ಕೂಡ್ಲಿಗಿ: ತಾಲೂಕಿನ ಎಲ್ಲಾ ಸರ್ಕಾರಿ ಪ್ರಾಥಮಿಕ (Primary) ಹಾಗೂ ಪೌಢಶಾಲೆಗಳಿಗೆ (High School) ಪಠ್ಯ ಪುಸ್ತಕ (Text book) ಹಾಗೂ ಸಮವಸ್ತ್ರಗಳನ್ನು (Uniform) ವಿತರಣೆ ಮಾಡಿದ್ದೇವೆ ಎಂದು ಪ್ರಭಾರಿ ಬಿಇಒ ಸಿ.ಬಸವರಾಜ ಮಾಹಿತಿ ನೀಡಿದರು.
ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಮಂಗಳವಾರ ತಾ.ಪಂ ಆಡಳಿತಾಧಿಕಾರಿ ಎಂ.ಆರ್.ವಿಜಯಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ತಿಳಿಸಿದರು.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಈಗಾಗಲೇ ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಿಗೂ ಪಠ್ಯ ಪುಸ್ತಕಗಳನ್ನು ಹಾಗೂ ಸಮವಸ್ತ್ರಗಳನ್ನ ವಿತರಿಸಿದ್ದು, ಪಠ್ಯ ಚಟುವಟಿಕೆಗಳನ್ನು ಶಿಕ್ಷಕರು ಈಗಾಗಲೇ ಸಮರ್ಪಕವಾಗಿ ನಡೆಸುತ್ತಿದ್ದಾರೆ ಎಂದರು.
ಇದನ್ನೂ ಓದಿ: Viral News : 5 ಕೋಟಿ ರೂಪಾಯಿ ಮೌಲ್ಯದ ರೈಲು ಎಂಜಿನ್ ಅನ್ನೇ ಕದ್ದೊಯ್ದ ಕಳ್ಳರು!
2023ನೇ ಶೈಕ್ಷಣಿಕ ವರ್ಷದ ಎಸ್ಎಸ್ಎಲ್‌ಸಿ ಫಲಿತಾಂಶ ರಾಜ್ಯಕ್ಕೆ ಐದನೇ ಸ್ಥಾನದಲ್ಲಿ ಬಂದಿದ್ದರೆ, ಕಲಬುರಗಿ ವಿಭಾಗ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿ ಇದ್ದೇವೆ ಎಂದರು.
ಫಲಿತಾಂಶದ ಕುರಿತು ಆಡಳಿತಾಧಿಕಾರಿ ಎಂ.ಆರ್. ವಿಜಯಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಈ ಸಾಧನೆ ಬಗ್ಗೆ ಮುಕ್ತ ಕಂಠದಿಂದ ಹೊಗಳಿದರು, ಅಲ್ಲದೆ ಮುಂದಿನ ವರ್ಷದ ಫಲಿತಾಂಶದಲ್ಲಿ ಕೂಡ ಇನ್ನಷ್ಟು ಪ್ರಗತಿ ಸಾಧಿಸುವಂತೆ ಬಿಇಒ ಸಿ.ಬಸವರಾಜ ಅವರಿಗೆ ಸೂಚಿಸಿದರು.
ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೂವರು ವಿಧ್ಯಾರ್ಥಿಗಳನ್ನು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನಿಸುವಂತೆ ಸೂಚನೆ ನೀಡಿದರು.
ಬಳಿಕ ಇತ್ತೀಚೆಗೆ ತಾಲೂಕಿನ ಬಡೇಲಡಕು ಗ್ರಾಮದಲ್ಲಿನ ದೊಡ್ಡ ಗೊಲ್ಲರ ಹಟ್ಟಿಯಲ್ಲಿ ವಾಂತಿ,ಭೇದಿ ಪ್ರಕರಣ ನಡೆದು 30 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಬಗ್ಗೆ ಟಿಎಚ್ಒ ಡಾ.ಪ್ರದೀಪ್ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ಅವರು, ಗ್ರಾಮದಲ್ಲಿ ಕುಡಿಯುವ ನೀರಿನ ಮೂಲಕ ಈ ತೊಂದರೆ ಸೃಷ್ಟಿಯಾಗಿದ್ದು, ಜನರು ಶುದ್ದ ನೀರಿನ ಘಟಕ ಇದ್ದರೂ ಆ ನೀರನ್ನು ಕುಡಿಯಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಶುದ್ಧ ನೀರನ್ನು ಬಳಸುವಂತೆ ತಿಳಿಸಿದೆ, ಗ್ರಾಪಂ ಅಧಿಕಾರಿಗಳು ಸಹ ಸ್ವಚ್ಚತೆ ಸೇರಿದಂತೆ ಕುಡಿಯುವ ನೀರಿನ ಪೈಪ್ ಲೈನ್ ಸರಿಪಡಿಸಲು ಸೂಚನೆ ನೀಡಿ, ಗ್ರಾಮದಲ್ಲಿ ಆರೋಗ್ಯ ಇಲಾಖೆ ತಾತ್ಕಾಲಿಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಿ ಜನರ ಆರೋಗ್ಯವನ್ನು ತಪಾಸಣೆ ಮಾಡಿ, ಸೂಕ್ತ ಚಿಕಿತ್ಸೆ ನೀಡಿದ್ದು, ಈಗ ಆರೋಗ್ಯ ತಹಬದಿಗೆ ಬಂದಿದೆ ಎಂದು ತಿಳಿಸಿದರು.
