ಗೌಡ, ಮಾದಿಹಳ್ಳಿ ನಜೀರ್, ಎಸ್.ದುರುಗೇಶ್, ರಿಯಾಜ್ ಸೇರಿದಂತೆ ಅನೇಕರು ಇದ್ದರು.