Site icon Vistara News

Vijayanagara News: ಹರಪನಹಳ್ಳಿಯಲ್ಲಿ ಕೆಡಿಪಿ ಸಭೆ; ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಜಮೀರ್ ಅಹ್ಮದ್

KDP meeting at Harpanahalli by District Incharge Minister Zameer Ahmed Khan

ಹರಪನಹಳ್ಳಿ: ನೀವು ಫೀಲ್ಡ್‌ನಲ್ಲಿರುತ್ತಿರೋ, ಮನೆಯಲ್ಲಿರುತ್ತಿರೋ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್‌ ಖಾನ್‌, ಕೆಡಿಪಿ ಸಭೆಯಲ್ಲಿ (KDP meeting) ಮಾಹಿತಿ ನೀಡಲು ತಡಬಡಾಯಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕೆಡಿಪಿ ಸಭೆಗೆ ಸೂಕ್ತ ಮಾಹಿತಿ ನೀಡದ ತಾಪಂ ಇಒ ಪ್ರಕಾಶ್ ನಾಯ್ಕ್ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ನೀವು ಫೀಲ್ಡ್ ನಲ್ಲಿ ಇರ್ತೀರಾ, ಮನೆಯಲ್ಲಾ ಎಂದು ಪ್ರೆಶ್ನೆ ಮಾಡಿದರು.

ಅಲ್ಪಸಂಖ್ಯಾತರ ಇಲಾಖೆ ವ್ಯಾಪ್ತಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ 10 ಕೋಟಿ ರೂ. ವೆಚ್ಚದಲ್ಲಿ ಗೃಹ ಮಂಡಳಿಯಿಂದ ಕೆರೆ ಅಂಗಳದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು ಇನ್ನೂ ಸಾಕಷ್ಟು ಕಾಮಗಾರಿ ಬಾಕಿ ಇದ್ದರೂ 4.50 ಕೋಟಿ ರೂ. ಪಾವತಿ ಮಾಡಿರುವ ಬಗ್ಗೆ ಸಿಡಿಮಿಡಿಗೊಂಡ ಸಚಿವರು, ಕೆರೆ ಅಂಗಳದಲ್ಲಿ ಕಟ್ಟಡ ನಿರ್ಮಾಣ ಹೇಗೆ ಸಾಧ್ಯ. ಏನಾದರೂ ಆದರೆ ನೀವೇ ಹೊಣೆ ಎಂದು ಗೃಹ ಮಂಡಳಿ ಅಭಿಯಂತರ ಸುಧೀರ್ ಅವರಿಗೆ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: Mahila Satyagraha Smaraka: ಧೀರ ಮಹಿಳೆಯರ ಹೋರಾಟ ನೆನಪಿಸುವ ಮಾವಿನಗುಂಡಿಯ ಮಹಿಳಾ ಸತ್ಯಾಗ್ರಹ ಸ್ಮಾರಕ

ಕಾಮಗಾರಿ ಗುಣಮಟ್ಟ ವೀಕ್ಷಣೆಗಾಗಿ ಬೆಂಗಳೂರಿನಿಂದ ತಂಡ ಕಳುಹಿಸುವುದಾಗಿ ತಿಳಿಸಿದರು. ಜಿಲ್ಲೆಯ ಹಾಸ್ಟೆಲ್ ಗಳಲ್ಲಿ ಅಡುಗೆ ಕೋಣೆ, ಶೌಚಾಲಯ, ಹೆಚ್ಚುವರಿ ಕೊಠಡಿ ನಿರ್ಮಾಣ ಸೇರಿ 48 ಕೋಟಿ ರೂ ಮೊತ್ತದ ಕಾಮಗಾರಿ ಬೇಗ ಪೂರ್ಣಗೊಳಿಸಿ ಎಲ್ಲ ಹಾಸ್ಟೆಲ್ ಗಳಲ್ಲಿ ಬಯೋ ಮೆಟ್ರಿಕ್ ಕಡ್ಡಾಯ ಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಿ ಕೊಡಿ

ಹೊಸಪೇಟೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಇರುವ ಘೋಷಿತ ಕೊಳೆಗೇರಿಗಳು, ಅಘೋಷಿತ ಕೊಳೆಗೇರಿಗಳು, ಅಲ್ಲಿ ನಿರ್ಮಾಣ ಮಾಡುತ್ತಿರುವ ಮನೆಗಳ ಸಂಖ್ಯೆ, ಅಗತ್ಯ ವಿರುವ ಮೂಲ ಸೌಕರ್ಯ ಕುರಿತು ಸಮಗ್ರ ವರದಿ ಸಲ್ಲಿಸಿ ಎಂದು ಇದೇ ಸಂದರ್ಭದಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿ ಶಿವಕುಮಾರ್ ಅವರಿಗೆ ಸೂಚನೆ ನೀಡಿದರು.

