ವಿಜಯನಗರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (MGNREGA) ಕೂಲಿ ಕಾರ್ಮಿಕರಿಗೆ (Laborers) ಆರೋಗ್ಯ ಸೌಲಭ್ಯ (Health facility) ಕಲ್ಪಿಸುವ ನಿಟ್ಟಿನಲ್ಲಿ ಆಯೋಜಿಸಿರುವ “ಗ್ರಾಮ ಆರೋಗ್ಯ” ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ವಿಜಯನಗರ ಜಿಲ್ಲಾ ಪಂಚಾಯತ್ ಸಿಇಒ ಸದಾಶಿವ ಪ್ರಭು ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಈಗಾಗಲೇ ಜಿಲ್ಲೆಯಲ್ಲಿ ಚಾಲನೆ ನೀಡಲಾಗಿರುವ ಗ್ರಾಮ ಆರೋಗ್ಯ ಯೋಜನೆಯಡಿ ನರೇಗಾ ಕೂಲಿ ಕಾರ್ಮಿಕರಿಗೆ ಗ್ರಾಮ ಆರೋಗ್ಯ ಶಿಬಿರದ ಪ್ರಗತಿ ಪರಿಶೀಲಿಸಿ, ಬಳಿಕ ಆರೋಗ್ಯ ಅಭಿಯಾನದ ಜಾಗೃತಿ ಪೋಸ್ಟರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಈ ಬಗ್ಗೆ ಜಿಲ್ಲೆಯಾದ್ಯಂತ ಹೆಚ್ಚಿನ ಪ್ರಚಾರ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ ಸಿಇಒ ಸದಾಶಿವಪ್ರಭು, ಕೂಲಿಕಾರರಿಗೆ ಆರೋಗ್ಯ, ಸುರಕ್ಷತೆಯ ದೃಷ್ಟಿಯಿಂದ ಗ್ರಾಮೀಣ ಆಯುಕ್ತಾಲಯದಿಂದ ಕೂಲಿಕಾರರಿಗೆ ‘ಆರೋಗ್ಯ ಅಮೃತ ಅಭಿಯಾನ’ ದಡಿ ರಾಷ್ಟ್ರೀಯ ಆರೋಗ್ಯ ಮಿಷನ್, ಕೆಎಚ್‌ಪಿಟಿ (ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್) ಸಹಯೋಗದಲ್ಲಿ ಈಗಾಗಲೇ ಮೇ 22 ರಿಂದ ಚಾಲನೆ ದೊರೆತಿದ್ದು, ಜೂನ್- 22ರವರೆಗೆ ನಿರಂತರವಾಗಿ ನಡೆಯಲಿದೆ ಎಂದರು.
ಇದನ್ನೂ ಓದಿ: India-China talks : ಗಡಿಯಲ್ಲಿ ಚೀನಾ ನಿರ್ಮಿಸಿದ ಏರ್‌ಫೀಲ್ಡ್, ರೈಲ್ವೆ, ಕ್ಷಿಪಣಿ ನೆಲೆಗಳ ಚಿತ್ರ ಸೆರೆಹಿಡಿದ ಭಾರತದ ಉಪಗ್ರಹ
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೂಲಿಕಾರ್ಮಿಕರಿಗೆ ಕಾಮಗಾರಿ ಸ್ಥಳದಲ್ಲಿಯೇ ಆರೋಗ್ಯ ತಪಾಸಣೆ ಮಾಡಿಸುವ ಯೋಜನೆ ಇದಾಗಿದೆ, ಆರೋಗ್ಯ ತಪಾಸಣೆಗೆ ಬೇಕಾಗುವ ಪರಿಕರಗಳನ್ನು ಗ್ರಾ.ಪಂ.ಯ ವಿವಿಧ ಅನುದಾನದಲ್ಲಿ ಖರೀದಿಸಲು ಅವಕಾಶವಿದ್ದು ಮೊದಲ ಆದ್ಯತೆಯಲ್ಲಿ ಅವುಗಳನ್ನು ಖರಿದೀಸಲು ತಿಳಿಸಲಾಗಿದೆ. ಕಾಮಗಾರಿ ಸ್ಥಳದಲ್ಲಿ ಅರೋಗ್ಯ ಶಿಬಿರಕ್ಕೆ ಬೇಕಾದ ಮೂಲ ಸೌಲಭ್ಯಗಳ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದರು.
