ಗುಡೇಕೋಟೆ: ಗ್ರಾಮದ ಹೊರವಲಯದಲ್ಲಿರುವ ಶ್ರೀ ಸಾಯಿಬಾಬಾ ದೇವಸ್ಥಾನದಲ್ಲಿ (Saibaba temple) ಸಂಜೆ ವೇಳೆ ಕರಡಿಯೊಂದು (Bear) ಪ್ರತ್ಯಕ್ಷವಾಗಿರುವುದು ಸಿಸಿ ಕ್ಯಾಮೆರಾದಲ್ಲಿ (CC camera) ದಾಖಲಾಗಿದೆ.
ಗುಡೇಕೋಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ದಿನನಿತ್ಯ ಕರಡಿಗಳು ಕಾಣಿಸಿಕೊಳ್ಳುತ್ತಿರುವುದು ಗ್ರಾಮಸ್ಥರಿಗೆ ತಲೆನೋವಾಗಿ ಪರಿಣಮಿಸಿದೆ. ಗ್ರಾಮದ ಕೆರೆ ಕೊಡಿ ಹತ್ತಿರದಲ್ಲಿರುವ ಶ್ರೀ ಸಾಯಿಬಾಬಾ ದೇವಸ್ಥಾನ ಬಳಿ ಶನಿವಾರ ಸಂಜೆ 8:30 ರ ಸುಮಾರಿಗೆ ಕರಡಿಯೊಂದು ದೇವಸ್ಥಾನದ ಒಳಗೆ ಹೋಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ದೇವಸ್ಥಾನದಲ್ಲಿ ಕರಡಿ ಪ್ರತ್ಯಕ್ಷವಾಗಿರುವ ಸಂಗತಿಯು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದ್ದು, ಇದರಿಂದ ಗ್ರಾಮಸ್ಥರು ಸಂಜೆ, ರಾತ್ರಿ ವೇಳೆ ಹೊರಗಡೆ ಬರಲು ಹೆದರುತ್ತಿದ್ದಾರೆ. ಕಾಡು ಪ್ರಾಣಿಗಳು ನಾಡಿಗೆ ಬರುವುದನ್ನು ತಪ್ಪಿಸಲು ಇಲಾಖೆ ಕ್ರಮ ಕೈಗೊಳ್ಳಬೇಕು,ಇನ್ನಾದರೂ ಅರಣ್ಯ ಇಲಾಖೆ ಇತ್ತ ಗಮನ ಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.