ಹರಪನಹಳ್ಳಿಯಲ್ಲಿ ಭೂ ಸೇನಾ ನಿಗಮ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವ್ಯಾಪ್ತಿಯಲ್ಲಿ ಕೈಗೊಂಡಿರುವ ಜಲ ಜೀವನ್ ಮಿಷನ್ ಕಾಮಗಾರಿಗಳಲ್ಲಿ ಸಾಕಷ್ಟು ಲೋಪ ಇರುವ ಬಗ್ಗೆ ಶಾಸಕಿ ಲತಾ ಮಲ್ಲಿಕಾರ್ಜುನ್ ಪ್ರಸ್ತಾಪ ಮಾಡಿದಾಗ, ಈ ಮೂರು ಇಲಾಖೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಗತಿ ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿ ದಿವಾಕರ್ ಅವರಿಗೆ ಸೂಚನೆ ನೀಡಿದರು. ಶಾಸಕರ ಸಮ್ಮುಖದಲ್ಲಿ ಸಭೆ ನಡೆಸಿ ಲೋಪ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನಿರ್ದೇಶನ ನೀಡಿದರು.

ನಗರ ಯೋಜನೆ ಅಧಿಕಾರಿಗಳು ಸಭೆಗೆ ಬಾರದ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಹರಪನಹಳ್ಳಿಯಲ್ಲಿ ಹೆಚ್ಚು ಸಮಸ್ಯೆ ಇದ್ದು ಇಲ್ಲಿನ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.

ಇದನ್ನೂ ಓದಿ: Weather Report : ರಾಜ್ಯದ ಹಲವೆಡೆ 50-50 ಮಳೆಯಾಟ!

ಹೆಚ್ಚುವರಿ ಬಸ್ ಒದಗಿಸಿ

ಶಕ್ತಿ ಯೋಜನೆ ಜಾರಿಯಾದ ನಂತರ ಶಾಲಾ ವಿದ್ಯಾರ್ಥಿ ಗಳಿಗೆ ಬಸ್ ಕೊರತೆ ಉಂಟಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದು ಹೆಚ್ಚುವರಿ ಬಸ್ ಸೇವೆ ಒದಗಿಸಿ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ಸಚಿವರು ಸವಲತ್ತು ವಿತರಿಸಿದರು.

ಅಂಜುಮನ್ ಸಂಸ್ಥೆಯ ಪಾಲಿ ಕ್ಲಿನಿಕ್ ಸಚಿವರು ಉದ್ಘಾಟಿಸಿದರು. ಬಳಿಕ ಆದರ್ಶ ಶಾಲೆಗೆ ಭೇಟಿ ನೀಡಿ ಕಂಪ್ಯೂಟರ್ ಲ್ಯಾಬ್ ಗೆ ಚಾಲನೆ ನೀಡಿದರು. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಅನಂತರ ತೆಲಿಗಿಯಲ್ಲಿ ನಾಡಕಛೇರಿ, ಹರಪನಹಳ್ಳಿ ನೂತನ ಪೊಲೀಸ್ ಠಾಣೆ ಉದ್ಘಾಟನೆ ಮಾಡಿದರು.

ಇದನ್ನೂ ಓದಿ: Ireland T20 series: ಐರ್ಲೆಂಡ್​ಗೆ ತೆರಳಿದ ಟೀಮ್​ ಇಂಡಿಯಾ; ಬುಮ್ರಾಗೆ ಅಗ್ನಿಪರೀಕ್ಷೆ

ಶಾಸಕಿ ಲತಾ ಮಲ್ಲಿಕಾರ್ಜುನ, ಜಿಲ್ಲಾಧಿಕಾರಿ ದಿವಾಕರ್, ಎಸ್ ಪಿ ಹರಿಬಾಬು, ಜಿಲ್ಲಾ ಪಂಚಾಯತ್ ಸಿಇಒ ಸದಾಶಿವ ಪ್ರಭು ಉಪಸ್ಥಿತರಿದ್ದರು.

Exit mobile version