ಜಿಲ್ಲೆಯ 137 ಗ್ರಾಮ ಪಂಚಾಯಿತಿಗಳಲ್ಲಿ 58,910 ಕೂಲಿ ಕಾರ್ಮಿಕರು ಇದರ ಪ್ರಯೋಜನ ಪಡೆಯಲಿದ್ದಾರೆ. ಜಿಲ್ಲೆಯ 101 ಸ್ಥಳಗಳಲ್ಲಿ ಈಗಾಗಲೇ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ನಡೆದಿದೆ ಎಂದು ಮಾಹಿತಿ ನೀಡಿದರು.
ಕೂಲಿ ಕಾರ್ಮಿಕರಿಗೆ ಎತ್ತರ ಹಾಗೂ ತೂಕಗಳ ಪರಿಶೀಲನೆಯ ಜತೆಗೆ ಹಿಮಗ್ಲೋಬಿನ್, ಅನಿಮಿಯಾ, ಮಧುಮೇಹ, ಅಧಿಕ ರಕ್ತದೊತ್ತಡ, ಕಣ್ಣು ಮೂಗು, ಗಂಟಲು ತಪಾಸಣೆಗಳನ್ನು ನಡೆಸಲಾಗುತ್ತಿದ್ದು, ತಪಾಸಣೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ವೈದ್ಯರು ಶಿಫಾರಸು ಮಾಡಿದರೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆಯೂ ಇದೆ.
ಇದನ್ನೂ ಓದಿ: Rain News: ಹಾವೇರಿಯಲ್ಲಿ ಸಿಡಿಲಿಗೆ ಬಾಲಕ ಗಂಭೀರ; ಶಿವಮೊಗ್ಗ, ರಾಮನಗರ ಸೇರಿ ಹಲವೆಡೆ ಭಾರಿ ಹಾನಿ
ಆರೋಗ್ಯ ತಪಾಸಣೆಯ ಬಳಿಕ ಕೂಲಿ ಕಾರ್ಮಿಕರಿಗೆ ಅವರ ಆರೋಗ್ಯದ ನಾಲ್ಕು ಪುಟಗಳ ಆರೋಗ್ಯ ಕಾರ್ಡ್ ನೀಡಲಿದ್ದು, ಅದರಲ್ಲಿ ಪರೀಕ್ಷೆಯ ದಿನಾಂಕ, ಆರೋಗ್ಯ ವಿವರಗಳ ಜತೆಗೆ ವೈದ್ಯರ ಸಲಹೆಯ ವಿವರ ಆ ಕಾರ್ಡ್‌ನಲ್ಲಿ ಇರುತ್ತದೆ. ವರ್ಷಕ್ಕೆ ಒಂದು ಬಾರಿ ಆರೋಗ್ಯ ತಪಾಸಣೆ ಮಾಡಲಾಗುವುದು. ಆರೋಗ್ಯ ಸಮಸ್ಯೆಗಳು ತೀವ್ರವಾಗಿದ್ದರೆ, ವರ್ಷಕ್ಕೆ ಎರಡು ಬಾರಿ ಆರೋಗ್ಯ ತಪಾಸಣೆ ಕೈಗೊಳ್ಳಲಾಗುವುದು ಎಂದು ಹೇಳಿದರು.
ಗ್ರಾಮಗಳಲ್ಲಿ ಬಾಲ್ಯವಿವಾಹಗಳ ಬಗ್ಗೆ, ಬಯಲು ಶೌಚಾಲಯಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಕ್ರಮ ಕೈಗೊಂಡು ಜನರಲ್ಲಿ ಅರಿವು ಮೂಡಿಸಬೇಕು. ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಬೇಕು ಎಂದು ಜಿಪಂ ಸಿಇಒ ತಿಳಿಸಿದರು.
ಇದನ್ನೂ ಓದಿ: Vastu Tips : ಮನೆಯಲ್ಲಿ ಈ ಸಂಕೇತಗಳು ಕಂಡರೆ ಬೇಡ ನಿರ್ಲಕ್ಷ್ಯ; ವಾಸ್ತು ದೋಷದಿಂದಲೂ ಹೀಗಾಗಬಹುದು!
ಸಭೆಯಲ್ಲಿ ಉಪ ಕಾರ್ಯದರ್ಶಿ ತಿಮ್ಮಪ್ಪ, ಜಿಲ್ಲಾ ಮತ್ತು ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು, ಸಮಾಜ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಕೆಎಚ್‌ಟಿಪಿ ಸಿಬ್ಬಂದಿ ಸೇರಿದಂತೆ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಮತ್ತು ತಾಲೂಕು ಐಇಸಿ ಸಂಯೋಜಕರು ಭಾಗವಹಿಸಿದ್ದರು.