ಕೂಡ್ಲಿಗಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್‌ಪೂರ್ವ ವಿದ್ಯಾರ್ಥಿ ನಿಲಯಕ್ಕೆ (Hostel) ದಿಢೀರ್ ಭೇಟಿ (Surprise visit) ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ಹಾಸ್ಟೆಲ್‌ನಲ್ಲಿ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಬಂಡೇ ಬಸಾಪುರ ರಸ್ತೆ ತಾಂಡಾ ಬಳಿಯಿರುವ ವಸತಿ ನಿಲಯದಲ್ಲಿ ಮಕ್ಕಳಿಗೆ ಹಾಸಿಗೆ ನೀಡದೆ ಬೆಡ್ ಶೀಟ್ ಮೇಲೆ ಮಲಗಿಸಿರುವುದು ಕಂಡು ಸಿಡಿ ಮಿಡಿ ಗೊಂಡರು, ಇದೇ ವೇಳೆ ಹಾಸ್ಟೆಲ್ ವಾರ್ಡನ್ ಗುರುರಾಜ್ (ಗುರಪ್ಪ) ಅವರನ್ನು ಸ್ಥಳದಲ್ಲೇ ಅಮಾನತು ಮಾಡಲು ಆದೇಶ ಮಾಡಿದರು.
ತಾಲೂಕು ವಿಸ್ತರಣಾಧಿಕಾರಿ ಸುದೀಪ್ ಅವರು ಭೇಟಿ ಸಂದರ್ಭದಲ್ಲಿ ಗೈರು ಹಾಜರು ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿ ಅವರ ವಿರುದ್ದವೂ ಕ್ರಮ ಕೈಕೊಳ್ಳಲು ಸಚಿವರು ನಿರ್ದೇಶನ ನೀಡಿದರು. ಸುದೀಪ್ ಅವರಿಗೆ ನೋಟಿಸ್ ಜಾರಿ ಮಾಡುವುದಾಗಿ ಜಿಲ್ಲಾಧಿಕಾರಿ ದಿವಾಕರ್ ತಿಳಿಸಿದರು.
ಇದನ್ನೂ ಓದಿ: Gruha Lakshmi Scheme : ಆಗಸ್ಟ್ 27ಕ್ಕೆ ಎಲ್ಲರ ಮನೆಗೆ ಗೃಹಲಕ್ಷ್ಮಿ; ಸಿಗಲಿದೆ ಪಿಂಕ್ ಸ್ಮಾರ್ಟ್ ಕಾರ್ಡ್!
ಇದೇ ಸಂದರ್ಭದಲ್ಲಿ ವಸತಿ ನಿಲಯದ ಆಹಾರ ದಾಸ್ತಾನು ಕೊಠಡಿಗೆ ತೆರಳಿ ಪರಿಶೀಲನೆ ನಡೆಸಿದ ಸಚಿವ ಜಮೀರ್ ಅಹಮದ್ ಖಾನ್, ವಸತಿ ನಿಲಯದ ವಿದ್ಯಾರ್ಥಿಗಳ ಬಳಿ ಊಟ ತಿಂಡಿ ಇತರೆ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದುಕೊಂಡರು.
ನಂತರ ಹಳೇ ಸಾರ್ವಜನಿಕ ಆಸ್ಪತ್ರೆ ಕಟ್ಟಡ ಜಾಗ ಪರಿಶೀಲನೆ ನಡೆಸಿ ಅಲ್ಲಿ ಹೊಸದಾಗಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣ ಹಾಗೂ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಪ್ರಸ್ತಾವನೆ ಸಿದ್ದಪಡಿಸಲು ಸೂಚನೆ ನೀಡಿದರು. ಬಳಿಕ ತಾಲೂಕು ಆಸ್ಪತ್ರೆಗೂ ಭೇಟಿ ನೀಡಿ ಪರಿಶೀಲನೆ ನಡೆಸಿ, ವ್ಯವಸ್ಥೆ ಬಗ್ಗೆ ರೋಗಿಗಳ ಬಳಿ ಮಾಹಿತಿ ಪಡೆದರು.
ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿ ಹೆಚ್ಚುವರಿ ಕೊಠಡಿ ನಿರ್ಮಾಣ, ಉಪನ್ಯಾಸಕರ ನೇಮಕಾತಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಇದನ್ನೂ ಓದಿ: Beauty Product Awareness: ಆನ್‌ಲೈನ್‌ನಲ್ಲಿ ಬ್ಯೂಟಿ ಪ್ರಾಡಕ್ಟ್ ಆರ್ಡರ್ ಮಾಡುವಾಗ ಇದು ತಿಳಿದಿರಲಿ
ಜಿಲ್ಲೆಯ ಎಲ್ಲ ಹಾಸ್ಟೆಲ್ ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಹಾಜರಾತಿ ಖಾತರಿಗಾಗಿ ಬಯೋಮೆಟ್ರಿಕ್ ವ್ಯವಸ್ಥೆ ಕಡ್ಡಾಯಗೊಳಿಸಲು ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಸೂಚನೆ ನೀಡಿದರು. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ಸೌಲಭ್ಯ ಕೊರತೆ ಸಹಿಸುವುದಿಲ್ಲ, ಲೋಪ ಆದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಾಕೀತು ಮಾಡಿದರು.