ಇದನ್ನೂ ಓದಿ: IKEA Bengaluru : ಗ್ರಾಹಕರ ಫುಡ್ ಟೇಬಲ್‌ಗೆ ಬಿದ್ದ ಸತ್ತ ಇಲಿ, ಕ್ಷಮೆ ಕೋರಿದ ಐಕಿಯ
ಮಳೆಗಾಲದ ಕಾರಣ ಪದೇಪದೆ ವಿದ್ಯುತ್ ಸಮಸ್ಯೆ ಎದುರಾಗದಂತೆ ಜೆಸ್ಕಾಂ ಎಇಇ ಪ್ರಕಾಶ ಪತ್ತೇನೂರು ಅವರಿಗೆ ಸೂಚನೆ ನೀಡಿದರು. ಇದಕ್ಕೆ ಉತ್ತರಿಸಿದ ಅವರು ಗಾಳಿ, ಮಳೆಗೆ ತಾಲೂಕಿನ ಕೆಲವು ಗ್ರಾಮಗಳಲ್ಲಿ ಮೇ, ಜೂನ್ ನಲ್ಲಿ ಸಮಸ್ಯೆ ತಲೆದೋರಿತ್ತು. ಆದರೆ ಸಿಬ್ಬಂದಿಗಳು ಅದನ್ನು ಈಗಾಗಲೇ ಸರಿಪಡಿಸಿದ್ದು, ವಿದ್ಯುತ್ ಪರಿವರ್ತಕಗಳು ಕೂಡ ಸುಸ್ಥಿತಿಯಲ್ಲಿ ಇರುವಂತೆ ಕ್ರಮವಹಿಸಿದ್ದಾರೆ. ಹೊಸಹಳ್ಳಿ ಹೋಬಳಿಯಲ್ಲಿ ಸ್ವಲ್ಪ ವಿದ್ಯುತ್ ಸಮಸ್ಯೆ ಇತ್ತು, ಅದನ್ನ ಸಹ ಸರಿಪಡಿಸಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಎಇಇ ಪ್ರಸನ್ನ ಮಾತಾನಾಡಿ, ತಾಲೂಕಿನಲ್ಲಿ ಈ ಬಾರಿ ಕುಡಿಯುವ ನೀರಿನ ತೊಂದರೆ ಎಲ್ಲೂ ಎದುರಾಗಿಲ್ಲ, ಕಾರಣ ಹಿಂದಿನ ವರ್ಷದಲ್ಲಿ ಉತ್ತಮ ಮಳೆಯಾಗಿ ಈ ಭಾಗದ ಕೆರೆ, ಕಟ್ಟೆಗಳು ತುಂಬಿ ಅಂತರ್ಜಲ ಹೆಚ್ಚಿ ಕೊಳವೆ ಬಾವಿ ನೀರು ಉತ್ತಮವಾಗಿದೆ. ಆದ್ದರಿಂದ ಎಲ್ಲಾ ಹಳ್ಳಿಗಳಲ್ಲೂ ನೀರಿನ ಅಭಾವ ಇಲ್ಲ ಎಂದರು.
ಸರ್ಕಾರದ ಜಲ ಜೀವನ್ ಕಾಮಾಗಾರಿ ಆರಂಭವಾಗಿದ್ದು, ತಾಲೂಕಿನ ಬಹುತೇಕ ಹಳ್ಳಿಗಳ ಜನರಿಗೆ ಕುಡಿಯುವ ನೀರಿನ ತೊಂದರೆ ಮುಂದಿನ ದಿನಗಳಲ್ಲಿ ಎದುರಾಗದು ಎಂದು ಮಾಹಿತಿ ನೀಡಿದರು.
ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ತಾಪಂ ಇಒ ವೈ. ರವಿಕುಮಾರ್ ವೇದಿಕೆಯಲ್ಲಿದ್ದರು.
ಇದನ್ನೂ ಓದಿ: Road Accident : ಬೈಕ್‌ಗೆ ಡಿಕ್ಕಿ ಹೊಡೆದ ಟ್ರಾಕ್ಟರ್; ಪ್ರಾಣ ಬಿಟ್ಟ ಸವಾರ
ಸಭೆಯಲ್ಲಿ ತಾ.ಪಂ ಸಿಬ್ಬಂದಿಗಳಾದ ವೈ. ಅಶ್ವತ್ಥ್ ಕುಮಾರ್, ವೆಂಕಟೇಶ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.